ಬೆಂಗಳೂರು : ಒಂದು ಕಡೆ ತಾಯಿಯ ಸಾವು ಮತ್ತೊಂದು ಕಡೆ ಕೊರೊನಾದಿಂದ ಆಸ್ಪತ್ರೆಗೆ ಸೇರಿರುವ ಮಗ, ಅಮ್ಮನ ಅಂತ್ಯಕ್ರಿಯೆಗಾಗಿ ಕಣ್ಣೀರು ಹಾಕಿ ಗೋಳಾಟ ನಡೆಸಿದ್ದವನಿಗೆ ಕನ್ನಡ ಪರ ಸಂಘಟನೆಯೊಂದು ಮುಂದೆ ಬಂದು ಆತನ ತಾಯಿಯ ಅಂತ್ಯಕ್ರಿಯೆ ನಡೆಸಿ ಮಾನವೀಯತೆ ಮೆರೆದಿದೆ.
ಬಸವನಗುಡಿ ಕೃಷ್ಣರಾವ್ ಪಾರ್ಕ್ ನಿವಾಸಿಯಾಗಿರುವ ಪ್ರೀತಂ ಎಂಬಾತನ ತಾಯಿ ವಿಮಲಾರಿಗೆ ಕೊರೊನಾ ಪಾಸಿಟಿವ್ ದೃಢವಾಗಿತ್ತು. ಚಿಕಿತ್ಸೆಗಾಗಿ ಕಿಮ್ಸ್ ಆಸ್ಪತ್ರೆಗೆ ದಾಖಲಿಸಿತಾದರೂ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದರು.
ಈ ಹಂತದಲ್ಲೇ ಪ್ರೀತಂಗೂ ಕೊರೊನಾ ದೃಢವಾಗಿತ್ತು. ಈ ಹಿನ್ನೆಲೆ ಪ್ರೀತಂ ಹೋಮ್ ಕ್ವಾರಂಟೈನ್ ಆಗಿದ್ದರು. ಆದರೆ, ತಾಯಿಯ ಅಂತ್ಯಕ್ರಿಯೆಗೆ ಹೊರ ಬರಲಾಗದೆ ಅಂತಿಮ ವಿಧಿ-ವಿಧಾನದಲ್ಲಿ ಭಾಗಿಯಾಗಲಾಗದೆ ಪರದಾಡಿದ್ದ.
ಅಮ್ಮನ ಅಂತ್ಯಕ್ರಿಯೆಗಾಗಿ ಹಲವರನ್ನು ಫೋನ್ ಮಾಡಿ ಸಂಪರ್ಕಿಸಿದರೂ ಯಾವುದೇ ಪ್ರಯೋಜನವಾಗಿರಲಿಲ್ಲ. ಈ ವೇಳೆ ಕನ್ನಡ ಸಂಘಟನೆಯೊಂದರ ಪ್ರಧಾನ ಕಾರ್ಯದರ್ಶಿ ಸೈಫುಲ್ಲಾ ಹಾಗೂ ಅವರ ತಂಡಕ್ಕೆ ವಿಷಯ ಗೊತ್ತಾಗಿದೆ.
ಕೂಡಲೇ ಆ್ಯಂಬುಲೆನ್ಸ್ನಲ್ಲಿ ಆಸ್ಪತ್ರೆಗೆ ತೆರಳಿ ಶವ ತೆಗೆದುಕೊಂಡು ಹೋಗಿ ಹಿಂದೂ ಧರ್ಮದ ಸಂಪ್ರದಾಯದಂತೆ ಅಂತ್ಯಕ್ರಿಯೆ ನರೆವೇರಿಸಿ ಮಾನವೀಯತೆ ಮೆರೆದಿದ್ದಾರೆ. ಈ ಕುರಿತು ವಿಡಿಯೋ ಮಾಡಿರುವ ಪುತ್ರ, ತಾಯಿ ಅಂತ್ಯಕ್ರಿಯೆ ನೆರವೇರಿಸಿದರಿಗೆ ಧನ್ಯವಾದ ಅರ್ಪಿಸಿದ್ದಾರೆ.
ಇದನ್ನೂ ಓದಿ: ಕೋವಿಡ್ ಚಿಕಿತ್ಸಾ ಮಾರ್ಗಸೂಚಿಯಿಂದ ಪ್ಲಾಸ್ಮಾ ಥೆರಪಿ ಕೈಬಿಟ್ಟ ಐಸಿಎಂಆರ್