ಬೆಂಗಳೂರು: ಪೊಲೀಸ್ ಸಬ್ ಇನ್ಸ್‌ಪೆಕ್ಟರ್(ಪಿಎಸ್‌ಐ) ನೇಮಕಾತಿ ಅಕ್ರಮದ ಆರೋಪಿ ಎಡಿಜಿಪಿ ಆಗಿದ್ದ ಅಮೃತ್ ಪಾಲ್‌ಗೆ ಜಾಮೀನು ನೀಡಲು ನಗರದ 24 ನೇ ಹೆಚ್ಚುವರಿ ಸಿಟಿ ಸಿವಿಲ್ ಮತ್ತು ಸೆಷನ್ಸ್ ನ್ಯಾಯಾಲಯ ನಿರಾಕರಿಸಿದೆ. ನ್ಯಾಯಾಂಗ ಬಂಧನದಲ್ಲಿರುವ ಪಾಲ್, ಜಾಮೀನು ಕೋರಿ ಸಲ್ಲಿಸಿರುವ ಅರ್ಜಿಯನ್ನು ನ್ಯಾಯಮೂರ್ತಿ ಕೆ.ಲಕ್ಷ್ಮೀ ನಾರಾಯಣ ಭಟ್ ವಜಾಗೊಳಿಸಿದರು.
ವಿಚಾರಣೆಯಲ್ಲಿ ಸಿಐಡಿ ಪೊಲೀಸರ ಪರ ವಿಶೇಷ ಅಭಿಯೋಜಕ ಪಿ. ಪ್ರಸನ್ನಕುಮಾರ್ ವಾದಿಸಿ, ಅಮೃತ್ ಪಾಲ್ ಪಿಎಸ್‌ಐ ನೇಮಕಾತಿಯ ಉಸ್ತುವಾರಿ ವಹಿಸಿದ್ದರು. ಪರೀಕ್ಷೆಯ ಉತ್ತರ ಪತ್ರಿಕೆಗಳನ್ನು ಇರಿಸಲಾಗಿದ್ದ ಸೇಫ್ ಲಾಕರ್ ಕೀ ಅವರ ಬಳಿಯಿತ್ತು. ಅವುಗಳನ್ನು ತಮ್ಮ ಕಿರಿಯ ಅಧಿಕಾರಿಗಳಿಗೆ ಕೊಟ್ಟು ದುರುಪಯೋಗ ಮಾಡಿದ್ದಾರೆ. ಮುಖ್ಯವಾಗಿ ಪ್ರಕರಣದ ತನಿಖೆ ಇನ್ನೂ ಮುಕ್ತಾಯವಾಗಿರದ ಕಾರಣ ಜಾಮೀನು ನೀಡಬಾರದು ಎಂದು ಕೋರಿದರು.
ಇದನ್ನು ಗಂಭೀರವಾಗಿ ಪರಿಗಣಿಸಿದ ನ್ಯಾಯಪೀಠ ಸೇಫ್ ಲಾಕರ್ ಕೀ ತಮ್ಮ ಅಧೀನ ಅಧಿಕಾರಿಗಳ ಬಳಿಗೆ ಹೋದ ಬಗ್ಗೆ ಅಮೃತ್ ಪಾಲ್ ಸೂಕ್ತ ವಿವರಣೆ ನೀಡಿಲ್ಲ. ಅರ್ಜಿದಾರರು ಎಸಗಿರುವ ಅಪರಾಧ ಕೃತ್ಯವು ಸಮಾಜದ ಮೇಲೆ ದುಷ್ಪರಿಣಾಮ ಬೀರುತ್ತದೆ ಎಂದು ಅಭಿಪ್ರಾಯಪಟ್ಟಿದೆ. ಅಲ್ಲದೆ, ಪ್ರಕರಣದ ಅಕ್ರಮಗಳ ಕುರಿತು ಸಾಕ್ಷಿಗಳು ನೀಡಿರುವ ಹೇಳಿಕೆಯನ್ನು ಮುಖ್ಯ ವಿಚಾರಣೆಯಲ್ಲಿ ಪರೀಕ್ಷಿಸಬೇಕಿದೆ. ಅಮೃತ್ ಪಾಲ್ ರಾಜ್ಯದ ಹಿರಿಯ ಶ್ರೇಣಿ ಅಧಿಕಾರಿಯಾಗಿದ್ದು, ಜಾಮೀನು ಮೇಲೆ ಬಿಡುಗಡೆಯಾದರೆ ಪ್ರಾಸಿಕ್ಯೂಷನ್ ದಾಖಲೆಗಳು ಮತ್ತು ಸಾಕ್ಷಿಗಳ ಮೇಲೆ ಪ್ರಭಾವ ಬೀರುವ ಸಾಧ್ಯತೆಯಿದೆ. ಆದ್ದರಿಂದ ಅವರಿಗೆ ಜಾಮೀನು ನೀಡಲು ಸಾಧ್ಯವಿಲ್ಲ ಎಂದು ಅಭಿಪ್ರಾಯಪಟ್ಟಿತು.
ಇದನ್ನೂ ಓದಿ: ಪಿಎಸ್‌ಐ ಅಕ್ರಮ ನೇಮಕಾತಿ ಪ್ರಕರಣ: ಅಮೃತ್ ಪಾಲ್, ಶಾಂತ್ ಕುಮಾರ್ ಮನೆಯಲ್ಲಿ ಇಡಿ ಶೋಧ