ಬೆಂಗಳೂರು: ರಾಮಜನ್ಮಭೂಮಿ ಕುರಿತಂತೆ ಇದ್ದ ವಿವಾದಕ್ಕೆ ಸುಪ್ರೀಂಕೋರ್ಟ್ ತೆರೆ ಎಳೆದಿದ್ದು, ಈ ತೀರ್ಪನ್ನು ಸ್ವಾಗತಿಸುತ್ತೇನೆ. ದೇಶದ ಐಕ್ಯತೆ ಮತ್ತು ಸೌಹಾರ್ದತೆಯ ಇದರಿಂದಾಗಿ ಮತ್ತಷ್ಟು ಗಟ್ಟಿಗೊಳಿಸಿದಂತಾಗಿದೆ ಎಂದು ಮಾಜಿ ಸಚಿವ ಆರ್.ವಿ.ದೇಶಪಾಂಡೆ ತಿಳಿಸಿದ್ದಾರೆ.
ಮಾಧ್ಯಮ ಪ್ರಕಟಣೆ ಮೂಲಕ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿರುವ ಅವರು, ಸಂವಿಧಾನದ ಆಶಯದಂತೆ ಸುಪ್ರೀಂಕೋರ್ಟ್ ತೀರ್ಪು ಹೊರ ಬಂದಿರುವುದು ಸಂವಿಧಾನದ ಮೇಲಿನ ಗೌರವ ಹೆಚ್ಚು ಮಾಡಿದಂತಾಗಿದೆ. ಈ ತೀರ್ಪು ವಿವಿಧತೆಯಲ್ಲಿ ಏಕತೆಯನ್ನು ಸಾರುವ ಮೂಲಕ ದೇಶದ ಸಾರ್ವಭೌಮತ್ವವನ್ನು ಎತ್ತಿಹಿಡಿದಿದೆ ಎಂದಿದ್ದಾರೆ.
ಸುಮಾರು 40 ದಿನಗಳ ಕಾಲ ಈ ಪ್ರಕರಣದ ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್ ಮುಖ್ಯನ್ಯಾಯಮೂರ್ತಿ ಅವರನ್ನು ಒಳಗೊಂಡ ಸಾಂವಿಧಾನಿಕ ಪೀಠವು ವಿವಾದಿತ ಜಮೀನು ತಮಗೆ ಸೇರಿದ್ದು ಎಂದು ರಾಮಮಲ್ಲಾ ಸಲ್ಲಿಸಿದ್ದ ಅರ್ಜಿಯನ್ನು ಕೋರ್ಟ್ ಮಾನ್ಯ ಮಾಡಿದೆ. ಇದೇ ಜಾಗದಲ್ಲಿ ರಾಮಮಂದಿರ ನಿರ್ಮಾಣ ಕುರಿತಂತೆ ಸಮಿತಿ ರಚನೆ ಮಾಡಿ ಯೋಜನೆ ರೂಪಿಸಲು ಕೇಂದ್ರ ಸರ್ಕಾರಕ್ಕೆ ನಿರ್ದೇಶನವನ್ನು ನೀಡಿರುವುದು ಹಾಗೂ ಇದೇ ವೇಳೆ ಸುನ್ನಿ ಮಂಡಳಿಗೆ ಮಸೀದಿ ಕಟ್ಟಲು ಅನುವಾಗುವಂತೆ 5 ಎಕರೆ ಜಮೀನು ನೀಡಲು ಆದೇಶ ನೀಡಿರುವುದು ಸ್ವಾಗತಾರ್ಹ ಎಂದಿದ್ದಾರೆ.