ಬೆಂಗಳೂರು: ಮಿಂಟೋ ಆಸ್ಪತ್ರೆಯ ದಿವ್ಯ ನಿರ್ಲಕ್ಷ್ಯದಿಂದಾಗಿ 22 ರೋಗಿಗಳ ಕಣ್ಣಿನ ಶಸ್ತ್ರಚಿಕಿತ್ಸೆ ವಿಫಲವಾಗಿದೆ. ಅವರನ್ನು ಶಾಶ್ವತ ಕುರುಡರನ್ನಾಗಿ ಮಾಡಿದ್ದಾರೆ ಎಂದು ಆರೋಪಿಸಿ, ಕರವೇ ಕಾರ್ಯಕರ್ತರು ಮಿಂಟೋ ವೈದ್ಯರ ವಿರುದ್ಧ ಪ್ರತಿಭಟನೆ ನಡೆಸಿದ್ದಾರೆ.
ಕರವೇ ಅಧ್ಯಕ್ಷ ನಾರಾಯಣ ಗೌಡ ನೇತೃತ್ವದಲ್ಲಿ ಮಂಗಳವಾರ ಕರವೇ ಕಾರ್ಯಕರ್ತರು ಮಿಂಟೋ ವೈದ್ಯರ ವಿರುದ್ಧ ಪ್ರತಿಭಟನೆ ನಡೆಸಿದ್ದಾರೆ. ಪ್ರತಿಭಟನೆಯನ್ನು ಇಷ್ಟಕ್ಕೆ ಕೈ ಬಿಡದೆ, ನಾವು ರಾಜ್ಯಾದ್ಯಂತ ಪ್ರತಿ ಜಿಲ್ಲೆ ಹಾಗೂ ತಾಲೂಕು ಘಟಕಗಳಲ್ಲೂ ಪ್ರತಿಭಟನೆ ಮಾಡುತ್ತೇವೆ. ನ್ಯಾಯ ಕೇಳಲು ಹೋದ್ರೆ ನಮ್ಮ ಮೇಲೆ ದೂರು ದಾಖಲಿಸಿದ್ದಾರೆ. ಇವರನ್ನು ಯಾರೂ ಪ್ರಶ್ನೆ ಮಾಡಬಾರದೇ? ಇವರೇನು ಸಂವಿಧಾನಕ್ಕೆ ಸಂಬಂಧ ಪಡುವುದಿಲ್ಲವೇ ಎಂದು ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ವೈದ್ಯರ ವಿರುದ್ಧ ಕಿಡಿಕಾರಿದ್ದಾರೆ.
ಜುಲೈ 15ರಂದು 'ಈಟಿವಿ ಭಾರತ'ದಲ್ಲಿ 22 ಜನರ ಕಣ್ಣಿನ ಶಸ್ತ್ರಚಿಕಿತ್ಸೆ ವಿಫಲವಾಗಿದೆ ಎಂಬ ವರದಿ ತಿಳಿದು, ಮಾಹಿತಿಗಾಗಿ ಮಾಧ್ಯಮದವರ ಜೊತೆಗೆ ಆಸ್ಪತ್ರೆಗೆ ಭೇಟಿ ನೀಡಿದಾಗ, ನಮ್ಮ ವಿರುದ್ಧವೇ ಆಸ್ಪತ್ರೆ ಸಿಬ್ಬಂದಿ ಗುಡುಗಿದ್ದಾರೆ. ಅಲ್ಲದೆ ಕೆಲ ಮಹಿಳಾ ಸಂಘಟನೆಗಳ ಕಾರ್ಯಕರ್ತರನ್ನು ಆಸ್ಪತ್ರೆಯ ಆವರಣದಲ್ಲಿ ಉಳಿಸಿಕೊಂಡು ಬೆದರಿಕೆ ಹಾಕಲಾಗಿತ್ತು ಎಂದು ರೋಗಿಗಳ ಸಂಬಂಧಿಕರು ನೋವು ತೋಡಿಕೊಂಡಿದ್ದಾರೆ.
ಇನ್ನೊಂದೆಡೆ ಪರಿಹಾರದ ವಿಚಾರ ಬಂದಾಗ ನಮಗೂ ಅದಕ್ಕೂ ಸಂಬಂಧವಿಲ್ಲ. ಔಷಧಿ ಸರಬರಾಜು ಮಾಡಿದ ಕಂಪನಿ ಇದಕ್ಕೆ ನೇರ ಹೊಣೆ ಎಂದು ಆಸ್ಪತ್ರೆ ಸಿಬ್ಬಂದಿ ಜಾರಿಕೊಂಡಿದ್ದರು. ಇದ್ದ ಕಣ್ಣನ್ನು ಕಳೆದುಕೊಂಡು ಯಾವುದೇ ಕೆಲಸ ಮಾಡಲು ಸಾಧ್ಯವಾಗದೆ, ನವ ಕರ್ನಾಟಕ ರಕ್ಷಣಾ ವೇದಿಕೆಯ ಮೊರೆ ಹೋಗಿದ್ದೆವು. ಆದರೆ ಈಗ ಕರವೇ ವಿರುದ್ಧ ಹಲ್ಲೆಯ ಆರೋಪ ಮಾಡುತ್ತಿದ್ದಾರೆ. ನಾವು ಈ ಬಗ್ಗೆ ಪೊಲೀಸರಿಗೆ ದೂರು ನೀಡಿದ್ದೇವೆ. ಆದರೆ ಈವರೆಗೂ ಯಾವುದೇ ಕ್ರಮ ಕೈಗೊಂಡಿಲ್ಲ. ಅವರೊಳಗೆ ಏನು ನಡೆದಿದೆ ಎಂಬುದು ನಮಗೆ ತಿಳಿದಿಲ್ಲ ಎಂಬ ಎಕ್ಸ್ಕ್ಲೂಸಿವ್ ಮಾಹಿತಿಯನ್ನು ಈಟಿವಿ ಭಾರತಕ್ಕೆ ರೋಗಿಗಳ ಸಂಬಂಧಿಕರು ನೀಡಿದ್ದಾರೆ.
ದಿನೇ ದಿನೇ ಅತಿರೇಕಕ್ಕೇರುತ್ತಿರುವ ಮುಷ್ಕರದ ಹೈಡ್ರಾಮಾವನ್ನು ಸರ್ಕಾರ ಕೂಡಲೇ ಮಧ್ಯ ಪ್ರವೇಶಿಸಿ ಅಂತ್ಯಗೊಳಿಸದಿದ್ದರೆ, ಮಿಂಟೋ ಆಸ್ಪತ್ರೆಗೆ ಬರುವ ರೋಗಿಗಳ ಸಮಸ್ಯೆ ಇನ್ನಷ್ಟು ಬಿಗಡಾಯಿಸಲಿದೆ.