ಬೆಂಗಳೂರು: ಆಟೋರಿಕ್ಷಾ ವಾಹನಗಳಿಗೆ ಸಂಬಂಧಿಸಿದಂತೆ ಮೋಟಾರು ವಾಹನ ಕಾಯ್ದೆ ಕಲಂ-74ರ ಅಡಿಯಲ್ಲಿ ಒಪ್ಪಂದ ವಾಹನ ರಹದಾರಿಯನ್ನು ನೀಡಲಾಗುತ್ತಿದೆ ಎಂದು ಉಪಮುಖ್ಯಮಂತ್ರಿ ಹಾಗೂ ಸಾರಿಗೆ ಸಚಿವ ಲಕ್ಷ್ಮಣ್ ಸವದಿ ತಿಳಿಸಿದ್ದಾರೆ.
ಕಾಂಗ್ರೆಸ್ ಸದಸ್ಯ ಐವನ್ ಡಿಸೋಜ ತಮ್ಮ ಪ್ರಶ್ನೆಯಲ್ಲಿ ಮಂಗಳೂರು ಮಹಾನಗರದಲ್ಲಿ 6,000ಕ್ಕೂ ಅಧಿಕ ಆಟೋರಿಕ್ಷಾಗಳು ಸಂಚರಿಸುತ್ತಿದ್ದು, ಪರವಾನಗಿ ಪಡೆದ ಆಟೋರಿಕ್ಷಾಗಳನ್ನು ಮಾರಾಟ ಮಾಡಲು 2019ರ ಮಾರ್ಚ್ 12ರಿಂದ ಸಾಧ್ಯವಾಗುತ್ತಿಲ್ಲ. ಇದರಿಂದ ಹಲವು ಚಾಲಕರು ತೊಂದರೆಗೆ ಒಳಗಾಗಿದ್ದಾರೆ. ಚಾಲಕರ ಈ ಭಾವನೆಯನ್ನು ಉಪಮುಖ್ಯಮಂತ್ರಿಗಳು ನಿವಾರಿಸಬೇಕು ಎಂದು ಕೋರಿದ್ದರು.
ಇದಕ್ಕೆ ಲಿಖಿತ ಉತ್ತರ ನೀಡಿರುವ ಸಚಿವರು, ವಾಹನ ಕಾಯ್ದೆ ಕಲಂ 82(1)ರ ಅಡಿಯಲ್ಲಿ ಆಟೋರಿಕ್ಷಾ ರಹದಾರಿಯ ವರ್ಗಾವಣೆಗೆ ಅವಕಾಶ ಕಲ್ಪಿಸಲಾಗಿದೆ. ಅದರಂತೆ, 1989ನೇ ಕರ್ನಾಟಕ ಮೋಟಾರು ವಾಹನ ನಿಯಮಾವಳಿಗಳ ನಿಯಮ-82(6) ರಲ್ಲಿ ಆಯಾ ಪ್ರಾದೇಶಿಕ ಸಾರಿಗೆ ಪ್ರಾಧಿಕಾರಗಳು ಸಭೆಯಲ್ಲಿ ವಿಷಯ ಮಂಡಿಸಿ ನಿರ್ಣಯ ಕೈಗೊಂಡು ನಿಬಂಧನೆಗಳನ್ನು ವಿಧಿಸಲು ಅವಕಾಶ ಕಲ್ಪಿಸಲಾಗಿದೆ. ಆಟೋರಿಕ್ಷಾ ವಾಹನಗಳನ್ನು ವಾಹನ ಮಾಲೀಕರು ನಿಧನ ಹೊಂದಿದ 30 ದಿನಗಳೊಳಗಾಗಿ, ವಾಹನ ಮಾಲೀಕರು ಮಾರಾಟ ಮಾಡಿದಾಗ ಮತ್ತು ಮಾಲೀಕರ ಉತ್ತರಾಧಿಕಾರ ವರ್ಗಾವಣೆಯ ಸಂದರ್ಭದಲ್ಲಿ ಮೋಟಾರು ವಾಹನ ಕಾಯ್ದೆ ಮತ್ತು ನಿಯಮಾನುಸಾರ ರಹದಾರಿ ವರ್ಗಾವಣೆ ಮಾಡಲು ಕಾನೂನಿನಲ್ಲಿ ಅವಕಾಶವಿರುತ್ತದೆ ಎಂದು ತಿಳಿಸಿದ್ದಾರೆ.
ನಂತರ ಮಾತು ಮುಂದುವರೆಸಿ, 2018ರ ಏಪ್ರಿಲ್ 1ರಿಂದ 2019ರ ಮಾರ್ಚ್ 31ರವರೆಗೆ ಒಟ್ಟು 1039 ಹಾಗೂ 2019ರ ಏಪ್ರಿಲ್ 1 ರಿಂದ ಇಲ್ಲಿಯವರೆಗೆ 16 (ಪರವಾನಗಿದಾರರು ಮೃತಪಟ್ಟಿದ್ದು ವಾರಸುದಾರರಿಗೆ ಮರಣೋತ್ತರ ಪರವಾನಗಿ ವರ್ಗಾವಣೆಗೆ ಸಲ್ಲಿಸಿದ ಅರ್ಜಿಗಳು) ಆಟೋರಿಕ್ಷಾ ರಹದಾರಿಗಳ ವರ್ಗಾವಣೆಗಳನ್ನು ನಮೂದಿಸಲಾಗಿರುತ್ತದೆ. 2015ರ ಜುಲೈ 13 ರ ಮನವಿ ಪತ್ರದಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ಆಟೋರಿಕ್ಷಾ ಯೂನಿಟ್ನವರು ದಕ್ಷಿಣ ಕನ್ನಡ ಜಿಲ್ಲೆ ಜಿಲ್ಲಾಧಿಕಾರಿಗಳು ವಿಶೇಷ ಆದೇಶ ಹೊರಡಿಸಿದ ಹಿನ್ನೆಲೆ 2018 ಮಾರ್ಚ್ 3ರಂದು ಪರವಾನಗಿ ದುರುಪಯೋಗ ಮಾಡಿಕೊಂಡ ಆರೋಪದ ವಿರುದ್ಧ ಹೈಕೋರ್ಟ್ಗೆ ಪಿಟಿಷನ್ ಸಲ್ಲಿಸಲಾಗಿದೆ. ಇದರ ವಿಚಾರಣೆ ಪೂರ್ಣಗೊಳ್ಳದೆ ಹಿನ್ನೆಲೆ ಮಂಗಳೂರು ವ್ಯಾಪ್ತಿಯ ಆಟೋರಿಕ್ಷಾ ಮತ್ತು ಪರವಾನಗಿ ವರ್ಗಾವಣೆಗೆ ತಾತ್ಕಾಲಿಕ ತಡೆ ನೀಡಲಾಗಿದೆ ಎಂದರು.