ಬೆಂಗಳೂರು: ಶಾಸಕಾಂಗ ಪಕ್ಷದ ನಾಯಕ ಸ್ಥಾನಕ್ಕೆ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ದಿನೇಶ್ ಗುಂಡೂರಾವ್ ನೀಡಿರುವ ರಾಜೀನಾಮೆ ಸ್ವೀಕರಿಸಬೇಡಿ ಎಂದು ರಾಜ್ಯ ಕಾಂಗ್ರೆಸ್ ಮಹಿಳಾ ಘಟಕದ ಅಧ್ಯಕ್ಷೆ ಪುಷ್ಪಾ ಅಮರನಾಥ್ ಕಾಂಗ್ರೆಸ್ ಹೈಕಮಾಂಡ್ಗೆ ಮನವಿ ಮಾಡಿದ್ದಾರೆ.
ರಾಜ್ಯದ 15 ವಿಧಾನಸಭೆ ಕ್ಷೇತ್ರ ಉಪ ಚುನಾವಣೆಯಲ್ಲಿ ಕಾಂಗ್ರೆಸ್ಗೆ ಹಿನ್ನಡೆ ಉಂಟಾದ ಕಾರಣ ಇಬ್ಬರೂ ನಾಯಕರು ತಮ್ಮ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ. ರಾಜೀನಾಮೆ ವಾಪಸ್ ಪಡೆಯುವಂತೆ ಸಾಕಷ್ಟು ಮಂದಿ ರಾಜ್ಯ ನಾಯಕರು ಒತ್ತಾಯಿಸಿದ್ದರೂ, ಸಿದ್ದರಾಮಯ್ಯ ಹಾಗೂ ದಿನೇಶ್ ಗುಂಡೂರಾವ್ ತಮ್ಮ ರಾಜೀನಾಮೆ ವಾಪಸ್ ಪಡೆಯಲು ನಿರಾಕರಿಸಿದ್ದಾರೆ. ಈ ಹಿನ್ನೆಲೆ ರಾಜ್ಯ ಕಾಂಗ್ರೆಸ್ ಮಹಿಳಾ ಘಟಕದ ಅಧ್ಯಕ್ಷೆ ಪುಷ್ಪಾ ಅಮರನಾಥ್, ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ, ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ಹಾಗೂ ರಾಜ್ಯ ಕಾಂಗ್ರೆಸ್ ಉಸ್ತುವಾರಿ ವೇಣುಗೋಪಾಲ್ ಅವರಿಗೆ ಪತ್ರ ಬರೆದು ಮನವಿ ಮಾಡಿದ್ದಾರೆ.
ಅವರಿಬ್ಬರೂ ಪಕ್ಷ ಸಂಘಟನೆಗೆ, ಉಪಚುನಾವಣೆಯಲ್ಲಿ ಎಲ್ಲ ಕ್ಷೇತ್ರಗಳನ್ನೂ ಗೆಲ್ಲಲು ಶ್ರಮಪಟ್ಟಿದ್ದಾರೆ. ಸೋಲಿಗೆ ಅವರಷ್ಟೇ ಕಾರಣವಲ್ಲ. ಪಕ್ಷದವರೆಲ್ಲ ಸಾಮೂಹಿಕವಾಗಿ ಜವಾಬ್ದಾರಿ ಹೊರಬೇಕಾಗಿದೆ. ರಾಜ್ಯದ ಎಲ್ಲಾ ನಾಯಕರು ಹೊಣೆ ಹೊರುತ್ತೇವೆ. ಇದರಿಂದ ಇಬ್ಬರನ್ನೂ ಕಾರಣವಾಗಿಸುವುದು ಸರಿಯಲ್ಲ. ದಯವಿಟ್ಟು ಇಬ್ಬರೂ ನಾಯಕರ ರಾಜೀನಾಮೆ ನಿರಾಕರಿಸಬೇಕೆಂದು ಪತ್ರದಲ್ಲಿ ಮನವಿ ಮಾಡಿದ್ದಾರೆ.