ಬೆಂಗಳೂರು: ಕಾಂಗ್ರೆಸ್ ಮುಖಂಡ ಡಿಕೆ ಶಿವಕುಮಾರ್ ಅವರನ್ನು ಜಾರಿ ನಿರ್ದೇಶನಾಲಯ ಬಂಧಿಸಿರುವ ಕ್ರಮ ಖಂಡಿಸಿ ನಾಳೆ ಒಕ್ಕಲಿಗ ಸಂಘದಿಂದ ಪ್ರತಿಭಟನೆ ನಡೆಸಲಿದೆ. ಈ ನಿಟ್ಟಿನಲ್ಲಿ ಬೆಂಗಳೂರಿನ ನ್ಯಾಷನಲ್ ಕಾಲೇಜು ಬಳಿಯಿಂದ ಪ್ರತಿಭಟನಾ ರ‍್ಯಾಲಿ ನಡೆಸಲು ಸಂಘ ನಿರ್ಧರಿಸಿದ್ದು, ನಗರಾದ್ಯಂತ ಖಾಕಿ ಕಣ್ಗಾವಲು ಹಾಕಲಾಗಿದೆ.
ಇಂದು ನಗರ ಪೊಲಿಸ್ ಆಯುಕ್ತರ ಕಚೇರಿಯಲ್ಲಿ ಆಯುಕ್ತ ಭಾಸ್ಕರ್ ರಾವ್ ಹಾಗೂ ಟ್ರಾಫಿಕ್ ಹೆಚ್ಚುವರಿ ಆಯುಕ್ತ ರವಿಕಾಂತೇ ಗೌಡ ಹಾಗೂ ಡಿಸಿಪಿಗಳು ಭದ್ರತೆ ಕುರಿತು ಸಮಾಲೋಚನೆ ನಡೆಸಿದ್ದಾರೆ.
ಪೊಲೀಸ್ ಆಯುಕ್ತರ ಸೂಚನೆಗಳೇನು?
- ಸಂಘಟಕರು ಅನುಮತಿಸಿದ ಸ್ಥಳದಲ್ಲೇ ಪ್ರತಿಭಟನೆ ನಡೆಸಬೇಕು.
- ಯಾವುದೇ ಕಾರಣಕ್ಕೂ ಸಾರ್ವಜನಿಕ ರಸ್ತೆಗಳಲ್ಲಿ ವಾಹನ ಸಂಚಾರಕ್ಕೆ ಅಡಚಣೆಯಾಗದಂತೆ ನೋಡಿಕೊಳ್ಳಬೇಕು.
- ಧಾರ್ಮಿಕ, ರಾಜಕೀಯ, ಸಾಮಾಜಿಕ, ಭಾಷಾವಾರು ಅಥವಾ ಸಾಂಸ್ಕ್ರತಿಕ ಗುಂಪು ಕೆರಳಿಸುವ ಘೋಷಣೆ ಅಥವಾ ಪ್ರಚೋದನಾಕಾರಿ ಹೇಳಿಕೆ ನೀಡಬಾರದು.
- ಕರ್ನಾಟಕ ಪೊಲೀಸ್ ಕಾಯ್ದೆ 1963 ರ ಕಲಂ 37ರಲ್ಲಿ ಹೇಳಿರುವ ಅಂಶ ಉಲ್ಲಂಘಿಸುವಂತಿಲ್ಲ.
- ಕಾರ್ಯಕ್ರಮ ನಡೆಯುವ ಸಂದರ್ಭದಲ್ಲಿ ಯಾವುದೇ ಅಹಿತಕರ ಘಟನೆಗಳು ಸಂಭವಿಸಿದರೆ ಆಯೋಜಕರೇ ಹೊಣೆ.
- ಪ್ರತಿಭಟನೆ ಸಂದರ್ಭದಲ್ಲಿ ಪಟಾಕಿ ಹಚ್ಚುವುದು, ಯಾವುದೇ ವಸ್ತುಗಳನ್ನು ಸುಟ್ಟು ಹಾಕುವ ಕೆಲಸ ಮಾಡುವಂತಿಲ್ಲ.
- ಮೆರವಣಿಗೆ ಸಂದರ್ಭದಲ್ಲಿ ಯಾವುದೇ ಆಯುಧಗಳ ಬಳಕೆ ನಿಷೇಧಿಸಲಾಗಿದೆ.
- ಪ್ರತಿಭಟನಾಕಾರರು ಬಲವಂತವಾಗಿ ಅಂಗಡಿ ಮುಂಗಟ್ಟುಗಳು, ಸಂಸ್ಥೆಗಳನ್ನು ಮುಚ್ಚಬಾರದು.
- ಸಾರ್ವಜನಿಕರ ಆಸ್ತಿ, ಪಾಸ್ತಿ ಜೀವ ಹಾನಿ ಮಾಡಬಾರದು.
ಒಂದು ವೇಳೆ ಈ ಎಲ್ಲಾ ನಿಯಮಗಳನ್ನು ಉಲ್ಲಂಘಿಸಿದರೆ ಭಾರತೀಯ ದಂಡ ಸಂಹಿತೆಯ ವಿವಿಧ ಕಲಂಗಳಡಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಆಯುಕ್ತರು ಖಡಕ್ ಎಚ್ಚರಿಕೆ ನೀಡಿದ್ದಾರೆ. ಪ್ರತಿಭಟನೆಯಲ್ಲಿ ಸುಮಾರು 35 ಸಾವಿರ ಜನರು ಭಾಗಿಯಾಗುವ ಹಿನ್ನೆಲೆಯಲ್ಲಿ ಒಟ್ಟು ಎರಡು ಸಾವಿರ ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗುತ್ತಿದೆ.
ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ನೇತೃತ್ವದಲ್ಲಿ, ಇಬ್ಬರು ಹೆಚ್ಚುವರಿ ಆಯುಕ್ತರು, ಟ್ರಾಫಿಕ್ ಆಯುಕ್ತರು, 11ಡಿಸಿಪಿ, ಇನ್ಸ್ಪೆಕ್ಟರ್, ಕಾನ್ಸ್ಟೇಬಲ್, ಹೋಂಗಾರ್ಡ್ ನಿಯೋಜಿಸಲಾಗಿದೆ.