ಬೆಂಗಳೂರು: ರಾಜ್ಯದಲ್ಲಿ ಈಗ ಆನೆಗಳ ಹಾವಳಿ ಹೆಚ್ಚಾಗಿದೆ. ಆನೆಗಳ ದಾಳಿ ಪ್ರಕರಣ ಹೆಚ್ಚಾಗಿದ್ದು, ಅದರ ಫಲವಾಗಿ ಮೂಡಿಗೆರೆ ಶಾಸಕ ಎಂ ಪಿ ಕುಮಾರಸ್ವಾಮಿ ಸಾರ್ವಜನಿಕರ ಆಕ್ರೋಶಕ್ಕೆ ಒಳಗಾಗಿದ್ದರು. ಆನೆಗಳ ಹಾವಳಿಗೆ ಅಂಕುಶ ಹಾಕಲು ಸರ್ಕಾರ ರೈಲ್ವೆ ಬ್ಯಾರಿಕೇಡ್ ಅಳವಡಿಕೆ ಕಾರ್ಯ ನಡೆಸುತ್ತಿದೆ. ಆದರೆ ಬ್ಯಾರಿಕೇಡ್ ಅಳವಡಿಕೆ ಕಾರ್ಯ ತೆವಳುತ್ತ ಸಾಗುತ್ತಿದೆ.
ರಾಜ್ಯದಲ್ಲಿ ಆನೆಗಳ ಹಾವಳಿ ಹೆಚ್ಚಾಗಿದೆ. ಆನೆ ದಾಳಿಗೆ ಬೇಸತ್ತ ಜನರು ಸರ್ಕಾರ, ಜನಪ್ರತಿನಿಧಿಗಳ ವಿರುದ್ಧ ಮುಗಿಬಿದ್ದಿದ್ದಾರೆ. ಇತ್ತೀಚೆಗಷ್ಟೇ ಮೂಡಿಗೆರೆ ಶಾಸಕ ಎಂ. ಪಿ ಕುಮಾರಸ್ವಾಮಿ ಜನಾಕ್ರೋಶಕ್ಕೆ ಒಳಗಾದರು. ಆನೆ ದಾಳಿಗೆ ಮಹಿಳೆಯೊಬ್ಬರು ಸಾವಿಗೀಡಾದ ಹಿನ್ನೆಲೆ ಸ್ಥಳೀಯರು ಶಾಸಕರ ವಿರುದ್ಧ ಮುಗಿಬಿದ್ದು, ಹಲ್ಲೆ ನಡೆಸಿ ಅಂಗಿ ಹರಿದರು ಎಂಬ ಆರೋಪವನ್ನು ಸ್ವತಃ ಶಾಸಕರೇ ಮಾಡಿದ್ದಾರೆ. ಇತ್ತ ಆನೆ ಹಾವಳಿ ಹೆಚ್ಚಾಗಿರುವ ಕಾರಣ ಸಿಎಂ ಬೊಮ್ಮಾಯಿ ಕಳೆದ ವಾರ ಅಧಿಕಾರಿಗಳ ಜೊತೆ ಸಭೆ ನಡೆಸಿದ್ದರು. ಆನೆಗಳ ಹಾವಳಿಗೆ ಅಂಕುಶ ಹಾಕಲು ಪ್ರತಿ ಜಿಲ್ಲೆಗಳಲ್ಲಿ ಕಾರ್ಯಪಡೆ ರಚನೆಗೆ ಈ ಸಭೆಯಲ್ಲಿ ತೀರ್ಮಾನಿಸಲಾಗಿದೆ.
ರಾಜ್ಯದಲ್ಲಿ ಆನೆ ದಾಳಿಗೆ ಬಲಿಯಾದವರೆಷ್ಟು?: ಕಳೆದ ಮೂರು ವರ್ಷಗಳಲ್ಲಿ ಆನೆ ದಾಳಿಗೆ ರಾಜ್ಯದಲ್ಲಿ ಒಟ್ಟು 74 ಮಂದಿ ಮೃತಪಟ್ಟಿದ್ದಾರೆ. ಅದರಲ್ಲೂ ಕೊಡಗು, ಚಿಕ್ಕಮಗಳೂರು, ಹಾಸನ ಜಿಲ್ಲೆಗಳಲ್ಲಿ ಕಾಡಾನೆ ದಾಳಿ ಹೆಚ್ಚಾಗಿದೆ.
2019-20 ರಲ್ಲಿ ರಾಜ್ಯದಲ್ಲಿ 29 ರೈತರು ಕಾಡಾನೆ ತುಳಿತಕ್ಕೆ ಬಲಿಯಾಗಿದ್ದರೆ, 2020-21ರಲ್ಲಿ 23 ಮಂದಿ ಮೃತಪಟ್ಟಿದ್ದರು. 2021-22ರಲ್ಲಿ 22 ಮಂದಿ ಕಾಡಾನೆ ತುಳಿತಕ್ಕೆ ಮೃತಪಟ್ಟಿದ್ದಾರೆ. ಸಾವನ್ನಪ್ಪಿದ 74 ಮಂದಿಗೆ 4.60 ಕೋಟಿ ರೂ. ಪರಿಹಾರಧನ ನೀಡಲಾಗಿದೆ.
ಕೊಡಗು ಜಿಲ್ಲೆಯಲ್ಲಿ ಕಳೆದ ಮೂರು ವರ್ಷಗಳಲ್ಲಿ ಸುಮಾರು 27 ಮಂದಿ ಕಾಡಾನೆ ದಾಳಿಗೆ ಬಲಿಯಾಗಿದ್ದಾರೆ. 2019-20ರಲ್ಲಿ 4 ಮಂದಿ ಕಾಡಾನೆಗೆ ಸಿಲುಕಿ ಸಾವನ್ನಪ್ಪಿದರೆ, 2020-21ರಲ್ಲಿ 7 ಮಂಡಿ ಕಾಡಾನೆ ದಾಳಿಗೆ ಬಲಿಯಾಗಿದ್ದರು. 2021-22ರಲ್ಲಿ 10 ಮಂದಿ ಮೃತಪಟ್ಟಿದ್ದಾರೆ. ಈ ವರ್ಷ ಕಳೆದ ಆರು ತಿಂಗಳಲ್ಲಿ ಕೊಡಗಿನಲ್ಲಿ ಸುಮಾರು 7 ಮಂದಿ ಕಾಡಾನೆ ದಾಳಿಗೆ ಸಾವಿಗೀಡಾಗಿರುವ ವರದಿಯಾಗಿದೆ.
ಇತ್ತ ಹಾಸನ ಜಿಲ್ಲೆಯಲ್ಲಿ ಕಳೆದ ಮೂರು ವರ್ಷದಲ್ಲಿ 16 ಮಂದಿ ಕಾಡಾನೆಗೆ ಬಲಿಯಾಗಿದ್ದಾರೆ. 2019-20ರಲ್ಲಿ ಹಾಸನದಲ್ಲಿ 3 ಮಂದಿ ಸಾವನ್ನಪ್ಪಿದ್ದರೆ, 2020-21 ಸಾಲಿನಲ್ಲಿ 5 ಮಂದಿ ಕಾಡಾನೆ ದಾಳಿಗೆ ಮೃತಪಟ್ಟಿದ್ದಾರೆ. ಇನ್ನು, 2021-22ರಲ್ಲಿ 5 ಮಂದಿ ಸಾವನ್ನಪ್ಪಿದ್ದರೆ, 2022-23ರಲ್ಲಿ ಕಳೆದ ಐದು ತಿಂಗಳಲ್ಲಿ 3 ಮಂದಿ ಕಾಡಾನೆ ತುಳಿತಕ್ಕೆ ಸಾವನ್ನಪ್ಪಿದ್ದಾರೆ.
ರೈಲು ಬ್ಯಾರಿಕೇಡ್ ಕಾಮಗಾರಿ ವಿಳಂಬ: ಮಾನವ-ಆನೆ ಸಂಘರ್ಷ ಹೆಚ್ಚಾಗಿರುವ ಆಯ್ಕೆ ಪ್ರದೇಶಗಳಲ್ಲಿ ರೈಲ್ವೆ ಬ್ಯಾರಿಕೇಡ್ ನಿರ್ಮಾಣ ಕಾಮಗಾರಿಯನ್ನು 2014-15ನೇ ಸಾಲಿನಿಂದ ಕೈಗೊಳ್ಳಲಾಗುತ್ತಿದೆ. ಅಲ್ಲದೇ ಕಾಡಂಚಿನ ಗ್ರಾಮಗಳಿಗೆ ಉಪಯೋಗಿಸಿದ ರೈಲ್ವೆ ಹಳಿಗಳನ್ನು ಬಳಸಿಕೊಂಡು ರೈಲ್ವೆ ಬ್ಯಾರಿಕೇಡ್‌ಗಳನ್ನು ನಿರ್ಮಿಸಿ ಅಳವಡಿಸಿರುವುದರ ಮೂಲಕ ಕಾಡಾನೆ ಮತ್ತು ಮಾನವ-ಪ್ರಾಣಿಗಳ ಸಂಘರ್ಷ, ಬೆಳೆ ನಾಶ ಹಾಗೂ ವನ್ಯಪ್ರಾಣಿಗಳ ಪ್ರವೇಶ ತಡೆಗಟ್ಟುವ ಮತ್ತು ರೈತರಿಗೆ ದೀರ್ಘಕಾಲದವರೆಗೆ ಅನುಕೂಲ ಮಾಡಿಕೊಡುವ ಉದ್ದೇಶದಿಂದ 2019- 20ನೇ ಸಾಲಿನ ಆಯ-ವ್ಯಯದಲ್ಲಿ ಉಪಯೋಗಿಸಿದ ರೈಲ್ವೆ ಹಳಿ ತಡೆಗೋಡೆಯಿಂದ ಮಾನವ ಪ್ರಾಣಿ ಸಂಘರ್ಷ ನಿಯಂತ್ರಣ ಎಂಬ ಹೊಸ ಯೋಜನೆಯನ್ನು ಘೋಷಿಸಲಾಗಿತ್ತು. 2019-20ನೇ ಸಾಲಿನಿಂದ ರೈಲ್ವೆ ಬ್ಯಾರಿಕೇಡ್ ನಿರ್ಮಾಣದ ಕಾಮಗಾರಿ ಕೈಗೊಂಡಿದೆ.
ಉಪಯೋಗಿತ ರೈಲ್ವೆ ಹಳಿ ಬಳಸಿ 624 ಕಿ.ಮೀ ಉದ್ದದ ರೈಲ್ವೆ ಬ್ಯಾರಿಕೇಡ್ ನಿರ್ಮಾಣ ಮಾಡಲು ಉದ್ದೇಶಿಸಲಾಗಿತ್ತು. ಆದರೆ, ಇದುವರೆಗೆ 217 ಕಿ. ಮೀ ಮಾತ್ರ ರೈಲ್ವೆ ಬ್ಯಾರಿಕೇಡ್ ನಿರ್ಮಿಸಲಾಗಿದೆ ಎಂದು ಅರಣ್ಯ ಇಲಾಖೆ ಮಾಹಿತಿ ನೀಡಿದೆ. ಇನ್ನು 550. 86 ಕಿ. ಮೀ ಉದ್ದದ ಆನೆ ನಿರೋಧಕ ಕಂದಕವನ್ನು ನಿರ್ಮಿಸಲಾಗಿದೆ. 108. 69 ಕಿ. ಮೀ ಉದ್ದದ ಸೋಲಾರ್ ತಂತಿಬೇಲಿ ನಿರ್ಮಿಸಲಾಗಿದೆ.