ಬೆಂಗಳೂರು: ರಾಜಧಾನಿಯನ್ನು ಮಾದಕ ವಸ್ತುಗಳ ಹಬ್ ಮಾಡಲು ಹೊರಟಿರುವ ಪೆಡ್ಲರ್ಗಳ ಹಿಂದೆ ಬಿದ್ದಿರುವ ಸಿಸಿಬಿ ಪೊಲೀಸರು 2 ಪ್ರತ್ಯೇಕ ಪ್ರಕರಣಗಳಲ್ಲಿ 6 ಮಂದಿಯನ್ನು ಬಂಧಿಸಿದ್ದಾರೆ. ಅದರಲ್ಲೂ ರೈಲ್ವೆ ಇಲಾಖೆಯಲ್ಲಿ ಹೊರಗುತ್ತಿಗೆ ನೌಕರರಾಗಿ ಡ್ರಗ್ಸ್ ಸಪ್ಲೈ ಮಾಡಲು ರೈಲನ್ನೇ ಬಳಸಿಕೊಳ್ಳುತ್ತಿದ್ದ ಆರೋಪಿಗಳು ಈಗ ಜೈಲು ಕಂಬಿ ಎಣಿಸುತ್ತಿದ್ದಾರೆ.
ರೈಲಿನಲ್ಲೇ ತಂದು ಮಾರಾಟ: ಆರೋಪಿಗಳಾದ ಬಪ್ಪಾ ಕರ್ಡೆ, ಪಿಂಟು ದಾಸ್ ಹಾಗೂ ರಾಜೇಶ್ ಪಾಲ್ ಬಂಧಿತರು. ಇವರೆಲ್ಲ ಅಸ್ಸೋಂ ಮೂಲದವರು. ಗಾಂಜಾ ಹಾಗೂ ಹಶಿಶ್ ಆಯಿಲ್ ಅನ್ನು ರೈಲಿನಲ್ಲೇ ತಂದು ಮಾರಾಟ ಮಾಡುತ್ತಿದ್ದರಂತೆ. ಈ ಮೂವರೂ ಆರೋಪಿಗಳು ರೈಲ್ವೇ ಇಲಾಖೆಯ ಹೊರಗುತ್ತಿಗೆ ನೌಕರರಾಗಿ ಕೆಲಸ ಮಾಡುತ್ತಿದ್ದಾರೆ ಎಂಬುದು ಗಮನಾರ್ಹ.
ಈಶಾನ್ಯ ಫರ್ಟೈನರ್ ರೈಲ್ವೆ ಅಗ್ರಿಟ್ಲಾ ಕೋಚಿಂಗ್ ಡಿಪೊನಲ್ಲಿ ಎಸಿ ಅಟೆಂಡೆಂಟ್ ಹಾಗೂ ಬೆಡ್ ರೋಲ್ ಸ್ಟಾಫ್ಗಳಾಗಿ ಕೆಲಸ ಮಾಡುತ್ತಿದ್ದ ಆರೋಪಿಗಳು ರೈಲಿನಲ್ಲಿ ತಮಗೆ ಕೊಟ್ಟಿರುವ ಲಾಕರ್ಗಳಲ್ಲಿ ಡ್ರಗ್ಸ್ಗಳನ್ನು ಭದ್ರವಾಗಿ ಇಡುತ್ತಿದ್ದರು. ಬೆಂಗಳೂರು ಬರುತ್ತಿದ್ದಂತೆಯೇ ಆಯಾ ನಿಲ್ದಾಣಗಳಲ್ಲಿ ಅವುಗಳನ್ನು ಪೆಡ್ಲರ್ಗಳಿಗೆ ತಲುಪಿಸುತ್ತಿದ್ದರು.
ಇವರು ರೈಲ್ವೆ ಇಲಾಖೆಯಲ್ಲೇ ಕೆಲಸ ಮಾಡುತ್ತಿದ್ದ ಕಾರಣಕ್ಕೆ ಇವರ ಮೇಲೆ ಅನುಮಾನ ಬರುತ್ತಿರಲಿಲ್ಲ. ವಾರಗಟ್ಟಲೆ ಮಾಹಿತಿ ಕಲೆ ಹಾಕಿ ಕಾದು ಕುಳಿತಿದ್ದ ಸಿಸಿಬಿ ಪೊಲೀಸರಿಗೆ ಆರೋಪಿಗಳು ಸಿಕ್ಕಿ ಬಿದ್ದಿದ್ದಾರೆ. ಬಂಧಿತರಿಂದ 80 ಲಕ್ಷ ರೂ ಮೌಲ್ಯದ ಹಶಿಶ್ ಎಣ್ಣೆ, 6 ಕೆಜಿ ಗಾಂಜಾ ವಶಕ್ಕೆ ಪಡೆಯಲಾಗಿದೆ ಎಂದು ಸಿಸಿಬಿ ಡಿಸಿಪಿ ಶರಣಪ್ಪ ತಿಳಿಸಿದ್ದಾರೆ.
ಇದನ್ನೂ ಓದಿ: 764 ಬಾಕ್ಸ್ಗಳಲ್ಲಿ ಸಾಗಿಸುತ್ತಿದ್ದ 9 ಕೆಜಿ ಹೆರಾಯಿನ್ ವಶ.. ಆರೋಪಿ ಬಂಧನ
ಮತ್ತೊಂದು ಡ್ರಗ್ಸ್ ಪ್ರಕರಣ: ಇದರಲ್ಲಿ ಸೈಯದ್ ಅಬ್ದುಲ್ ರೆಹೆಮಾನ್, ಮಹಮ್ಮದ್ ಫರ್ದಿನ್, ಸೈಯದ್ ಫಹಾದ್ ಎಂಬುವರನ್ನು ಸಿಸಿಬಿ ಬಂಧಿಸಿದೆ. ಈ ಡ್ರಗ್ಸ್ ಪೆಡ್ಲರ್ಗಳು ನೈಜೀರಿಯಾ ಡ್ರಗ್ಸ್ ಪೆಡ್ಲರ್ಗಳಿಂದ ಎಂಡಿಎಂಎ, ಎಲ್ ಎಸ್ಡಿ ಯಂತಹ ಡ್ರಗ್ಸ್ ಅನ್ನು ಬೆಂಗಳೂರಿಗೆ ತಂದು ಮಾರಾಟ ಮಾಡುವಂತಹ ಕೆಲಸ ಮಾಡ್ತಿದ್ರು. ಆರೋಪಿಗಳು ಬಾಣಸವಾಡಿ ಭಾಗದಲ್ಲಿ ಡ್ರಗ್ಸ್ ಮಾರಾಟ ಮಾಡ್ತಿರೋ ಬಗ್ಗೆ ಪೊಲೀಸರಿಗೆ ಮಾಹಿತಿ ತಿಳಿದಿತ್ತು.