ಬೆಂಗಳೂರು : ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ) ಕಚೇರಿಯಲ್ಲಿ ಸ್ವಾತಂತ್ರ್ಯ ದಿನಾಚರಣೆ ವೇಳೆ ಕಾಲಿಗೆ ಶೂ ಧರಿಸಿ, ಗಾಂಧೀಜಿ, ಅಂಬೇಡ್ಕರ್ ಪೋಟೋಗಳಿಗೆ ಪುಷ್ಪಾರ್ಚನೆ ಮಾಡಿದ್ದಕ್ಕಾಗಿ ಬಿಡಿಎ ಆಯುಕ್ತ ಹೆ.ಚ್.ಆರ್ ಮಹಾದೇವ್ ವಿರುದ್ಧ ಭೀಮ್ ಆರ್ಮಿ ಸಂಘಟನೆ ಪ್ರತಿಭಟನೆ ನಡೆಸಿತು.
ಬಿಡಿಎ ಕಚೇರಿ ಮುಂದೆ ತಮಟೆ ಚಳವಳಿ ಮಾತನಾಡಿದ ಭೀಮ್ ಆರ್ಮಿ ಸಂಘಟನೆಯ ಪ್ರಧಾನ ಕಾರ್ಯದರ್ಶಿ ರಾಜ್ ಗೋಪಾಲ್, ಐಎಎಸ್ ಅಧಿಕಾರಿಯಾಗಿರುವ ಮಹದೇವ್ಗೆ ಮಹಾತ್ಮರಿಗೆ ಯಾವ ರೀತಿ ಗೌರವ ಕೊಡಬೇಕು ಅಂತ ಗೊತ್ತಿಲ್ಲ. ಮಹದೇವ್ ಮೊದಲಿನಿಂದಲೂ ದಲಿತ, ಹಿಂದುಳಿದ, ಹಾಗೂ ಅಲ್ಪಸಂಖ್ಯಾತರ ವಿರೋಧಿಯಾಗಿದ್ದಾರೆ. ಬೀದರ್ ಜಿಲ್ಲಾಧಿಕಾರಿಯಾಗಿದ್ದಾಗಲೂ ಇದೇ ರೀತಿ ವರ್ತಿಸಿದ್ದರು. ನಂತರ ಸಿಎಂ ಕಚೇರಿಯಲ್ಲಿ ಕೆಲಸ ಮಾಡುವಾಗಲೂ ಅಂಬೇಡ್ಕರ್ ಪೋಟೋವನ್ನು ತೆರವುಗೊಳಿಸಿದ್ದರು. ಈಗ ಬಿಡಿಎ ಕಚೇರಿಯಲ್ಲಿ ಶೂ ಧರಿಸಿ ಪೋಟೋಗಳಿಗೆ ಪುಷ್ಪಾರ್ಚನೆ ಮಾಡಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಬಿಡಿಎ ಕಚೇರಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ದಲಿತ, ಹಿಂದುಳಿದ ಅಧಿಕಾರಿಗಳಿಗೆ ಮಹಾದೇವ್ ಕಿರುಕುಳ ನೀಡುತ್ತಿದ್ದಾರೆ. ಆದ್ದರಿಂದ ಈ ಕೂಡಲೇ ಮುಖ್ಯಮಂತ್ರಿಗಳು ಅವರನ್ನು ಅಮಾನತು ಮಾಡಬೇಕು ಎಂದು ಒತ್ತಾಯಿಸಿದರು.