ಬೆಂಗಳೂರು: ನೆರೆ ಪೀಡಿತ ಕಲಬುರ್ಗಿಯಲ್ಲಿ ಸತತ 8 - 10 ಗಂಟೆ ಕಾಲ ನಾನು ನೆರೆ ಪರಿಶೀಲನೆ ಮಾಡಿದ್ದೇನೆ. ಕಾಂಗ್ರೆಸ್ ದೊಡ್ಡ ನಾಯಕರು ಎನಿಸಿಕೊಂಡವರು ಯಾರೂ ಬಂದೇ ಇಲ್ಲ ಎಂದು ಕಂದಾಯ ಸಚಿವ ಆರ್. ಅಶೋಕ್ ತಿರುಗೇಟು ನೀಡಿದರು.
ಆರ್.ಆರ್. ನಗರದಲ್ಲಿ ಮಾತನಾಡಿದ ಅವರು, ಕಂದಾಯ ಸಚಿವರಿಂದ ನಾಮಕಾ ವಾಸ್ತೆ ನೆರೆ ಪರಿಶೀಲನೆ ಎಂಬ ಪ್ರತಿಪಕ್ಷದ ಆರೋಪ ವಿಚಾರವಾಗಿ ಪ್ರತಿಕ್ರಿಯಿಸುತ್ತಾ, ಗುಲ್ಬರ್ಗ, ಯಾದಗಿರಿಯಲ್ಲೂ ಚುನಾವಣಾ ನೀತಿ ಸಂಹಿತೆ ಇದೆ. ಅಲ್ಲಿ ವಾಸ್ತವ್ಯ ಹೂಡಕ್ಕಾಗಲ್ಲ. ಕೊರೊನಾ ಹಿನ್ನೆಲೆಯಲ್ಲಿ ಜಿಲ್ಲೆಗಳ ಭೇಟಿ ಮಾಡಬಹುದು ಎಂದರು.
ಸೋಮವಾರ ಬೆಳಗಾವಿ ನೆರೆ ಪರಿಶೀಲನೆ ಮಾಡುತ್ತೇನೆ. ಪ್ರತಿಪಕ್ಷಗಳು ಆರೋಪ ಮಾಡ್ತಾರಲ್ಲ, ನಿನ್ನೆ ಕಲಬುರ್ಗಿ, ಯಾದಗಿರಿಗೆ ಯಾರೂ ಬಂದಿರಲಿಲ್ಲ. ಕಾಂಗ್ರೆಸ್ನ ದೊಡ್ಡ ಲೀಡರ್ಗಳು ನಿನ್ನೆ ಯಾರೂ ಬಂದಿರಲಿಲ್ಲ. ನಾನೇ ಮೊದಲು ಅಲ್ಲಿಗೆ ಹೋದವನು. ನಮ್ಮ ಶಾಸಕರೂ ಬಂದಿದ್ರು ಎಂದು ತಿಳಿಸಿದರು.
ಕಾಂಗ್ರೆಸ್ನವರು ಯಾರೂ ಬರದೇ ಆಪಾದನೆ ಮಾಡೋದು ಸರಿಯಲ್ಲ. ಗುಲ್ಬರ್ಗ, ಯಾದಗಿರಿಯಲ್ಲೇ ಬೆಳಗ್ಗೆಯಿಂದ ಸಂಜೆವರೆಗೂ ಓಡಾಡಿ ಜನರ ಸಂಕಷ್ಟ ಕೇಳಿದ್ದೇನೆ. ನೀತಿ ಸಂಹಿತೆಯಿಂದಾಗಿ ನಾನು ವಾಪಸ್ ಬಂದೆ ಎಂದು ಸ್ಪಷ್ಟಪಡಿಸಿದರು.
ನಾನೂ ಒಕ್ಕಲಿಗ:
ಆರ್.ಆರ್ ನಗರದಲ್ಲಿ ಜಾತಿ ಆಧಾರಿತ ರಾಜಕಿಯ ಇಲ್ಲ. ನಾನೂ ಒಕ್ಕಲಿಗನೇ. ಕ್ಷೇತ್ರದಲ್ಲಿ ಒಕ್ಕಲಿಗರ ಪಾಳಯಗಾರಿಕೆ ತಗೊಳ್ಳಲು ಯಾರಿಂದಲೂ ಸಾಧ್ಯವಿಲ್ಲ. ಯಾಕಂದ್ರೆ ಇಲ್ಲಿ ಕಾಂಗ್ರೆಸ್ಗೆ ತಳವೇ ಇಲ್ಲ ಎಂದು ಡಿಕೆಶಿಗೆ ಸಚಿವ ಆರ್. ಅಶೋಕ್ ಟಾಂಗ್ ನೀಡಿದರು.
ಇಲ್ಲಿನ ಜನ ಮುನಿರತ್ನ ಮುಖ ನೋಡಿ ಕಾಂಗ್ರೆಸ್ ಗೆಲ್ಲಿಸಿದ್ರು ಅಷ್ಟೇ ಹೊರತು ಡಿಕೆಶಿ, ಸಿದ್ದರಾಮಯ್ಯ ಮುಖ ನೋಡಿ ಕಾಂಗ್ರೆಸ್ ಗೆಲ್ಲಿಸಿರಲಿಲ್ಲ. ಬಿಜೆಪಿಗೆ ಜನ ಬೆಂಬಲ ಕೊಟ್ಟಿದ್ದಾರೆ. ಇಲ್ಲಿ ನಮಗೂ ಜೆಡಿಎಸ್ಗೂ ಸ್ಪರ್ಧೆ. ಕಾಂಗ್ರೆಸ್ನವ್ರೆಲ್ಲಾ ಜೆಡಿಎಸ್ ಸೇರ್ತಿದ್ದಾರೆ. ಹೀಗಾಗಿ ಇಲ್ಲಿ ಬಿಜೆಪಿ-ಜೆಡಿಎಸ್ಗೆ ಫೈಟ್ ಇದೆ ಎಂದು ತಿರುಗೇಟು ನೀಡಿದರು.
ಆರ್.ಆರ್ ನಗರದಲ್ಲಿ ನಾನೇ ಉಸ್ತುವಾರಿ. ಹೀಗಾಗಿ ಮುನಿರತ್ನರನ್ನು ಗೆಲ್ಲಿಸೋ ಜವಾಬ್ದಾರಿ ನನ್ನ ಮೇಲಿದೆ. ಗೋವಿಂದರಾಜು, ಕಮಕೇಶ್ರಂಥ ಸ್ಥಳೀಯ ಮುಖಂಡರ ಸೇರ್ಪಡೆಯಿಂದ ನಮಗೆ ದೊಡ್ಡ ಶಕ್ತಿ ಬಂದಿದೆ. ಇವರ ಸೇರ್ಪಡೆಯಿಂದ ಶೇ.80ರಷ್ಟು ನಾವು ಗೆದ್ದ ಹಾಗೆ. ಕಾಂಗ್ರೆಸ್ನ ಒಂದೊಂದೇ ಕಂಬಗಳು ಇಲ್ಲಿ ಬೀಳ್ತಿವೆ. ಹೀಗಾಗಿ ಕಾಂಗ್ರೆಸ್ ಮುಖಂಡರು ಜೆಡಿಎಸ್ ಮುಖಂಡರನ್ನು ಸೆಳೀತಿದ್ದಾರೆ ಎಂದರು.
ಬಂಡೆ ಆಟ ನಡೆಯಲ್ಲ:
ಆರ್.ಆರ್. ನಗರದಲ್ಲಿ ಬಂಡೆ ಆಟ, ಕನಕಪುರದ ಆಟ ನಡೆಯಲ್ಲ. ಇಲ್ಲಿ ರಾಜರಾಜೇಶ್ವರಿ ನಗರದ ಆಟನೇ ನಡೆಯೋದು. ಬಂಡೆ ಸಂಸ್ಕೃತಿಗೆ ಈ ಕ್ಷೇತ್ರದ ಜನ ಬೆಲೆ ಕೊಡಲ್ಲ. ಆರ್.ಆರ್. ನಗರದ ಜನ ಸುಸಂಸ್ಕೃತರು, ಪ್ರಜ್ಞಾವಂತರು. ಇಲ್ಲಿನ ಜನ ವಿನಯಕ್ಕೆ, ಸಂಸ್ಕೃತಿಗೆ ಬೆಲೆ ಕೊಡೋರು. ದಾದಾಗಿರಿಗೆ, ಗೂಂಡಾಗಿರಿಗೆ ಇಲ್ಲಿನ ಜನ ಬೆಲೆ ಕೊಡಲ್ಲ ಎಂದು ಕಿಡಿ ಕಾರಿದರು.
ಕಾಂಗ್ರೆಸ್ಗೆ ಸಾಮಾನ್ಯ ಜ್ಞಾನ ಇಲ್ವಾ?:
ಕಾಂಗ್ರೆಸ್ನವ್ರ ವಿರುದ್ಧ ನೀತಿಸಂಹಿತೆ ಉಲ್ಲಂಘನೆ ದೂರು ವಿಚಾರವಾಗಿ ಪ್ರತಿಕ್ರಿಯಿಸಿದ ಸಚಿವರು, ಕೇಸ್ ಹಾಕಿದ್ದು ಚುನಾವಣಾ ಆಯೋಗ, ಸರ್ಕಾರ ಅಲ್ಲ. ಕಾಂಗ್ರೆಸ್ಗೆ ಇಷ್ಟೂ ಸಾಮಾನ್ಯ ಜ್ಞಾನ ಇಲ್ವಾ ಎಂದು ವಾಗ್ದಾಳಿ ನಡೆಸಿದರು.
ನಿನ್ನೆ ಕಾಂಗ್ರೆಸ್ನವರು ಧರಣಿ ಮಾಡಿದ್ದಾರೆ. ಕಾಂಗ್ರೆಸ್ನವರು ಕಾರ್ನಲ್ಲಿ ಎಷ್ಟು ಜನ ಬೇಕಾದ್ರೂ ಹೋಗಿ ನಾಮಿನೇಷನ್ ಸಲ್ಲಿಸಬಹುದಾ? ಬೇರೆಯವರು ಮೂರು ಜನ ಮಾತ್ರ ಹೋಗಿ ನಾಮಪತ್ರ ಸಲ್ಲಿಸಿದ್ದೇವೆ. ನಮಗೊಂದು ಅವರಿಗೊಂದು ಕಾನೂನಾ? ಅವರಿಗೋಸ್ಕರ ಸಂವಿಧಾನ ಬದಲಾಯಿಸಬೇಕಾ? ನಾವು ಅವರಿಗೆ ಬ್ಯಾರಿಕೇಡ್ ತಳ್ಳಿ ಹೋಗಿ ಅಂದ್ವಾ? ಕಾನೂನಿಗೆ ದ್ರೋಹ ಬಗೆಯೋದು ಕಾಂಗ್ರೆಸ್ನವರಿಗೆ ಒಳ್ಳೇದು ಅನ್ಸುತ್ತಾ ಎಂದು ಪ್ರಶ್ನಿಸಿದರು.