ಬೆಂಗಳೂರು: ಟೋಯಿಂಗ್ ಗದ್ದಲ ಜನಮಾನಸದಿಂದ ಮರೆಯಾಗುವ ಮುನ್ನವೇ ನಡೆದ ಮತ್ತೊಂದು ಘಟನೆಯಲ್ಲಿ ಸಂಚಾರ ಪೊಲೀಸರು ಅಮಾಯಕನ ಮೇಲೆ ಹಲ್ಲೆ ನಡೆಸಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.
ಕೆಲ ದಿನಗಳ ಹಿಂದೆ ಟೋಯಿಂಗ್ ವಿಚಾರದಲ್ಲಿ ಸಂಚಾರ ಅಧಿಕಾರಿ ಅನುಚಿತವಾಗಿ ನಡೆದುಕೊಂಡಿದ್ದು,ಇದೀಗ ಬೈಕ್ ಸವಾರನನ್ನು ತಡೆದು ಟ್ರಾಫಿಕ್ ಪಿಎಸ್ಐ ಹಲ್ಲೆ ನಡೆಸಿದ್ದಾರೆಂದು ಆರೋಪಿಸಲಾಗಿದೆ.
ಕೆಲಸಕ್ಕಾಗಿ ಸಂದರ್ಶನ ಮುಗಿಸಿಕೊಂಡು ಬರುತ್ತಿದ್ದ ಯುವಕನನ್ನು ತಡೆದ ವಿಜಯನಗರ ಸಂಚಾರ ಠಾಣೆ ಪೊಲೀಸರು, ಈ ಹಿಂದೆ ನಿಯಮ ಉಲ್ಲಂಘನೆ ಮಾಡಿರುವ ಪ್ರಕರಣದ ದಂಡ ಕಟ್ಟಲು ಸೂಚಿಸಿದ್ದಾರೆ. ಹಣ ಇಲ್ಲ ಸರ್, ಸಂಬಳ ಬಂದ ತಕ್ಷಣ ದಂಡ ಪಾವತಿ ಮಾಡುವುದಾಗಿ ಯುವಕ ಹೇಳಿದ್ರೂ ಕೂಡ ಸಿಬ್ಬಂದಿ ಕೇಳದೇ ದಂಡ ಕಟ್ಟುವಂತೆ ತಾಕೀತು ಮಾಡಿದ್ದಾರೆ.
ಕೋರ್ಟ್ನಲ್ಲಿ ಹೋಗಿ ಪಾವತಿ ಮಾಡುತ್ತೇನೆ ಸರ್ ಎಂದು ಯುವಕ ಮನವಿ ಮಾಡಿದರೂ ಸಹ, ಇವಾಗ ಒಂದು ಸಾವಿರ ಕಟ್ಟಿ ಹೋಗು ಎಂದು ಪೊಲೀಸರು ಗದರಿದ್ದಾರೆ ಎನ್ನಲಾಗಿದೆ.
ಸರ್, ನಿಜವಾಗಿ ನನ್ನ ಬಳಿ ಹಣ ಇಲ್ಲ, ಸಂಬಳ ಬಂದಾಗ ಕಟ್ಟುತ್ತೇನೆ ಎಂದ್ರು ಬಿಡದ ವಿಜಯನಗರ ಸಂಚಾರಿ ಪೊಲೀಸರು ಯುವಕನ ಕುತ್ತಿಗೆ ಹಿಡಿದು ಎಳೆದಾಡಿ ಹಲ್ಲೆ ನಡೆಸಿ, ಅವಾಚ್ಯ ಶಬ್ದಗಳಿಂದ ಟ್ರಾಫಿಕ್ ಪಿಎಸ್ಐ ಚಂದ್ರಶೇಖರ್ ನಿಂದಿಸಿದ್ದಾರೆ ಎಂದು ಯುವಕ ಆರೋಪಿಸಿದ್ದಾನೆ.
ಕೊನೆಗೆ ಠಾಣೆಗೆ ಕರೆಸಿಕೊಂಡು ಯುವಕನಿಗೆ ಬೆದರಿಕೆ ಹಾಕಿರುವ ಪೊಲೀಸರು, ನನ್ನದೆ ತಪ್ಪು ಎಂದು ಮುಚ್ಚಳಿಕೆ ಬರೆಸಿಕೊಂಡು ಕಳುಹಿಸಿರುವುದಾಗಿ ಯುವಕ ಅಪಾದಿಸಿದ್ದಾನೆ.