ಬೆಂಗಳೂರು: ಖಾಸಗಿ ಸಾರಿಗೆ ಸಂಘಟನೆಗಳು ಇಂದು ಸರ್ಕಾರದ ವಿರುದ್ದ ಬಂದ್‌ಗೆ ಕರೆ ನೀಡಿದ್ದು, ರಸ್ತೆಗಿಳಿದ ಕೆಲವು ಆಟೋಗಳು ಮತ್ತು ಕ್ಯಾಬ್ಗಳ ವಿರುದ್ದ ಪ್ರತಿಭಟನಾನಿರತರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಬಂದ್ ನಡುವೆ ಸೇವೆ ಸಲ್ಲಿಸುತ್ತಿರುವ ಕೆಲವು ಆಟೋ, ಕ್ಯಾಬ್, ರ‍್ಯಾಪಿಡೋ ಹಾಗೂ ಟ್ಯಾಕ್ಸಿ ಚಾಲಕರ ಮೇಲೆ ಕೆಲ ಪ್ರತಿಭಟನಾಕಾರರು ಹಲ್ಲೆ ನಡೆಸಿದ್ದಾರೆ ಎಂದು ವರದಿಯಾಗಿದೆ.
ಸಂಗೊಳ್ಳಿ ರಾಯಣ್ಣ ಫ್ಲೈ ಓವರ್ ಮೇಲೆ ರ‍್ಯಾಪಿಡೋ ಚಾಲಕನನ್ನು ತಡೆದ 10ಕ್ಕೂ ಹೆಚ್ಚು ಪ್ರತಿಭಟನಾಕಾರರ ತಂಡ ಆತನ ದ್ವಿಚಕ್ರ ವಾಹನ ಕೆಳಕ್ಕೆ ಬೀಳಿಸಿ ಹಲ್ಲೆ ನಡೆಸಿದೆ ಎಂದು ತಿಳಿದುಬಂದಿದೆ.
ಇದನ್ನೂ ಓದಿ: ಬೆಂಗಳೂರಿನಲ್ಲಿ ಖಾಸಗಿ ಸಾರಿಗೆ ಬಂದ್, ಬೇಡಿಕೆ ಈಡೇರಿಸಲು ಆಗ್ರಹ; ಸರ್ಕಾರದಿಂದ ಹೆಚ್ಚುವರಿ ಬಸ್ ವ್ಯವಸ್ಥೆ
ದಿನದ ಸಂಪಾದನೆ ನಂಬಿಕೊಂಡು ಬದುಕುತ್ತಿದ್ದಾರೆ. ಸಾಲ ಪಡೆದು ಖರೀದಿಸಿರುವ ವಾಹನಗಳ ಇಎಂಐ ಕಟ್ಟಬೇಕಿದೆ ಎಂದು ಕೆಲವು ಚಾಲಕರು ಎಂದಿನಂತೆ ಕಾರ್ಯ ನಿರ್ವಹಿಸುತ್ತಿದ್ದಾರೆ. ಅಂಥವರನ್ನು ಗಮನಿಸಿ ಆಕ್ರೋಶ ವ್ಯಕ್ತಪಡಿಸುತ್ತಿರುವ ಕೆಲ ಪ್ರತಿಭಟನಾಕಾರರು, ಅವರನ್ನು ತಡೆದು ಹಲ್ಲೆ ಮಾಡುತ್ತಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಮೌರ್ಯ ಸರ್ಕಲ್‌ನಲ್ಲಿ ಈ ಘಟನೆ ನಡೆಯಿತು. ಚಾಲಕನೊಬ್ಬ ವೈಟ್ ಬೋರ್ಡ್ ಕಾರಲ್ಲಿ ಪ್ರಯಾಣಿಕನನ್ನು ಕರೆದೊಯ್ಯುತ್ತಿದ್ದಾಗ ಅಡ್ಡಗಟ್ಟಿ ಕಾರು ಕೀ ಕಸಿದು, ಚಕ್ರದ ಗಾಳಿ ತೆಗೆದು ಆಕ್ರೋಶ ಹೊರಹಾಕಿದರು.
ಕ್ಯಾಬ್ಗೆ ಮೊಟ್ಟೆ ಎಸೆದು ಆಕ್ರೋಶ: ನಗರದ ಹೆಬ್ಬಾಳದ ಬಳಿ ಖಾಸಗಿ ಬಂದ್ ಬೆಂಬಲ ನೀಡದೆ ರಸ್ತೆಗಿಳಿದ ಕ್ಯಾಬ್ಗಳಿಗೆ ಪ್ರತಿಭಟನಾನಿರತರು ಮೊಟ್ಟೆ ಎಸೆದು ಆಕ್ರೋಶ ವ್ಯಕ್ತಪಡಿಸಿದರು.
ಬೆಂಗಳೂರು ಬಂದ್ ಭಾಗಶಃ ಯಶಸ್ಸು: ಸರ್ಕಾರಿ ಬಸ್ ಸೇವೆ ಹೆಚ್ಚಿಸುವ ಮೂಲಕ ರಾಜ್ಯ ಸರ್ಕಾರ ನೀಡಿರುವ ತಿರುಗೇಟಿನ ನಡುವೆಯೂ ಖಾಸಗಿ ಸಾರಿಗೆ ಸಂಘಟನೆಗಳು ಕರೆ ನೀಡಿದ್ದ ಬೆಂಗಳೂರು ಬಂದ್ ಭಾಗಶಃ ಯಶಸ್ಸು ಕಂಡಿದೆ. ರ‍್ಯಾಪಿಡೋ ಬೈಕ್, ಟ್ಯಾಕ್ಸಿ, ಓಲಾ, ಉಬರ್ ಕ್ಯಾಬ್ ಕಂಪನಿಗಳ ಫೋಟೋಗಳ ಅಣಕು ಶವಯಾತ್ರೆ ನಡೆಸಿ ಸರ್ಕಾರದ ವಿರುದ್ಧ ಆಕ್ರೋಶ ಕಂಡುಬಂತು. ಪೊಲೀಸರು ಪ್ರತಿಭಟನೆಗಷ್ಟೇ ಅನುಮತಿ ನೀಡಿದ್ದರು. ಆದರೆ, ಖಾಸಗಿ ವಾಹನ ಮಾಲೀಕರು, ಚಾಲಕರು ಸೇರಿದಂತೆ ಕೆಲವು ಸಂಘಟನೆಗಳು ರ‍್ಯಾಲಿ ನಡೆಸಿ, ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿ ತಮ್ಮ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿದರು.
ಸರ್ಕಾರದಿಂದ ಹೆಚ್ಚುವರಿ ಬಸ್ ವ್ಯವಸ್ಥೆ: ಮುಷ್ಕರದಿಂದ ಸಾರ್ವಜನಿಕರಿಗೆ ತೊಂದರೆಯಾಗದಂತೆ ಹೆಚ್ಚುವರಿ ಬಿಎಂಟಿಸಿ, ಕೆಎಸ್ಆರ್ಟಿಸಿ ಬಸ್‌ಗಳನ್ನು ರಸ್ತೆಗಿಳಿಸಲಾಗಿದೆ. ಅಲ್ಲದೇ ಮೆಟ್ರೋ ರೈಲು ಸಹ ಹೆಚ್ಚುವರಿ ಓಡಾಟ ನಡೆಸುತ್ತಿದೆ.
ಇದನ್ನೂ ಓದಿ: ಖಾಸಗಿ ವಾಹನ ಚಾಲಕರ ಮಾಲೀಕರ ಮುಷ್ಕರ: ಖಾಸಗಿ ಶಾಲಾ ಮಕ್ಕಳಿಗೆ ರಜೆ ಗೊಂದಲ.. ಒಕ್ಕೂಟದಿಂದ ಹೊರಬೀಳದ ಸ್ಪಷ್ಟ ನಿರ್ಧಾರ