ಬೆಂಗಳೂರು : ರಾಜರಾಜೇಶ್ವರಿ ನಗರ ವಿಧಾನಸಭಾ ಕ್ಷೇತ್ರದ ಉಪಚುನಾವಣೆಗೆ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿರುವ ಕುಸುಮ ಹನುಮಂತರಾಯಪ್ಪ ಲಕ್ಷಾಧೀಶೆಯಾಗಿದ್ದು, ಸ್ವಲ್ಪ ಸಾಲ ಕೂಡ ಹೊಂದಿದ್ದಾರೆ.
ರಾಜರಾಜೇಶ್ವರಿನಗರ ಕ್ಷೇತ್ರದಿಂದ ಇಂದು ಅಧಿಕೃತ ನಾಮಪತ್ರ ಸಲ್ಲಿಕೆ ಮಾಡಲಿರುವ ಅವರು, ಜ್ಯೋತಿಷಿಗಳ ಸಲಹೆ ಮೇರೆಗೆ ನಿನ್ನೆಯೇ ಒಂದು ಪ್ರತಿ ನಾಮಪತ್ರ ಸಲ್ಲಿಕೆ ಮಾಡಿದ್ದಾರೆ. ಅದರಲ್ಲಿ ಅವರು ನೀಡಿರುವ ಮಾಹಿತಿ ಪ್ರಕಾರ ಅವರ ಆಸ್ತಿ ವಿವರ ಈ ಕೆಳಗಿನಂತಿದೆ.
ನಗದು ಇತರ ಆಸ್ತಿಪಾಸ್ತಿ
ಇವರು ನಗದು ರೂಪದಲ್ಲಿ 1,41,050 ರೂ ಹೊಂದಿದ್ದಾರೆ. ಕೆನರಾ ಬ್ಯಾಂಕ್, ನಾಗರಭಾವಿ ಬ್ರ್ಯಾಂಚ್ನಲ್ಲಿ 1,76,670.85 ರೂ, ಆಕ್ಸಿಸ್ ಬ್ಯಾಂಕ್ ಐಟಿಐ ಲೇಔಟ್- 57,775ರೂ., ಬ್ಯಾಂಕ್ ಆಫ್ ಬರೋಡಾ, ಕುಮಾರಸ್ವಾಮಿ ಲೇ ಔಟ್_ 3,27,765.29 ರೂ., ಬ್ಯಾಂಕ್ ಆಫ್ ಬರೋಡಾ ಸೌತ್ ಎಂಡ್ ರಸ್ತೆ- 1,000ರೂ, ಎಸ್ ಬಿಐ ನಾಗರಭಾವಿ ಬ್ಯಾಂಕ್ - 41,620. 24 ರೂ. ಹೊಂದಿದ್ದು, ಉಳಿತಾಯ ಖಾತೆ, ನಿಶ್ಚಿತ ಠೇವಣಿ ಮುಂತಾದ ಹೂಡಿಕೆ ಹೊಂದಿದ್ದಾರೆ. ಸುಮಾರು 2,45, 000 ರು ವಿವಿಧ ಬಾಂಡ್, ಷೇರುಗಳಲ್ಲಿ ಹೂಡಿಕೆ ಮಾಡಿದ್ದಾರೆ. ಯಾವುದೇ ಸ್ವಂತ ವಾಹನ ಹೊಂದಿಲ್ಲ.
ಸಾಲದ ವಿವರ
ವೈಯಕ್ತಿಕ ಸಾಲ 2,05,000 ರೂ (ಅನಿಲ್ ಗೌಡ ಎಚ್) ಹಾಗೂ 56, 58, 316 ರೂ (ಎ ಬಿಎಚ್ ಇನ್ಫ್ರಾಸ್ಟ್ರಕ್ಚರ್ಸ್) ಹೆಸರಿನಲ್ಲಿ ಸಾಲ ಹೊಂದಿದ್ದಾರೆ. ಚಿನ್ನ-ಬೆಳ್ಳಿ ವಿವರ ಗಮನಿಸಿದರೆ 1,100 ಗ್ರಾಂ 45,00,000 ರೂ ಮೌಲ್ಯ (ಗಿಫ್ಟ್) ಹೊಂದಿದ್ದಾರೆ.
ಚರಾಸ್ತಿ ವಿವರ
ಇವರ ಒಟ್ಟು ಚರಾಸ್ತಿ ಮೌಲ್ಯ1,13,02,197. 38 ರೂ ಮೊತ್ತದ್ದಾಗಿದೆ. ಕೃಷಿ, ವಾಣಿಜ್ಯ ಭೂಮಿ, ಸ್ಥಿರಾಸ್ತಿ ವಿವರ ವಿಭಾಗದಲ್ಲಿ ತಮ್ಮ ಹೆಸರಿನಲ್ಲಿ ಯಾವುದೇ ಕೃಷಿ ಭೂಮಿ ಇಲ್ಲ ಎಂದು ವಿವರಿಸಿದ್ದಾರೆ.
ಇನ್ನು ಬಿಬಿಎಂಪಿ ವಾರ್ಡ್ 40ರಲ್ಲಿ 1500 ಚದರ ಅಡಿ ಹಾಗೂ 2380 ಚದರಡಿ ವಿಸ್ತೀರ್ಣದ ಎರಡು ನಿವೇಶನ ಇದ್ದು, ಇದರ ಒಟ್ಟು ಮೌಲ್ಯ 17, 84, 575 ರೂ.ಗೆ ಖರೀದಿ ಮಾಡಿರುವುದಾಗಿ ತಿಳಿಸಿದ್ದಾರೆ. ಎರಡು ಆಸ್ತಿಯ ಸದ್ಯದ ಮಾರುಕಟ್ಟೆ ಮೌಲ್ಯ ಒಟ್ಟು 1,37, 10,000 ರೂ. ಎಂದು ಅಫಿಡವಿಟ್ನಲ್ಲಿ ತಿಳಿಸಿದ್ದಾರೆ.
ತಮ್ಮ ಸಾಲದ ಆರ್ಥಿಕ ಮೂಲ ಬೈರಮ್ಮ ಎಂದು ತಿಳಿಸಿದ್ದು, 20,48, 000 ರೂ. ಮೊತ್ತ ಎಂದು ಗುರುತಿಸಿದ್ದಾರೆ. ಕಾಲೇಜಿನಲ್ಲಿ ಸಹಾಯಕ ಪ್ರಾಧ್ಯಾಪಕಿಯಾಗಿದ್ದು, ಸಂಬಳವೇ ಆರ್ಥಿಕ ಮೂಲ ಎಂದಿದ್ದಾರೆ.
ತಮ್ಮ ವಿರುದ್ಧ ಯಾವುದೇ ಕ್ರಿಮಿನಲ್ ಕೇಸ್ ಇಲ್ಲ, ಎಫ್ಐಆರ್ ದಾಖಲಾಗಿಲ್ಲ ಎಂದು ಹೇಳಿದ್ದಾರೆ. ತೆರಿಗೆ ತುಂಬಿದ ವಿವರ ಒದಗಿಸಿದ್ದು 2019-20ನೇ ಆರ್ಥಿಕ ವರ್ಷದಲ್ಲಿ 3,673,870 ಐಟಿ ರಿಟರ್ನ್ ಫೈಲ್ ಮಾಡಿದ್ದಾರೆ. 2018-19ರಲ್ಲಿ 48,00,000 ರೂ ಹಾಗೂ 2017-18ರಲ್ಲಿ 6,00,000 ರು ಐಟಿ ರಿಟರ್ನ್ಸ್ ತೋರಿಸಿದ್ದಾರೆ. ಪತಿ ಹಾಗೂ ಕುಟುಂಬಸ್ಥರ ಹೆಸರನ್ನು ಅವರು ತಮ್ಮ ಅಫಿಡವಿಟ್ನಲ್ಲಿ ಎಲ್ಲಿಯೂ ಉಲ್ಲೇಖಿಸಿಲ್ಲ.