ಬೆಂಗಳೂರು: ರಾಹುಲ್ ಗಾಂಧಿ ಎಂದಾದರು ಹೊಲ ಉತ್ತಿದ್ದಾರಾ?, ಕೆಸರು ಗೆದ್ದೆಯಲ್ಲಿ ಕೆಲಸ ಮಾಡಿದ್ದಾರಾ? ಎಂದು ಸಚಿವ ಆರ್.ಅಶೋಕ್ ಟಾಂಗ್ ನೀಡಿದ್ದಾರೆ.
ರಾಜ್ಯ ಬಿಜೆಪಿ ರೈತ ಮೋರ್ಚಾ ಕಾರ್ಯಕಾರಿಣಿ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ರಾಹುಲ್ ಗಾಂಧಿ ಅವರ ತಾಯಿ, ತಂದೆ, ಅಜ್ಜಿ, ಅಜ್ಜ ಯಾರೂ ಕೃಷಿಕರಾಗಿ ಕೆಲಸ ಮಾಡಿಲ್ಲ. ಅವರಿಗೆ ಕೃಷಿ ಪರಂಪರೆಯೇ ಗೊತ್ತಿಲ್ಲ. ಅವರು ಕೃಷಿ ಬಗ್ಗೆ ಪಾಠ ಮಾಡುತ್ತಿದ್ದಾರೆ ಎಂದು ಕಿಡಿ ಕಾರಿದರು.
ಇಲ್ಲಿ ಕಾಂಗ್ರೆಸ್ ನವರ ಡೋಂಗಿ ನೀತಿ ಕಾಣುತ್ತಿದೆ. ರೈತರನ್ನು ಎತ್ತಿ ಕಟ್ಟುತ್ತಿದ್ದಾರೆ. ಅಧಿಕಾರದಲ್ಲಿ ಇರುವಾಗ ಅವರಿಗೆ ಭೂ ಸುಧಾರಣೆಗೆ ತಿದ್ದುಪಡಿ ಬೇಕು ಅನಿಸಿತ್ತು. ಈಗ ಪ್ರತಿಪಕ್ಷದಲ್ಲಿ ಇದ್ದಾಗ ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಆಡಳಿತದಲ್ಲಿದ್ದಾಗ ಪರ, ಪ್ರತಿಪಕ್ಷದಲ್ಲಿ ಇದ್ದಾಗ ವಿರೋಧ. ಇದು ಕಾಂಗ್ರೆಸ್ನ ಡೋಂಗಿ ನೀತಿಯಾಗಿದೆ ಎಂದು ವಾಗ್ದಾಳಿ ನಡೆಸಿದರು.
ಪ್ರೊ.ನಂಜುಂಡಸ್ವಾಮಿ ಅವರೇ 79 a, b ಯನ್ನು ರದ್ದುಪಡಿಸಲು ಪ್ರತಿಪಾದಿಸಿದ್ದರು. ಅದು ಸಂವಿಧಾನ ವಿರೋಧಿ ಎಂದು ಹೇಳಿದ್ದರು. ಆರ್.ಅಶೋಕ್ ಇದನ್ನು ಹೇಳಿಲ್ಲ. ಆವತ್ತು ಪ್ರೊ.ನಂಜುಂಡಸ್ವಾಮಿಯವರೇ ಹೇಳಿದ್ದರು. ಈಗ ಅವರು ಇದ್ದಿದ್ದರೆ ಕಾಂಗ್ರೆಸ್‌ನವರು ಪ್ರೊ.ನಂಜುಡಸ್ವಾಮಿ ರೈತರೇ ಅಲ್ಲ ಎಂದು ಹೇಳುತ್ತಿದ್ದರು ಎಂದರು.
ತಮಿಳುನಾಡು, ಆಂಧ್ರ, ಮಹಾರಾಷ್ಟ್ರದಲ್ಲಿ ಈ ಕಾಯ್ದೆನೇ ಇಲ್ಲ. ಹಾಗಾದರೆ ಅಲ್ಲಿ ಎಲ್ಲ ರೈತರು ತಮ್ಮ ಭೂಮಿಯನ್ನು ಮಾರಿ ಬಿಟ್ಟು ಹೋಗಿದ್ದಾರಾ?. ಕಾಂಗ್ರೆಸ್ ನವರು ಬೊಗಳೆ ಬಿಡ್ತಾರೋ. ಬೊಗಳೋದು ಗೊತ್ತಿಲ್ಲ. ಗುಜರಾತ್ನ ಕೃಷಿ ಉತ್ಪನ್ನಗಳನ್ನು ರಪ್ತು ಮಾಡುತ್ತಿರುವ ಪ್ರಮಾಣ 18.8%. ಕರ್ನಾಟಕದ ಕೃಷಿ ಉತ್ಪನ್ನಗಳ ರಪ್ತು ಪ್ರಮಾಣ 7.5%. ನಾವು ಏಳನೇ ಸ್ಥಾನದಲ್ಲಿದ್ದೇವೆ. ನಾವು ಮೊದಲ ಸ್ಥಾನಕ್ಕೆ ಹೋಗಬೇಕಲ್ಲಾ? ಎಂದು ಪ್ರಶ್ನಿಸಿದರು.
ಕೋಡಿಹಳ್ಳಿ ಸಮಸ್ಯೆಯನ್ನು ಬಗೆಹರಿಸುತ್ತೇವೆ: ರಾಜ್ಯದಲ್ಲಿ 11.79 ಲಕ್ಷ ಹೆಕ್ಟೇರ್ ಜಮೀನನ್ನು ಬೀಡು ಬಿಡಲಾಗಿದೆ. ಯಾವುದೇ ಉಳುಮೆ ಮಾಡುತ್ತಿಲ್ಲ. ಕೋಡಿಹಳ್ಳಿಯವರು ಇದರ ಬಗ್ಗೆ ಗಮನ ಕೊಟ್ಟಿದ್ದಾರಾ? ಇದರ ಬಗ್ಗೆ ಅವರ ಮಾತನಾಡುವುದಿಲ್ಲ ಎಂದ ಅವರು ಕೆಜಿ ಹಳ್ಳಿ ಆಯಿತು, ಡಿಜೆ ಹಳ್ಳಿ ಆಯಿತು. ಈಗ ಕೋಡಿಹಳ್ಳಿ ಬಂದಿದೆ. ಕೋಡಿಹಳ್ಳಿ ಸಮಸ್ಯೆಯನ್ನೂ ಸರ್ಕಾರ ಬಗೆಹರಿಸುತ್ತದೆ. ಎಲ್ಲ ಸಮಸ್ಯೆಯನ್ನು ಸರ್ಕಾರ ಬಗೆಹರಿಸಿದೆ. ಈ ಕೋಡಿಹಳ್ಳಿ ಸಮಸ್ಯೆಯನ್ನೂ ಬಗೆಹರಿಸಲಿದೆ ಎಂದು ಸೂಚ್ಯವಾಗಿ ತಿಳಿಸಿದರು.
ಮೊದಲ ಬಾರಿಗೆ ವಿಧಾನಸೌಧ ಲೈಬ್ರೇರಿಗೆ ಹೋಗಿದ್ದೆ: ಭೂ ಸುಧಾರಣೆ ತಿದ್ದುಪಡಿ ವಿಧೇಯಕ ಮಂಡನೆ ಮುನ್ನ ಮೊದಲ ಬಾರಿಗೆ ವಿಧಾನಸೌಧದ ಲೈಬ್ರೇರಿಗೆ ಹೋಗಿದ್ದೆ. ಈ ಮೊದಲು ನಾನು ವಿಧಾನಸೌಧದ ಲೈಬ್ರೇರಿಗೆ ಹೋಗೇ ಇರಲಿಲ್ಲ. ನಾಲ್ಕು ದಿನ ಲೈಬ್ರೇರಿಗೆ ಹೋಗಿ ಅಧ್ಯಯನ ನಡೆಸಿದ್ದೇನೆ. ಈ ಹಿಂದಿನ ಕಾಂಗ್ರೆಸ್ ನಾಯಕರ ಭೂ ಸುಧಾರಣೆ ಕಾಯ್ದೆ ಸಂಬಂಧ ನಿಲುವು, ಹೇಳಿಕೆಗಳ ಬಗ್ಗೆ ಓದಿ ತಿಳಿದುಕೊಂಡೆ. ಈ ಹಿಂದೆ ಕಾಂಗ್ರೆಸ್ ಮುಖಂಡರು ನೀಡಿದ್ದ ಹೇಳಿಕೆಗಳನ್ನು ಸದನದಲ್ಲೇ ಹೇಳಿದ್ದೆ. ಆಗ ಕಾಂಗ್ರೆಸ್ ಸದಸ್ಯರೆಲ್ಲರೂ ಸದನದಿಂದ ಓಡಿ ಹೋದರು ಎಂದು ವಿವರಿಸಿದರು.
ರೈತರ ಹೋರಾಟದಲ್ಲಿ ನುಸುಳಿದ್ದಾರೆ: ಕಾಂಗ್ರೆಸ್‌ನವರಿಗೆ ಕೇಂದ್ರ ಸರ್ಕಾರದ ವಿರುದ್ಧ ಗೂಬೆ ಕೂರಿಸಲು ಏನೂ ಸಿಗುತ್ತಿಲ್ಲ. ಅದಕ್ಕಾಗಿ ರೈತರ ಹೋರಾಟದ ಮಧ್ಯೆ ಕಾಂಗ್ರೆಸ್ ನವರು ನುಸುಳಿದ್ದಾರೆ. ಯಾವಾಗ ಪ್ರತಿಭಟನೆಗೆ ಡಿಕೆಶಿ ಹಾಗೂ ಸಿದ್ದರಾಮಯ್ಯ ಹೋದರೋ ಆಗ ಅದು ಕಾಂಗ್ರೆಸ್ ಬೆಂಬಲಿತವಾಯಿತು ಎಂದು ದೂರಿದರು.