ಬೆಂಗಳೂರು: ಬೇಸಿಗೆ ಸಮೀಪವಾಗುತ್ತಿದ್ದಂತೆ ನಗರದಲ್ಲಿ ನೀರಿನ ಅಭಾವ ಸೃಷ್ಠಿಯಾಗುತ್ತಿದೆ. ಕೆಲವೊಂದು ಕೊಳವೆ ಬಾವಿಗಳು ಬತ್ತಿ ಹೋಗುತ್ತಿವೆ. ಆದರೆ, ಇರುವ ನೀರನ್ನು ಸಮರ್ಪಕವಾಗಿ ಸರಬರಾಜು ಮಾಡದೇ ಕುಡಿಯುವ ನೀರಿನಲ್ಲಿ ತ್ಯಾಜ್ಯ ಸೇರಿ ಕಲುಷಿತಗೊಂಡಿದೆ. ಇದನ್ನು ಬಗೆಹರಿಸಿ ಎಂದು ವಾರ್ಡ್ ನಂ.3 ಮತ್ತು 4ರ ಸಹಾಯಕ ಕಾರ್ಯಪಾಲಕ ಅಭಿಯಂತರ ಸಚಿನ್ ಬಳಿ ದೂರು ನೀಡಿದರೆ ದುರ್ವರ್ತನೆ ತೋರಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.
ಬಿಬಿಎಂಪಿ ವಾರ್ಡ್ ನಂ. 3ರ ವ್ಯಾಪ್ತಿಯ ಬೆಟ್ಟಹಳ್ಳಿಯಲ್ಲಿ ಕುಡಿಯುವ ನೀರಿನ ಅಸಮರ್ಪಕ ಪೂರೈಕೆ ಹಾಗೂ ಕಲುಷಿತಗೊಂಡಿರುವ ಬಗ್ಗೆ ವಾರ್ಡ್ ನಂ. 3 ಮತ್ತು 4ರ ಸಹಾಯಕ ಕಾರ್ಯಪಾಲಕ ಅಭಿಯಂತರ ಸಚಿನ್ ಬಳಿ ದೂರು ನೀಡಿದರೆ ದುರ್ವರ್ತನೆ ತೋರತ್ತಿದ್ದಾರೆಂದು ಆರೋಪಿಸಿದ್ದಾರೆ. ಹೀಗಾಗಿ ಇವರ ದುರ್ನಡತೆ ಖಂಡಿಸಿ ದಲಿತ ಮತ್ತು ಹಿಂದುಳಿದ ವರ್ಗಗಳ ಅಲ್ಪಸಂಖ್ಯಾತರ ಟ್ರಸ್ಟ್ ಹಾಗೂ ಬೆಟ್ಟಹಳ್ಳಿ ಮಹಿಳೆಯರು ಖಾಲಿ ಕೊಡಗಳನ್ನು ಪ್ರದರ್ಶಿಸಿ ಬಿಬಿಎಂಪಿ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದ್ದಾರೆ.
ಪ್ರತಿಭಟನೆಯನ್ನುದ್ದೇಶಿಸಿ ದಲಿತ ಮತ್ತು ಹಿಂದುಳಿದ ವರ್ಗಗಳ ಅಲ್ಪಸಂಖ್ಯಾತರ ಟ್ರಸ್ಟ್ ಗೌರವಾಧ್ಯಕ್ಷ ಎ.ಎಂ.ಕಲಂದರ್ ಮಾತನಾಡಿ, ಚಿಕ್ಕಬೆಟ್ಟಹಳ್ಳಿ, ದೊಡ್ಡಬೆಟ್ಟಹಳ್ಳಿ , ಆದಿತ್ಯನಗರ ಗ್ರಾಮಗಳಲ್ಲಿ ಹೆಚ್ಚಾಗಿ ದಲಿತ ಹಾಗೂ ಹಿಂದುಳಿದ ವರ್ಗಗಳ ಬಡಜನತೆ ವಾಸಿಸುತ್ತಿದ್ದಾರೆ. ನಮಗೆ ಶುದ್ಧ ಕುಡಿಯುವ ನೀರು ಪೂರೈಸದೇ ಬಿಬಿಎಂಪಿ ಸಹಾಯಕ ಕಾರ್ಯಪಾಲಕ ಅಭಿಯಂತರ ಸಚಿನ್ ದುರ್ವರ್ತನೆ ತೋರುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.
ಅಹೋರಾತ್ರಿ ಧರಣಿ: ಇನ್ನೆರಡು ದಿನಗಳಲ್ಲಿ ಸಮಸ್ಯೆ ಬಗೆಹರಿಸುತ್ತೇನೆಂದು ಆಶ್ವಾಸನೆ ನೀಡಿದ್ದಾರೆ. ಇನ್ನೆರಡು ದಿನಗಳಲ್ಲಿ ಸಮಸ್ಯೆ ಬಗೆಹರಿಸದಿದ್ದರೆ ಹೋರಾಟವನ್ನು ತೀವ್ರಗೊಳಿಸಿ, ಬಿಬಿಎಂಪಿ ಕಚೇರಿ ಮುಂದೆ ಅಹೋರಾತ್ರಿ ಧರಣಿ ನಡೆಸುವುದಾಗಿ ಎಚ್ಚರಿಕೆ ನೀಡಿದ್ದಾರೆ.