ದೇವನಹಳ್ಳಿ : ಆರ್ ಆರ್ ನಗರ ಮತ್ತು ಶಿರಾ ಉಪಚುನಾವಣೆಯಲ್ಲಿ ಬಿಜೆಪಿ ಹಣ ಹಂಚಿಕೆ ಬಗ್ಗೆ ಸಿದ್ದರಾಮಯ್ಯ ಆರೋಪಕ್ಕೆ ಪ್ರತಿಕ್ರಿಯಿಸಿರುವ ಕಂದಾಯ ಸಚಿವ ಆರ್ ಅಶೋಕ್, ಈ ದೇಶದಲ್ಲಿ ಚುನಾವಣೆ ವ್ಯವಸ್ಥೆ ಒಂದು ವೇಳೆ ಹಾಳಾಗಿದ್ದಾರೆ ಅದಕ್ಕೆ ಮೂಲ ಕಾರಣ ಕಾಂಗ್ರೆಸ್. ದೇಶದಲ್ಲಿ ಹಣ ಮತ್ತು ಹೆಂಡ ಮೊದಲಿಗೆ ಹಂಚಿದ್ದು ಕಾಂಗ್ರೆಸ್ ಎಂದು ಕಿರಿಕಾರಿದ್ದಾರೆ.
ದೇವನಹಳ್ಳಿ ಪಟ್ಟಣದ ಜೂನಿಯರ್ ಕಾಲೇಜ್ ಕ್ರೀಡಾಂಗಣದಲ್ಲಿ ನಡೆದ 65 ನೇ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿದ ಜಿಲ್ಲಾ ಉಸ್ತುವಾರಿ ಸಚಿವ ಮತ್ತು ಕಂದಾಯ ಸಚಿವ ಆರ್ ಅಶೋಕ್ ಕಾಂಗ್ರೆಸ್ ವಿರುದ್ಧ ವಾಗ್ಥಳಿ ನಡೆಸಿದರು. ಆರ್ ಆರ್ ನಗರ ಮತ್ತು ಶಿರಾ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ಹಣ ಹಂಚಿಕೆ ಮಾಡಲಾಗಿದೆ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಆರೋಪ ಮಾಡಿದರು. ಸಿದ್ದರಾಮಯ್ಯನವರ ಹೇಳಿಕೆ ತಿರುಗೇಟು ನೀಡಿದ ಆರ್ ಅಶೋಕ್, ಹಣ ಹೆಂಡ ಹಂಚಿ ಚುನಾವಣೆ ಗೆಲ್ಲುವುದು ಕಾಂಗ್ರೆಸ್ ಪಕ್ಷಕ್ಕೆಅಭ್ಯಾಸವಾಗಿದೆ ಎಂದಿದ್ದಾರೆ.
ದೇಶದಲ್ಲಿ ಮೊದಲು ಹಣ, ಹೆಂಡದ ಸಂಸ್ಕೃತಿ ತಂದಿದ್ದು ಕಾಂಗ್ರೆಸ್, ಇಡೀ ಚುನಾವಣಾ ವ್ಯವಸ್ಥೆ ಹಾಳಾಗಿದ್ರೆ ಅದಕ್ಕೆ ಮೂಲ ಪುರುಷರು ಕಾಂಗ್ರೆಸ್ನವರು. ಬಹಳ ವರ್ಷಗಳ ಹಿಂದೆಯೇ ಇವರ ಅನಾಚಾರ ಸಂಸ್ಕೃತಿ ಬಯಲಿಗೆ ಬಂದಿದೆ.
40-50 ವರ್ಷಗಳ ಹಿಂದೆಯೆ ಈ ಪರಂಪರೆ ಹುಟ್ಟು ಹಾಕಿದ ಮಹಾನ್ ಪುರುಷರು ಕಾಂಗ್ರೆಸ್ಸಿಗರು. ಚುನಾವಣಾ ಫಲಿತಾಂಶದ ಬಳಿಕ ಏನು ಹೇಳಬೇಕೆಂದು ಈಗ್ಲೆ ಸಿದ್ದರಾಗ್ತಾ ಇದ್ದಾರೆ. ಚುನಾವಣೆಯಲ್ಲಿ ಗ್ಯಾರೆಂಟಿ ಸೋಲ್ತೀವಿ ಅನ್ನೂದು ಗೊತ್ತಾಗಿದೆ. ಫಲಿತಾಂಶ ಬಳಿಕ ಏನಾದರೂ ಡೈಲಾಗ್ ಬೇಕಲ್ಲ ಅವರಿಗೆ. ಆದ್ದರಿಂದ ಬಿಜೆಪಿ ಹಣ, ಹೆಂಡ ಹಂಚಿ ಗೆದ್ರು ಅಂತ ಹೇಳುತ್ತಿದ್ದಾರೆ,
ಬಿಜೆಪಿಗೆ ಹಣ, ಹೆಂಡ ಹಂಚಿ ಗೆಲ್ಲುವ ಅವಶ್ಯಕತೆ ಇಲ್ಲ. ಅದನ್ನ ಕಾಂಗ್ರೆಸ್ಗೆ ಬಿಟ್ಟಿದೀವಿ. ಎರಡು ಕ್ಷೇತ್ರದಲ್ಲೂ ದೊಡ್ಡ ಅಂತರದಲ್ಲಿ ಗೆಲ್ತಿವಿ. ಒಂದು ವರ್ಷದ ಸಮ್ಮಿಶ್ರ ಸರ್ಕಾರದ ಬಗ್ಗೆ ಹೇಳಿರುವ ಕುಮಾರಸ್ವಾಮಿ ನಿದ್ದೆ ಮಾಡ್ಲಿಕ್ಕೆ ಬಿಡಲಿಲ್ಲ. ಅವರು ವಿಷವನ್ನೇ ಕಕ್ಕಿದ್ದಾರೆ. ಕಾಟ ಕೊಟ್ಟು ನಮ್ಮ ಸರ್ಕಾರ ಬೀಳಿಸಿದ್ದೇ ಸಿದ್ದರಾಮಯ್ಯ, ಡಿ.ಕೆ.ಶಿ ಎಂದು ಕುಮಾರಸ್ವಾಮಿ ಆರೋಪಿಸುತ್ತಿದ್ದಾರೆ ಎಂದರು.
ಇದೇ ವೇಳೆ ಎಂ.ಇ.ಎಸ್ ಪುಂಡಾಟಿಕೆ ವಿರುದ್ದ ಕಿಡಿಕಾರಿದ ಕಂದಾಯ ಸಚಿವ ಆರ್.ಅಶೋಕ್, ಬೆಳಗಾವಿಯಲ್ಲಿ ಕನ್ನಡದ ಬಾವುಟದ ಬಗ್ಗೆ ಮಾತನಾಡಿದ್ರೆ, ಯಾವ ಭಾಷೆಯಲ್ಲಿ ಕಲಿಸಬೇಕೊ ಅದೇ ಭಾಷೆಯಲ್ಲಿ ತಕ್ಕ ಪಾಠ ಕಲಿಸ್ತೇವೆ, ಬೆಳಗಾವಿ ಕರ್ನಾಟಕದ ಅವಿಭಾಜ್ಯ ಅಂಗ ಎಂದರು.