ಬೆಂಗಳೂರು: ಚಾಮರಾಜಪೇಟೆಯ ಸರ್ವೆ ನಂ 40 ಗುಟ್ಟಹಳ್ಳಿಯಲ್ಲಿ ನವೆಂಬರ್ 1 ರಂದು 75 ವರ್ಷದ ನಂತರ ಕನ್ನಡ ಬಾವುಟ ರಾರಾಜಿಸಲಿದೆ. ಕನ್ನಡದ ಅಸ್ಮಿತೆ ಕಾಪಾಡಲು ನಮ್ಮ ಸರ್ಕಾರ ಸದಾ ಸಿದ್ಧವಾಗಿದೆ, ಗಣೇಶೋತ್ಸವಕ್ಕೆ ಎದುರಾಗಿರುವ ವಿಘ್ನ ನಿವಾರಣೆ ಆಗಲಿದೆ ಎಂದು ಕಂದಾಯ ಸಚಿವ ಆರ್.ಅಶೋಕ್ ಹೇಳಿದರು.
ಚಾಮರಾಜಪೇಟೆಯ ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಶ್ರೀ ಕೃಷ್ಣರಾಜ ಪರಿಷತ್ತಿನ ಮಂದಿರ ಮತ್ತು ಆವರಣದ ನವೀಕೃತ ಕಟ್ಟಡ ಉದ್ಘಾಟನಾ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಚಾಮರಾಜಪೇಟೆ ಆಟದ ಮೈದಾನ ವಿವಾದ ಕುರಿತು ಕೋರ್ಟ್ ತೀರ್ಪು ಸಂತೋಷ ತಂದಿದೆ. ಇದು ಬಹುಧರ್ಮಿಯರ ದೇಶ, ಅರ್ಜಿ ಪರಿಶೀಲನೆ ಮಾಡಬಹುದು ಎಂದು ಕೋರ್ಟ್ ಹೇಳಿದೆ ಎಂದರು.
ಪೂರ್ತಿ ಮಾಹಿತಿ ಓದಿದ ಬಳಿಕ ಸರ್ಕಾರ ನಿರ್ಧಾರ ಪ್ರಕಟ ಮಾಡಲಿದೆ. ಅದಕ್ಕೂ ಮುನ್ನ ಸಿಎಂ ಜೊತೆ ಮತ್ತು ಪ್ರಬುಲಿಂಗ ನಾವಡಿಗೆ ಜೊತೆ ಚರ್ಚೆ ಮಾಡಿ ನಿರ್ಧಾರ ಮಾಡುತ್ತೇವೆ. ಕಾನೂನು ಸುವ್ಯವಸ್ಥೆ ಕಾಪಾಡಲು ಅಧಿಕಾರಿಗಳಿಗೆ ಸೂಚನೆ ನೀಡಲಾಗುವುದು, ಈ ಜಾಗ ಕಂದಾಯ ಇಲಾಖೆಗೆ ಸೇರಿದ್ದು ಎನ್ನೋದು ಸ್ಪಷ್ಟ ಆಗಿದೆ ಎಂದರು.
ಸಧ್ಯ ಈಗ ಗಣೇಶೋತ್ಸವ ಆಚರಣೆಗೆ ಮನವಿ ಬಂದಿದೆ, ಈ ಬಗ್ಗೆ ಚರ್ಚಿಸಿ ನಿರ್ಧಾರ ಕೈಗೊಳ್ಳಲಿದ್ದೇವೆ, ನನಗೂ ಇದು ವಿಘ್ನದ ಸಮಯ, ಈ ವಿಘ್ನ ಎದುರಿಸುವ ಶಕ್ತಿಯನ್ನು ವಿಘ್ನೇಶ್ವರ ಕರುಣಿಸಲಿ ಎಂದರು.
ಬೆಂಗಳೂರಿನಲ್ಲಿ ಕನ್ನಡದ ಅಸ್ಮಿತೆ : ಕೆಂಪೇಗೌಡರ ಈ ಬೆಂಗಳೂರಿನಲ್ಲಿ ಕನ್ನಡದ ಅಸ್ತಿತ್ವ ಸದಾ ಇದೆ. ಇಲ್ಲಿ ಕನ್ನಡದ ಮನಸ್ಸುಗಳು ಸದಾ ಜಾಗೃತವಾಗಿದೆ. ಹಿಂದೆ ಬೆಂಗಳೂರಿನಲ್ಲಿ ಸಾಹಿತ್ಯ ಸಮ್ಮೇಳನ ಮಾಡುವುದಕ್ಕೆ ಎಲ್ಲರೂ ಬೇಡ, ಇಲ್ಲಿ ಯಾರೂ ಬರುವುದಿಲ್ಲ ಅಂತಲೇ ಹೇಳಿದ್ದರು. ಆ ಸಂದರ್ಭದಲ್ಲಿ ಬೆಂಗಳೂರು ಉಸ್ತುವಾರಿ ಸಚಿವನಾಗಿ, ಹಠ ಹಿಡಿದು ಇಲ್ಲಿ ಸಾಹಿತ್ಯ ಸಮ್ಮೇಳನ ಮಾಡಿಸಿದ್ದೆ. ಅದೆಷ್ಟು ವೈಭವದಿಂದ ನಡೆಯಿತು ಅಂದರೆ ಈಗಲೂ ದಾಖಲೆಯಾಗಿ ಉಳಿದಿದೆ. ಎಂದರು.
ಇದನ್ನೂ ಓದಿ : ಚಾಮರಾಜಪೇಟೆಯ ಈದ್ಗಾ ಮೈದಾನ ವಿವಾದ..ಹೈಕೋರ್ಟ್ ತೀರ್ಪು ಸ್ವಾಗತಿಸಿದ ಬಿ ಎಸ್ ಯಡಿಯೂರಪ್ಪ