ಬೆಂಗಳೂರು: ಆರ್.ಆರ್. ನಗರದಲ್ಲಿ ಇಂದು ಅಕ್ಷರಶಃ ಉಪಚುನಾವಣಾ ಪ್ರಚಾರದ ಸುಂಟರಗಾಳಿ ಎದ್ದಿತ್ತು, ಮುನಿರತ್ನ ಪರ ಚಾಲೆಂಜಿಂಗ್ ಸ್ಟಾರ್ ದರ್ಶನ್ ನಿರಂತರ 9 ಗಂಟೆ ಪ್ರಚಾರ ನಡೆಸಿ ವಿವಿಧ ವಾರ್ಡ್ ಗಳಲ್ಲಿ ಭರ್ಜರಿ ರೋಡ್ ಶೋ ನಡೆಸಿದರು.
ಮಧ್ಯಾಹ್ನ 12 ಗಂಟೆಗೆ ಯಶವಂತಪುರ ರೈಲ್ವೆ ನಿಲ್ದಾಣದಿಂದ ನಟ ದರ್ಶನ್ ಪ್ರಚಾರ ರ‍್ಯಾಲಿ ಆರಂಭಗೊಂಡಿತು. ಊಟಕ್ಕೆ ಒಂದು ಗಂಟೆ ವಿರಾಮ ಬಿಟ್ಟರೆ ರಾತ್ರಿ 9 ಗಂಟೆವರೆಗೂ ನಿರಂತರವಾಗಿ ದರ್ಶನ್ ರೋಡ್ ಶೋ ನಡೆಸಿದರು. ಯಶವಂತಪುರ, ಜೆಪಿ ಪಾರ್ಕ್ ಜಾಲಹಳ್ಳಿ ಗ್ರಾಮ ಹೆಚ್ ಎಂ ಟಿ ವಾರ್ಡ್, ಪೀಣ್ಯ, ಗೊರಗುಂಟೆಪಾಳ್ಯ, ಲಕ್ಷ್ಮೀದೇವಿ ನಗರದಲ್ಲಿ ಮತಬೇಟೆ ನಡೆಸಲಾಯಿತು. ಅಲ್ಲಲ್ಲಿ ದರ್ಶನ್ ಲಾಕ್ಡೌನ್ ಸಮಯದಲ್ಲಿ ಮುನಿರತ್ನ ನಡೆಸಿದ್ದ ದಾಸೋಹ ಸೇವೆ ಸ್ಮರಿಸುತ್ತ ಜನರನ್ನು ಸೆಳೆಯುವ ಪ್ರಯತ್ನ ನಡೆಸಿದರು.
ನಿಗದಿತ ಸಮಯಕ್ಕಿಂತ ಎರಡು ಗಂಟೆ ತಡವಾಗಿ ರ‍್ಯಾಲಿ ಆರಂಭಗೊಂಡ ಹಿನ್ನಲೆಯಲ್ಲಿ ಪೂರ್ಣ ಪ್ರಮಾಣದಲ್ಲಿ ಎಲ್ಲ ವಾರ್ಡ್ಗಳಲ್ಲಿ ಪ್ರಚಾರ ನಡೆಸಲು ಸಾಧ್ಯವಾಗಲಿಲ್ಲ. ಸಮಯಾವಕಾಶದ ಕೊರತೆಯಿಂದಾಗಿ ಲಕ್ಷ್ಮಿ ದೇವಿನಗರ ವಾರ್ಡ್ ನಲ್ಲೇ ಇಂದಿನ ಪ್ರಚಾರಕ್ಕೆ ತೆರೆ ಎಳೆಯಲಾಯಿತು. ಲಗ್ಗೆರೆ ಜ್ಞಾನ ಭಾರತಿ ವಾರ್ಡ್, ಕೊಟ್ಟಿಗೆ ಪಾಳ್ಯ ಹಾಗೂ ರಾಜರಾಜೇಶ್ವರಿ ನಗರದ ಪ್ರವೇಶ ದ್ವಾರದ ಮೂಲಕ ರಾಜರಾಜೇಶ್ವರಿ ನಗರದ ಪ್ರಮುಖ ರಸ್ತೆಗಳಲ್ಲಿ ಮತಯಾಚನೆ ಮಾಡಬೇಕಿದ್ದ ಕಾರ್ಯಕ್ರಮ ರದ್ದಾಯಿತು.
ಕರಗದ ಜನಸಾಗರ: ಅಪರಾಹ್ನ 12 ಗಂಟೆಗೆ ಆರಂಭಗೊಂಡ ದರ್ಶನ್ ರೋಡ್ ಶೋನಲ್ಲಿ ಸಾವಿರಾರು ಸಂಖ್ಯೆಯ ಅಭಿಮಾನಿಗಳು ಪಾಲ್ಗೊಂಡರು. ಎಲ್ಲ ವಾರ್ಡ್ ಗಳ ಬೀದಿ ಬೀದಿಯಲ್ಲಿ ನಡೆದ ರ‍್ಯಾಲಿಯಲ್ಲಿ ಎಲ್ಲಿಯೂ ಜನರ ಸಂಖ್ಯೆ ಕಡಿಮೆಯಾಗಲಿಲ್ಲ, ಮೆರವಣಿಗೆಯುದ್ದಕ್ಕೂ ಸಾವಿರಾರು ಸಂಖ್ಯೆಯಲ್ಲಿ ಜನಸಾಗರವೇ ಹರಿದುಬರುತ್ತಿತ್ತು. ರಾತ್ರಿಯಾದರೂ ಜನರ ಉತ್ಸಾಹ ಕಡಿಮೆಯಾಗಿರಲಿಲ್ಲ, ಕೊರೊನಾ ಆತಂಕ ಲೆಕ್ಕಿಸದೇ ಜಾತ್ರೆಯಂತೆ ಜನರು ದಚ್ಚು ಕ್ಯಾಂಪೇನ್ನಲ್ಲಿ ಪಾಲ್ಗೊಂಡರು. ಆರಂಭದಿಂದ ಪ್ರಚಾರ ಮುಗಿಯುವವರೆಗೂ ಜನಸಾಗರ ಕರಗಲೇ ಇಲ್ಲ.
ಬಿಜೆಪಿ ಬಾವುಟ, ಡಿ'ಬಾಸ್ ಘೋಷಣೆ: ಮುನಿರತ್ನ ಪರ ನಡೆದ ರೋಡ್ ಶೋ ತುಂಬಾ ಬಿಜೆಪಿ ಬಾವುಟಗಳು ಹಾರಾಡುತ್ತಿದ್ದವು. ಆದರೆ, ಘೋಷಣೆಗಳು ಮಾತ್ರ ಡಿ'ಬಾಸ್ ಎಂದಾಗಿತ್ತು. ಬಿಜೆಪಿ ಪರ ಘೋಷಣೆಗಳು ಅಷ್ಟಾಗಿ ಕಂಡುಬರಲಿಲ್ಲ, ಕೇವಲ ದರ್ಶನ್ ಹಾಗೂ ಮುನಿರತ್ನ ಪರ ಜನರಿಂದ ಘೋಷಣೆ ಮೊಳಗುತ್ತಿತ್ತು.
ಅರ್ಧಕ್ಕೆ ಬಂದರು ಅರ್ಧಕ್ಕೆ ಹೋದರು: ಇನ್ನು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್, ಸಚಿವರಾದ ಅಶೋಕ್, ಬಿ.ಸಿ ಪಾಟೀಲ್, ಶಿವರಾಮ್ ಹೆಬ್ಬಾರ್, ಸಿಎಂ ರಾಜಕೀಯ ಕಾರ್ಯದರ್ಶಿ ಎಸ್.ಆರ್ ವಿಶ್ವನಾಥ್ ರ‍್ಯಾಲಿ ಆರಂಭದ ಬದಲು ಜೆಪಿ ಪಾರ್ಕ್ ನಲ್ಲಿ ಮೆರವಣಿಗೆಯನ್ನು ಸೇರಿಕೊಂಡರು, ನಂತರ ರ‍್ಯಾಲಿಯಲ್ಲಿ ಮಾತನಾಡಿ ಹೆಚ್.ಎಂ.ಟಿ ವಾರ್ಡ್ ನಲ್ಲಿ ನಿರ್ಗಮಿಸಿದರು. ಚಾಲೆಂಜಿಂಗ್ ಸ್ಟಾರ್ ದರ್ಶನ್ ಮುನಿರತ್ನ ಪರ ಇಡೀ ದಿನ ನಡೆಸಿದ ಪ್ರಚಾರಕ್ಕೆ ನಟಿ ಅಮೂಲ್ಯ, ನಿರ್ಮಾಪಕ ರಾಕ್ ಲೈನ್ ವೆಂಕಟೇಶ್ ಜೊತೆಯಲ್ಲೇ ನಿಂತು ಸಾತ್ ನೀಡಿದರು.