ಆನೇಕಲ್ : ಕಳೆದ 20 ದಿನಗಳಿಂದ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ಕೈದಿಗಳು ಸಾವನ್ನಪ್ಪಿದ ಹಿನ್ನಲೆ ಜೈಲಿನ ವೈದ್ಯಕೀಯ ವ್ಯವಸ್ಥೆ ಸರಿಯಿಲ್ಲ ಎಂದು ಆರೋಪಿಸಿ ಮಂಗಳವಾರ ಬೆಳಗ್ಗೆಯಿಂದ ಸಜಾ ಬಂಧಿಗಳು ಉಪಹಾರ ಸೇವಿಸದೆ ಪ್ರತಿಭಟಿಸಿದರು. ಅಲ್ಲದೆ ಕೈದಿಗಳ ಈ ಪ್ರತಿಭಟನೆ ಹತ್ತಿಕ್ಕುವ ವಿಚಾರವಾಗಿ ಪೊಲೀಸರು ಮತ್ತು ಕೈದಿಗಳ ಮಧ್ಯೆ ಮಾತಿನ ಚಕುಮಕಿ ನಡೆದಿದೆ.
ಕಳೆದ ಗುರುವಾರ ಬೆಳಗ್ಗೆ ಸಜಾ ಬಂಧಿಯಾಗಿದ್ದ ಚಿಕ್ಕಬಳ್ಳಾಪುರ ಜಿಲ್ಲೆಯ ಗೌರಿಬಿದನೂರು ಮೂಲದ 45 ವರ್ಷದ ಆನಂದ್ ಹೃದಯಾಘಾತದಿಂದ ಮೃತಪಟ್ಟಿದ್ದರು. ಈ ಸಾವುಗಳಿಗೆ ಜೈಲಿನ ಆಸ್ಪತ್ರೆ ವೈದ್ಯರುಗಳ ನಿರ್ಲಕ್ಷ್ಯವೇ ಕಾರಣವೆಂದು ಕೈದಿಗಳು ದೂರಿದ್ದಾರೆ.
ಪ್ರತಿಭಟನಾಕಾರರ ಬೇಡಿಕೆಯಂತೆ ಮುಖ್ಯ ಜೈಲಿನ ಅಧೀಕ್ಷಕರು ಹಾಗೂ ಆಸ್ಪತ್ರೆ ವೈದ್ಯರನ್ನು ವಜಾಗೊಳಿಸಬೇಕೆಂದು ಕಳೆದ ಗುರುವಾರ ಸಜಾ ಬಂಧಿಗಳು ಪಟ್ಟು ಹಿಡಿದಿದ್ದರು. ಆದರೆ, ವಾರ ಕಳೆದರೂ ಬೇಡಿಕೆ ಈಡೇರದ ಕಾರಣಕ್ಕೆ ಕೈದಿಗಳು ಮಂಗಳವಾರ ಬೆಳಗ್ಗೆಯಿಂದಲೇ ಉಪವಾಸ ಕುಳಿತರು.
ಪ್ರತಿಭಟನೆ ಕೊನೆಗೊಳಿಸುವಂತೆ ಪೊಲೀಸರು ಸಜಾ ಬಂಧಿಗಳ ಮನವೊಲಿಸುವ ಕಾರ್ಯಕ್ಕೆ ಮುಂದಾದಾಗ, ಕೈದಿಗಳು ಮತ್ತು ಪೊಲೀಸರ ಮಧ್ಯೆ ಮಾತಿನ ಚಕುಮಕಿ ನಡೆದಿದೆ ಎನ್ನಲಾಗಿದೆ.