ಬೆಂಗಳೂರು: ಸಿಎಎ ಹಾಗೂ ಎನ್ಆರ್ಸಿ ವಿರೋಧಿಸಿ ದೆಹಲಿಯಲ್ಲಿ ಕೈಗೊಂಡಿದ್ದ ಪ್ರತಿಭಟನೆ ವೇಳೆ ನಡೆದ ಹಿಂಸಾಚಾರ ಖಂಡಿಸಿ ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ ಸಂಘಟನೆಯಿಂದ ರಾಜಭವನದ ಮುಂದೆ ಪ್ರತಿಭಟನೆ ನಡೆಸಲಾಯಿತು.
ಇತ್ತೀಚೆಗೆ ದೆಹಲಿಯಲ್ಲಿ ನಡೆದ ಪ್ರತಿಭಟನೆ ವೇಳೆ ಹಿಂಸಾಚಾರ ನಡೆದಿದ್ದು ಸರಿಯಲ್ಲ. ಪೊಲೀಸರು ಮುಂಜಾಗ್ರತಾ ಕ್ರಮ ಕೈಗೊಳ್ಳದೇ ಇರುವುದು ವಿಷಾದನೀಯ. ಹೀಗಾಗಿ ಕೇಂದ್ರ ಸರ್ಕಾರದ ನಡೆ ವಿರೋಧಿಸಿ ರಾಜಭವನದ ಮುಂದೆ ಪ್ರತಿಭಟನಾಕಾರು ಪ್ರತಿಭಟನೆ ನಡೆಸಿದರು. ರಾಜ್ಯಪಾಲರು ನಮ್ಮ ಮನವಿ ಸ್ವೀಕರಿಸಿ ಕೇಂದ್ರ ಸರ್ಕಾರಕ್ಕೆ ತಿಳಿಸಬೇಕೆಂದು ರಾಜ್ಯಪಾಲರ ಭೇಟಿಗೆ ಪಟ್ಟು ಹಿಡಿದರು.
ಈ ವೇಳೆ ಪೊಲೀಸರು ಹಾಗೂ ಪ್ರತಿಭಟನಾಕಾರರ ನಡುವೆ ಮಾತಿನ ಚಕಮಕಿ ನಡೆಯಿತು. ನೋಡು ನೋಡುತ್ತಿದ್ದಂತೆ ವಾತಾವರಣ ಬದಲಾಯಿತು. ನಂತರ ನೂಕು ನುಗ್ಗಲು ಉಂಟಾಗಿ ಸುಮಾರು 40ಕ್ಕೂ ಹೆಚ್ಚು ಪ್ರತಿಭಟನಾಕಾರರನ್ನು ಪೊಲೀಸರು ವಶಕ್ಕೆ ಪಡೆದುಕೊಂಡರು.
ಈ ವೇಳೆ ಮಾತನಾಡಿದ ಸಂಘಟನೆಯ ರಾಜ್ಯ ಸಮಿತಿ ಸದಸ್ಯ ಮೊಹಮ್ಮದ್ ರಿಯಾಜ್, ಮೋದಿ ಹಾಗೂ ಅಮಿತ್ ಶಾ ಜೋಡಿಯು ಬಿಜೆಪಿ ಹಾಗೂ ಆರ್.ಎಸ್.ಎಸ್ ಕಾರ್ಯಕರ್ತರ ಮೂಲಕ ದೆಹಲಿ ಸಾರ್ವಜನಿಕರ ಮೇಲೆ ಹಿಂಸಾಚಾರ ಮೆರೆದಿದೆ. ಹಿಂಸಾಚಾರಕ್ಕೆ ಕಾರಣವಾಗಿರುವ ಸಿಎಎ ಹಾಗೂ ಎನ್ಆರ್ಸಿ ರದ್ದುಗೊಳಿಸಬೇಕು ಎಂದು ಒತ್ತಾಯಿಸಿದರು.