ಬೆಂಗಳೂರು: ಸಂಚಾರಿ ನಿಯಮ ಉಲ್ಲಂಘನೆ ಮಾಡಿದ್ದಲ್ಲದೆ ತಡೆಯೋಕೆ ಬಂದ ಟ್ರಾಫಿಕ್ ಪೊಲೀಸರಿಗೆ ಉಗಿದು ಸಿನಿಮಾ ಸ್ಟೈಲ್ನಲ್ಲಿ ಎಸ್ಕೇಪ್ ಆಗುತ್ತಿದ್ದ ರೌಡಿಶೀಟರ್ನನ್ನು ಸಾರ್ವಜನಿಕರೇ ಹಿಡಿದು ಹಿಗ್ಗಾಮುಗ್ಗಾ ಥಳಿಸಿದ್ದಾರೆ.
ನಗರದ ಪುಲಿಕೇಶಿ ನಗರ ಪೊಲೀಸ್ ಠಾಣಾ ವ್ಯಾಪ್ತಿಯ ಕ್ಲಾರೆನ್ಸ್ ಶಾಲೆ ಬಳಿ ಈ ಘಟನೆ ನಡೆದಿದ್ದು, ರೌಡಿಶೀಟರ್ ಅರ್ಬಾಜ್ ಅಹಮದ್ ಸಾರ್ವಜನಿಕರಿಂದ ಗೂಸಾ ತಿಂದಿದ್ದಾನೆ. ಎಂದಿನಂತೆ ಟ್ರಾಫಿಕ್ ಪೊಲೀಸರು ಕಾರ್ಯ ನಿರ್ವಹಿಸುತ್ತಿದ್ದರು. ಈ ವೇಳೆ ವ್ಯಕ್ತಿಯೊಬ್ಬ ಹೆಲ್ಮೆಟ್ ಇಲ್ಲದೇ ಬೈಕ್ ಓಡಿಸಿಕೊಂಡು ಬರುತ್ತಿದ್ದ. ಇದನ್ನು ಕಂಡ ಸಂಚಾರಿ ಪೇದೆ ಮಂಜುನಾಥ್ ಬೈಕ್ ಸವಾರನನ್ನು ತಡೆದಿದ್ದಾರೆ.
ರೌಡಿಶೀಟರ್ ಅರ್ಬಾಜ್ ಅಹಮದ್ ತನ್ನನ್ನು ಹಿಡಿಯುತ್ತಾರೆ ಎಂದು ಭಾವಿಸಿ, ತನ್ನ ಪಲ್ಸರ್ ಬೈಕ್ಅನ್ನು ಏಕಾಏಕಿ ಸಿನಿಮಾ ಸ್ಟೈಲ್ನಲ್ಲಿ ವ್ಹೀಲಿಂಗ್ ಮಾಡಿ ಗಾಡಿಯನ್ನು ಉಲ್ಟಾ ತಿರುಗಿಸಿಕೊಂಡಿದ್ದ. ಇದನ್ನು ನೋಡಿದ ಪೊಲೀಸ್ ಪೇದೆ ರೌಡಿಶೀಟರ್ನನ್ನು ಹಿಡಿಯಲು ಯತ್ನಿಸಿದ್ದಾರೆ. ಇದರಿಂದ ಕೋಪಗೊಂಡ ರೌಡಿಶೀಟರ್ ಟ್ರಾಫಿಕ್ ಪೊಲೀಸರಿಂದ ತಪ್ಪಿಸಿಕೊಂಡು ಪೊಲೀಸರ ಮುಖಕ್ಕೆ ಎಂಜಲು ಉಗಿದು ಅವಾಚ್ಯ ಪದಗಳಿಂದ ಬೈದು ಎಸ್ಕೇಪ್ ಆಗಿದ್ದ.
ಇದರಿಂದ ರೊಚ್ಚಿಗೆದ್ದ ಪೊಲೀಸರು, ರೌಡಿಶೀಟರ್ನನ್ನು ಹಿಂಬಾಲಿಸಿದ್ದರು. ಕೊನೆಗೆ ಮುಂದಿನ ಸಿಗ್ನಲ್ ಬಳಿ ಪೊಲೀಸರ ಕೈಗೆ ಸಿಕ್ಕಿಹಾಕಿಕೊಂಡಿದ್ದ. ಈ ವಿಷಯ ತಿಳಿದ ಸಾರ್ವಜನಿಕರು ರೌಡಿಶೀಟರ್ ಅರ್ಬಾಜ್ ಅಹಮದ್‍ಗೆ ಹಿಗ್ಗಾಮುಗ್ಗಾ ಥಳಿಸಿ ಪೊಲೀಸರಿಗೆ ಒಪ್ಪಿಸಿದ್ದಾರೆ. ಈ ಸಂಬಂಧ ಪುಲಿಕೇಶಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.