ಆನೇಕಲ್: ಹೊಸೂರು ರಸ್ತೆಯ ಬೊಮ್ಮಸಂದ್ರದವರೆಗೆ ಆರಂಭಗೊಂಡಿರುವ ಮೆಟ್ರೋ ಕಾಮಗಾರಿ ಗಡಿಭಾಗ ಅತ್ತಿಬೆಲೆವರೆಗೂ ವಿಸ್ತರಿಸಬೇಕೆಂದು ಆಗ್ರಹಿಸಿ ಕನ್ನಡ ಜಾಗೃತಿ ವೇದಿಕೆ ಕಾರ್ಯಕರ್ತರು ಬೃಹತ್ ಪ್ರತಿಭಟನೆ ನಡೆಸಿದರು. ಅತ್ತಿಬೆಲೆಯಲ್ಲಿ ಹೆದ್ದಾರಿ ತಡೆದ ವಿದ್ಯಾರ್ಥಿಗಳು, ಕಾರ್ಯಕರ್ತರು ಮಾನವ ಸರಪಳಿ ನಿರ್ಮಿಸಿ ಮೇಟ್ರೋ ವಿಸ್ತರಣೆಗೆ ಆಗ್ರಹಿಸಿದರು.
ಬೆಂಗಳೂರಿನಿಂದ ಹೊಸೂರಿನ ಹೆದ್ದಾರಿಯ ಸಂಚಾರ ದಟ್ಟಣೆಗೆ ಸೆಡ್ಡು ಹೊಡೆದು ಕಾರ್ಮಿಕರಿಗೆ ನೆರವಾಗಲು ಮೆಟ್ರೋ ಕಾಮಗಾರಿಯನ್ನು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸರ್ಕಾರ ಬೊಮ್ಮಸಂದ್ರದಿಂದ ಅತ್ತಿಬೆಲೆ ವರೆಗೂ ಕಾಮಗಾರಿ ಮುಂದುವರೆಸುವ ಭರವಸೆ ನೀಡಿದ್ದರು. ಆದರೆ ಆನಂತರದಲ್ಲಿ ಬಂದ ಕುಮಾರಸ್ವಾಮಿ ಸರ್ಕಾರ ಈ ಕಾಮಗಾರಿಯನ್ನು ಮೊಟುಕುಗೊಳಿಸಿ ಬೊಮ್ಮಸಂದ್ರದಲ್ಲೇ ನಿಲ್ಲಿಸುವಂತೆ ಪ್ರಭಾವ ಬೀರಿ ಗಡಿ ಭಾಗಕ್ಕೆ ಅನ್ಯಾಯ ಮಾಡಿದ್ದಾರೆಂದು ಕನ್ನಡ ಜಾಗೃತಿ ವೇದಿಕೆ ಆರೋಪಿಸಿ, ಹೆದ್ದಾರಿ ತಡೆದು ಪ್ರತಿಭಟನೆ ನಡೆಸಿತು.
ಈಗಾಗಲೇ ನಾಲ್ಕೈದು ಕೈಗಾರಿಕಾ ಪ್ರದೇಶಗಳನ್ನು ಹೊಂದಿರುವ ಆನೇಕಲ್ ತಾಲೂಕಿನ ಕಾರ್ಮಿಕರು ಬೆಂಗಳೂರಿಗೆ ಪ್ರಯಾಣಿಸಲು ಪ್ರತಿ ದಿನ ಎರೆಡೆರಡು ಬಾರಿ ಹೆಣಗಾಡುವಂತಾಗಿದೆ. ಅಲ್ಲದೆ ಆಸ್ಪತ್ರೆಗೆ, ಶಾಲಾ- ಕಾಲೇಜುಗಳಿಗೆ ತೆರಳಲು ವಿದ್ಯಾರ್ಥಿಗಳು ಪರದಾಡುತ್ತಾರೆ. ಹೀಗಾಗಿ ನಮ್ಮ ಮೆಟ್ರೋವನ್ನು ಕೂಡಲೇ ರಾಜ್ಯ ಸರ್ಕಾರ ಅತ್ತಿಬೆಲೆವರೆಗೂ ವಿಸ್ತರಿಸಿಕೊಡಬೇಕೆಂದು ಆಗ್ರಹಿಸಿದ್ದಾರೆ.