ಬೆಂಗಳೂರು : ನಗರದಲ್ಲಿ ವಿವಿಧ ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿ ಅನ್ಯರಾಜ್ಯಗಳಿಗೆ ತಲೆಮರೆಸಿಕೊಳ್ಳುತ್ತಿರುವ ಆರೋಪಿಗಳನ್ನು ಕಟ್ಟಿ ಹಾಕಲು ಮತ್ತು ಅನುಮಾನಸ್ಪಾದ ವ್ಯಕ್ತಿಗಳ ಮೇಲೆ ನಿಗಾವಹಿಸಲು ರೈಲ್ವೆ ಪೊಲೀಸರು ಹೊಸ ಪ್ಲ್ಯಾನ್ ಮಾಡಿದ್ದಾರೆ.
ಕಳ್ಳತನ ಮಾಡಿಕೊಂಡು ಎಸ್ಕೇಪ್ ಆಗೋದು ಕ್ರಿಮಿನಲ್‌ಗಳಿಗೆ ಕಾಮನ್. ಅದು ಈ ಕಳ್ಳರು ಹೆಚ್ಚಾಗಿ ರೈಲುಗಳಲ್ಲೇ ಊರು ಬಿಟ್ಟು ಪರಾರಿಯಾಗೋದು. ಆದರೆ, ಇನ್ಮುಂದೆ ಈ ಕ್ರಿಮಿನಲ್ಸ್ ರೈಲ್ವೆ ಸ್ಟೇಷನ್ಗೆ ಬರಬೇಕಾದರೆ ಯೋಚನೆ ಮಾಡಲೇಬೇಕು. ಇಲ್ಲದಿದ್ದರೆ ಸಿಕ್ಕಿಬೀಳೋದು ಗ್ಯಾರಂಟಿ.
ನಗರದ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೈಲ್ವೆ ನಿಲ್ದಾಣ ಇನ್ಮುಂದೆ ಕ್ರಿಮಿನಲ್ಗಳ ಪಾಲಿಗೆ ದುಃಸ್ವಪ್ನವಾಗಲಿದೆ. ಅಪರಾಧ ಕೃತ್ಯ ಎಸಗಿ ಸುಲಭವಾಗಿ ರೈಲು ಮೂಲಕ ಬೇರೆ ರಾಜ್ಯಗಳಿಗೆ ಹೋಗಬಹುದು ಅಂದುಕೊಂಡವರಿಗೆ ರೈಲ್ವೆ ನಿಲ್ದಾಣ ಆವರಣಕ್ಕೆ ಕಾಲಿಡೋವಾಗಲೇ ಆರೋಪಿಗಳು ಅರೆಸ್ಟ್ ಆಗಲಿದ್ದಾರೆ. ಅಷ್ಟೊಂದು ಆ್ಯಕ್ಟೀವ್ ಆಗಿದೆ ರೈಲ್ವೆ ಪ್ರೊಟೆಕ್ಷನ್ ಫೋರ್ಸ್.
ಇದೀಗ ಆರ್ಪಿಎಫ್ ಹೊಸ ಯೋಜನೆಯೊಂದನ್ನ ಜಾರಿಗೆ ತಂದಿದೆ. ಅದುವೇ RPF -1 ಯೋಜನೆ. ಸುಮಾರು 2.4 ಕೋಟಿ ವೆಚ್ಚದ ಈ ಯೋಜನೆಯಲ್ಲಿ 157 ಸಿಸಿ ಟಿವಿಗಳನ್ನು ರೈಲ್ವೆ ನಿಲ್ದಾಣದ ಆವರಣ ಸೇರಿದಂತೆ ಎಲ್ಲಾ ಕಡೆ ಅಳವಡಿಸಲಾಗಿದೆ.
ಅಂದ ಹಾಗೆ ಇದು ಅಂತಿಂಥಾ ಕ್ಯಾಮೆರಾ ಅಲ್ಲ. ಮುಖ ಚಹರೆ ಸುಲಭವಾಗಿ ಗುರುತಿಸುವ ಸಾಧನವಾಗಿದೆ. ಹೆಸರೇ ಹೇಳುವಂತೆ ಇದು ಮುಖವನ್ನು ಚೆನ್ನಾಗಿ ಗುರುತಿಸುತ್ತೆ. ಅಲ್ಲದೆ ನಿಮ್ಮ ಪೂರ್ತಿ ದೇಹವನ್ನೇ ಸ್ಕ್ಯಾನ್ ಮಾಡಲಿದೆ.
ಇದಕ್ಕೆ ಖದೀಮರು, ರೌಡಿಶೀಟರ್ ಸೇರಿ ಅನುಮಾನಸ್ಪಾದ ವ್ಯಕ್ತಿಗಳ ಮುಖದ ಚಹರೆಯನ್ನು, ಡೇಟಾಗಳನ್ನು ಸೇವ್ ಮಾಡಿ ಇಡಲಾಗುತ್ತದೆ. ಅದು ಈ ಡೇಟಾದಲ್ಲಿರೋ ಒಂದು ಮಾಹಿತಿ ಸ್ಕ್ಯಾನ್ ಮಾಡಿರುವ ವ್ಯಕ್ತಿಯಲ್ಲಿ ಕಂಡು ಬಂದರೆ ಸಾಕು ಕಮಾಂಡರ್ ಸೆಂಟರ್‌ನಲ್ಲಿರೋ ಸಿಬ್ಬಂದಿಗೆ ವಾಂಟೆಡ್ ಎಂದು ಮೆಸೇಜ್ ತೋರಿಸಲಿದೆ. ಇದಕ್ಕಾಗಿಯೇ ಮೂರು ಜನ ಸಿಬ್ಬಂದಿ ಕಮಾಂಡರ್ ಸೆಂಟರ್‌ನಲ್ಲಿ ಕೆಲಸ ಮಾಡುತ್ತಿದ್ದಾರೆ. ಈ ಮೂಲಕ ಕ್ರಿಮಿನಲ್ ಗಳನ್ನು ಸೆರೆ ಹಿಡಿಯೋಕೆ ಸಹಾಯ ಮಾಡುತ್ತೆ.
ಇದು ಎಷ್ಟೊಂದು ಕರೆಕ್ಟಾಗಿ ಕೆಲಸ ಮಾಡುತ್ತೆ ಅಂದ್ರೆ ಮುಖಕ್ಕೆ ಮಾಸ್ಕ್ ಹಾಕಿದರೂ ಕ್ರಿಮಿನಲ್‌ಗಳನ್ನು ಬಿಡೋದಿಲ್ಲ. ಒಂದು ವೇಳೆ ಕಮಾಂಡರ್ ಸೆಂಟರ್‌ನಲ್ಲಿ WANTED ಅಂತಾ ಮೆಸೇಜ್ ಬಂದರೆ ಕಮಾಂಡರ್ ಸೆಂಟರ್ ಸ್ಕ್ಯಾನಿಂಗ್ ಸೆಂಟರ್ನಲ್ಲಿರೋರಿಗೆ ಮಾಹಿತಿ ರವಾನಿಸಿ ಕ್ರಿಮಿನಲ್‌ಗಳನ್ನು ಸೆರೆ ಹಿಡಿಯಲು ಸಹಾಯ ಮಾಡುತ್ತೆ.
ಇದು ಕೇವಲ ಕ್ರಿಮಿನಲ್‌ಗಳನ್ನು ಸ್ಕ್ಯಾನ್ ಮಾಡೋದಲ್ಲ ಎಲ್ಲಾ ರೈಲು ಪ್ರಯಾಣಿಕರನ್ನೂ ಸೆರೆ ಹಿಡಿಯುತ್ತದೆ. ಈ ಕ್ಯಾಮೆರಾದಲ್ಲಿ ನ್ಯಾಷನಲ್ ಇನ್ಸ್‌ಟಿಟ್ಯೂಟ್ ಆಫ್ ಸ್ಟಾಂಡರ್ಡ್ ಟೆಕ್ನಾಲಜಿ ಬಳಸಲಾಗಿದೆ. ಅಲ್ಲದೆ ಈಗಲ್ ಐ ಸಾಫ್ಟ್‌ವೇರ್ ಬಳಸಲಾಗಿದೆ.
ಈ ಕ್ಯಾಮೆರಾ ಕ್ರಿಮಿನಲ್‌ಗಳನ್ನು ಸ್ಕಾನ್ ಮಾಡೋದಲ್ಲದೆ ವಾಹನಗಳನ್ನೂ ಸ್ಕ್ಯಾನ್ ಮಾಡುತ್ತದೆ. ಇದರಿಂದಾಗಿ ಬೆಂಗಳೂರಿನ ಕ್ರೈಂ ಪೊಲೀಸರಿಗೂ ಸಹಾಯವಾಗಲಿದೆ. ಈಗಾಗಲೇ ಈ ಕ್ಯಾಮೆರಾದಿಂದ ಹಲವು ಆರೋಪಿಗಳನ್ನ ಬಂಧಿಸಲು ಸಹಾಯಕವಾಗಿದೆ.
157 ಕ್ಯಾಮೆರಾಗಳನ್ನು ರೈಲು ನಿಲ್ದಾಣದ ಸುತ್ತಮುತ್ತ ಅಳವಡಿಸಲಾಗಿದೆ. ಇದು ಭಾರತದಲ್ಲೇ ಮೊದಲ ಪ್ರಯತ್ನವಾಗಿದೆ. ಒಟ್ಟಿನಲ್ಲಿ ಅಪರಾಧ ಎಸಗಿ ರೈಲು ಮುಖಾಂತರ ತಪ್ಪಿಸಿಕೊಂಡು ಹೋಗಬಹುದು ಎಂದು ಪ್ಲಾನ್ ಮಾಡುವ ಖತರ್ನಾಕ್‌ಗಳಿಗೆ ಈ ಸಾಫ್ಟ್ ವೇರ್‌ನಿಂದ ಸಿಕ್ಕಿ ಬೀಳೋದು ಗ್ಯಾರಂಟಿ.