ಬೆಂಗಳೂರು: ರಾಜ್ಯದಲ್ಲಿ ಕಾಂಗ್ರೆಸ್ ಪರವಾಗಿ ಅಲೆ ಇರುವುದು ಸಮಾಧಾನ ತರುತ್ತಿದೆ. ನಮ್ಮೆಲ್ಲ ನಾಯಕರಲ್ಲಿಯೂ ಒಮ್ಮತ ಕಾಣುತ್ತಿದೆ. ಭಾರತ್ ಜೋಡೋ ಯಾತ್ರೆಯಲ್ಲಿ ರಾಜ್ಯ ನಾಯಕರು ಅತ್ಯುತ್ತಮವಾಗಿ ಪಾಲ್ಗೊಂಡು ಜನರ ವಿಶ್ವಾಸ ಗಳಿಸಿದ್ದಾರೆ. ಈ ಬಾರಿ ಅತ್ಯಂತ ಸುಲಭವಾಗಿ ರಾಜ್ಯದಲ್ಲಿ ಅಧಿಕಾರಕ್ಕೆ ಬರುತ್ತೇವೆ. ಬಿಜೆಪಿ ಸರ್ಕಾರದ 40 ಪರ್ಸೆಂಟ್ ಭ್ರಷ್ಟಾಚಾರವನ್ನು ಜನ ಧಿಕ್ಕರಿಸುತ್ತಾರೆ ಎಂಬ ವಿಶ್ವಾಸ ನನಗಿದೆ ಎಂದು ರಾಷ್ಟ್ರೀಯ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹೇಳಿದರು.
ನಗರದಲ್ಲಿ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ನೂತನ ಕಟ್ಟಡ ಇಂದಿರಾ ಗಾಂಧಿ ಭವನ ಹಾಗೂ ಭಾರತ ಜೋಡೋ ಸಭಾಂಗಣದ ಉದ್ಘಾಟನೆ ಕಾರ್ಯಕ್ರಮದಲ್ಲಿ ಮಾತನಾಡಿ, ಬಿಜೆಪಿ ಸರ್ಕಾರ ಐದು ವರ್ಷ ಜನರ ನೆಮ್ಮದಿ ಹಾಗೂ ಬದುಕನ್ನು ಕಿತ್ತುಕೊಂಡಿದೆ. ಜನ ಇವರಿಗೆ ಸರಿಯಾದ ಪಾಠ ಕಲಿಸಬೇಕು. ನಾವು ಒಂದು ಉತ್ತಮ ಆಶಯದೊಂದಿಗೆ ಜನರಿಗೆ ಅನುಕೂಲವಾಗುವ ವಿಚಾರಗಳನ್ನು ಮುಂದಿಟ್ಟು ಅಧಿಕಾರಕ್ಕೆ ಬರುವ ಪ್ರಯತ್ನ ಮಾಡುತ್ತಿದ್ದೇವೆ.
ಒಂದು ವಿಷನ್ ಇಟ್ಟುಕೊಂಡು ನಾವು ರಾಜ್ಯ ಚುನಾವಣೆಗೆ ಹೊರಟಿದ್ದೇವೆ. ಪಾರದರ್ಶಕ ಹಾಗೂ ಜನರ ಅಭಿಪ್ರಾಯವನ್ನು ಕೇಳಿಕೊಂಡು ಮುನ್ನಡೆಯುವ ಸರ್ಕಾರವಾಗಿ ನಾವು ಕಾರ್ಯನಿರ್ವಹಿಸುತ್ತೇವೆ. ಅತ್ಯಂತ ದೊಡ್ಡ ಮಟ್ಟದ ಯಶಸ್ಸಿನೊಂದಿಗೆ ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತರಲು ಶ್ರಮಿಸಿ ಎಂದು ರಾಹುಲ್ ಗಾಂಧಿ ಮುಖಂಡರಿಗೆ ಕರೆ ಕೊಟ್ಟರು.
ಚುನಾವಣೆ ಕನಿಷ್ಠ 150 ಸ್ಥಾನವನ್ನು ನಾವು ಗೆಲ್ಲಲೇ ಬೇಕಿದೆ. ಬಿಜೆಪಿಯ ದುರಾಡಳಿತ ಹಾಗೂ ಭ್ರಷ್ಟಾಚಾರ ನಮಗೆ ಈ ಮೊತ್ತದ ಸ್ಥಾನವನ್ನು ನೀಡುವಲ್ಲಿ ಯಶಸ್ವಿ ಆಗಲಿದೆ. 150 ಸ್ಥಾನವನ್ನ ಗೆದ್ದರೆ ಮಾತ್ರ ಬಿಜೆಪಿಯ ದುರಾಡಳಿತಕ್ಕೆ ಮುಕ್ತಿ ನೀಡುವ ಸುಭದ್ರ ಸರ್ಕಾರವನ್ನು ನೀಡಲು ಸಾಧ್ಯ ಎಂದು ಹೇಳಿದರು.
ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಮಾತನಾಡಿ, ರಾಜ್ಯ ಕಾಂಗ್ರೆಸ್ ಪಾಲಿಗೆ ಇಂದು ಅತ್ಯಂತ ಮಹತ್ವದ ದಿನ. ಕೋಲಾರದಲ್ಲಿ ಇಂದು ಸಮಾವೇಶ ಹಮ್ಮಿಕೊಂಡಿದ್ದೆವು. ಭಾರತ್ ಜೋಡೋ ಯಾತ್ರೆಯ ಯಶಸ್ಸನ್ನು ನಾವು ಹಂಚಿಕೊಳ್ಳುವ ಉದ್ದೇಶದಿಂದ ಈ ಕಟ್ಟಡದ ಉದ್ಘಾಟನೆಗೆ ಅವರನ್ನು ಆಹ್ವಾನಿಸಿದ್ದೆವು. ಸಮಾರಂಭದಲ್ಲಿ ಪಾಲ್ಗೊಳ್ಳಲು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಮನವಿ ಮಾಡಿದ್ದೆವು ಎಂದರು.
ಗಾಂಧಿ ಕುಟುಂಬದಿಂದಾಗಿ ಕಾಂಗ್ರೆಸ್ ಒಂದು ದೊಡ್ಡ ಬಲ ಬಂದಿದೆ ಮತ್ತು ಇಂದು ಶಕ್ತಿಯುತವಾಗಿ ಇರಲು ಕಾರಣವಾಗಿದೆ. ಈ ಸಂದರ್ಭದಲ್ಲಿ ರಾಜಕೀಯ ವಿಚಾರವನ್ನು ಹೆಚ್ಚು ಪ್ರಸ್ತಾಪಿಸುವುದಿಲ್ಲ. ಆದರೆ ದೇಶಕ್ಕಾಗಿ ದೊಡ್ಡ ಮಟ್ಟದಲ್ಲಿ ತ್ಯಾಗ ಮಾಡಿದವರನ್ನು ಸ್ಮರಣಿಸಬೇಕಿದೆ. ಈ ಸಭಾಂಗಣ ರಾಹುಲ್ ಗಾಂಧಿ ಅವರು ಭಾರತ್ ಜೋಡೋ ಯಾತ್ರೆಯ ಯಶಸ್ಸಿಗೆ ಸಮರ್ಪಿತವಾಗಿದೆ. ನಾವು ಇನ್ನು ಮುಂದಿನ ದಿನಗಳಲ್ಲಿ ಅತಿ ದೊಡ್ಡ ಮಟ್ಟದಲ್ಲಿ ಯುವ ಸಮುದಾಯವನ್ನು ಮುಂದುವರಿಸಿಕೊಂಡು ಸಾಗಬೇಕಿದೆ ಎಂದು ಹೇಳಿದರು.
ಎಐಸಿಸಿ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮಾತನಾಡಿ, ಇಡೀ ದೇಶದಲ್ಲಿಯೇ ದಿಲ್ಲಿಯ ನಂತರ ಅತ್ಯಂತ ಸುಸಜ್ಜಿತ ಹಾಗೂ ಉತ್ತಮ ಕಟ್ಟಡ ಇದೇ ಆಗಿದೆ. ಈ ಕಟ್ಟಡದ ಎದುರಿಗಿನ ಚಿಕ್ಕ ಕಟ್ಟಡದಲ್ಲಿ ನಾವು ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸಿದ್ದು, ಇದೀಗ ರೇಸ್ ಕೋರ್ಸ್ ರಸ್ತೆ ಸಮೀಪವಿರುವ ಕಟ್ಟಡವನ್ನು ಕೆಡವಿ ಹೊಸ ಕಟ್ಟಡ ನಿರ್ಮಾಣ ಮಾಡುವುದಾಗಿ ಹೇಳಿದ್ದಾರೆ. ಒಮ್ಮೊಮ್ಮೆ ಸಿಟ್ಟಿಗೆ ಬರುತ್ತಾನೆ, ಆದರೂ ಒಬ್ಬ ಉತ್ತಮ ಕೆಲಸಗಾರ ಡಿ.ಕೆ.ಶಿವಕುಮಾರ್ ಎಂದು ಬಣ್ಣಿಸಿದರು.
ರಾಹುಲ್ ಗಾಂಧಿ, ಪ್ರಿಯಾಂಕ ಗಾಂಧಿ ಹಾಗೂ ಸೋನಿಯಾ ಗಾಂಧಿ ಸೇರಿದಂತೆ ಎಲ್ಲಾ ರಾಷ್ಟ್ರೀಯ ನಾಯಕರು ಡಿ.ಕೆ.ಶಿವಕುಮಾರ್ ಕಾರ್ಯವನ್ನು ಮೆಚ್ಚಿದ್ದಾರೆ. ಎಲ್ಲರನ್ನೂ ಒಟ್ಟಾಗಿ ಕೊಂಡೊಯ್ಯುದಾಗಿ ಹೇಳಿ ಕೆಪಿಸಿಸಿ ಅಧ್ಯಕ್ಷ ಸ್ಥಾನ ವಹಿಸಿಕೊಳ್ಳುವ ಸಂದರ್ಭ ನನಗೆ ಕೊಂಚ ಗೊಂದಲ ಇತ್ತು. ಆದರೆ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡ ಬಳಿಕ ಎಲ್ಲರನ್ನೂ ಒಟ್ಟಾಗಿ ಕೊಂಡೊಯ್ಯುವ ಕಾರ್ಯ ಮಾಡಿದ್ದಾರೆ. ಎಲ್ಲರನ್ನೂ ಒಟ್ಟಾಗಿ ಕೊಂಡೊಯ್ಯುವ ಕಾರ್ಯ ಮಾಡುತ್ತಿದ್ದು ಇದನ್ನು ಮುಂದುವರಿಸಿಕೊಂಡು ಸಾಗಲಿ ಎಂದು ಡಿ.ಕೆ.ಶಿವಕುಮಾರ್ ಅವರನ್ನು ಶ್ಲಾಘಿಸಿದರು.
ಇದನ್ನೂ ಓದಿ: ಅದಾನಿ ಹೆಸರು ಪ್ರಸ್ತಾಪಿಸಿ ಕೋಲಾರದಲ್ಲಿ ಮೋದಿ ವಿರುದ್ಧ ರಾಹುಲ್ ವಾಗ್ದಾಳಿ