ಬೆಂಗಳೂರು: ಮಾಜಿ ಸಿಎಂಗಳಾದ ಹೆಚ್.ಡಿ. ಕುಮಾರಸ್ವಾಮಿ ಮತ್ತು ಸಿದ್ದರಾಮಯ್ಯ ಇಬ್ಬರೂ ಸರ್ಟಿಫಿಕೇಟ್ ಏಜೆನ್ಸಿ ಓಪನ್ ಮಾಡಿದ್ದಾರೆ. ಆ ಮೂಲಕ ಸಿದ್ದರಾಮಯ್ಯ ಸಿಎಂ ಆಗಲ್ಲ ಎಂದು ಕುಮಾರಸ್ವಾಮಿ, ಕುಮಾರಸ್ವಾಮಿ ಸಿಎಂ ಆಗಲ್ಲ ಎಂದು ಸಿದ್ದರಾಮಯ್ಯ ಸರ್ಟಿಫಿಕೇಟ್ ಕೊಡುತ್ತಿದ್ದಾರೆಂದು ಕಂದಾಯ ಸಚಿವ ಆರ್. ಅಶೋಕ್ ವ್ಯಂಗ್ಯವಾಡಿದ್ದಾರೆ.
ಇಂದು ಬೆಳಗ್ಗೆ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ನಿವಾಸಕ್ಕೆ ಭೇಟಿ ನೀಡಿದ ಸಚಿವ ಆರ್. ಅಶೋಕ್, ಇಬ್ಬರೂ ಮಾಜಿ ಸಿಎಂಗಳ ನಡುವಿನ ಪರಸ್ಪರ ಆರೋಪ ಮತ್ತು ಕಿತ್ತಾಟಗಳ ಕುರಿತು ಮಾತನಾಡಿದರು. ಇಬ್ಬರೂ ನಾಯಕರು ಪರಸ್ಪರ ಕಿತ್ತಾಡುತ್ತಿದ್ದು, ಒಬ್ಬರಿಗೊಬ್ಬರು ಇನ್ನು ಮುಂದೆ ಸಿಎಂ ಆಗುವುದಿಲ್ಲ ಎಂದು ಸರ್ಟಿಫಿಕೇಟ್ ಕೊಟ್ಟುಕೊಳ್ಳುತ್ತಿದ್ದಾರೆ. ಅವರು ಹೇಳುತ್ತಿರುವುದು ನಿಜ. ಹಾವು ಮುಂಗುಸಿ ರೀತಿಯಲ್ಲಿ ಜಗಳವಾಡುತ್ತಿರುವ ಅವರು ಇನ್ನೆಂದೂ ಸಿಎಂ ಆಗುವುದಿಲ್ಲ. ಕುಮಾರಸ್ವಾಮಿ ಮತ್ತು ಸಿದ್ದರಾಮಯ್ಯ ಜಗಳದಲ್ಲಿ ಅವರಿಬ್ಬರ ಪಕ್ಷಗಳು ಫುಟ್ಪಾತ್ಗೆ ಬಂದು ನಿಂತಿವೆ. ಕಾಂಗ್ರೆಸ್ ಮತ್ತು ಜೆಡಿಎಸ್ ಮುಗಿದ ಅಧ್ಯಾಯ. ದೇಶದಲ್ಲಿ ಮತ್ತು ರಾಜ್ಯದಲ್ಲಿ ಬಿಜೆಪಿ ಪ್ರಬಲವಾಗಿದ್ದು, ನಮ್ಮ ಪಕ್ಷವಷ್ಟೇ ಅಧಿಕಾರ ನಡೆಸಲಿದೆ. ಈ ಬಾರಿ ಅತ್ಯುತ್ತಮ ಬಜೆಟ್ ಮಂಡಿಸಲಿದ್ದೇವೆ ಎಂದು ಅಶೋಕ್ ಹೇಳಿದರು.