ಬೆಂಗಳೂರು: ಸುದೀಪ್ ಅವರು ಸಿಎಂ ಬೊಮ್ಮಾಯಿ ಅವರಿಗೆ ಬೆಂಬಲ ಸೂಚಿಸಿರುವ ಬಗ್ಗೆ ನಮ್ಮ ತಕರಾರಿಲ್ಲ. ಆದರೆ 40% ಎಂದು ಹೆಸರುವಾಸಿಯಾಗಿರುವ ಸರ್ಕಾರ, ಭ್ರಷ್ಟಾಚಾರದಲ್ಲಿ ತೊಡಗಿರುವ ಸರ್ಕಾರ, ಯಾವ ಯುವಕರ ಪರವಾಗಿ ಯಾವಾಗಲೂ ಒಳ್ಳೇದಾಗಲಿ ಎಂದು ಸುದೀಪ್ ಬಯಸುತ್ತಾರೋ ಆ ಯುವಕರ ಉದ್ಯೋಗವನ್ನು ಮಾರಾಟ ಮಾಡುವ ಸರ್ಕಾರವನ್ನು ಬೆಂಬಲಿಸುತ್ತೇನೆ ಎಂಬ ಅವರ ನಿರ್ಧಾರ ಸೂಕ್ತ ಅಲ್ಲ ಎಂದು ಕೆಪಿಸಿಸಿ ಮಾಧ್ಯಮ ವಿಭಾಗದ ಮುಖ್ಯಸ್ಥ ಪ್ರಿಯಾಂಕ್ ಖರ್ಗೆ ಆಕ್ಷೇಪ ವ್ಯಕ್ತಪಡಿಸಿದರು.
ಕೆಪಿಸಿಸಿ ಕಚೇರಿಯಲ್ಲಿಂದು ಸುದ್ದಿಗೋಷ್ಟಿ ಉದ್ದೇಶಿಸಿ ಮಾತನಾಡಿದ ಅವರು, ಸುದೀಪ್ ರಾಜ್ಯಕ್ಕೆ ಅದ್ಭುತವಾದ ಕೊಡುಗೆ ನೀಡಿದ್ದಾರೆ. ಅವರು ಯಾವತ್ತೂ ಕರ್ನಾಟಕದ ಅಸ್ಮಿತೆ ಬಗ್ಗೆ ಮಾತನಾಡುವ ವ್ಯಕ್ತಿ. ಬಾಲಿವುಡ್ vs ಸ್ಯಾಂಡಲ್‌ವುಡ್ ಬಂದಾಗ ಸುದೀಪ್ ಕನ್ನಡದ ಅಸ್ಮಿತೆಗಾಗಿ ಗಟ್ಟಿಯಾಗಿ ನಿಂತರು. ಯಾವಾಗ 300 ದಿನ ವಾಲ್ಮೀಕಿ ಸಮಾಜದ ಸ್ವಾಮೀಜಿ ಮೀಸಲಾತಿ ಸಂಬಂಧ ಧರಣಿ ನಡೆಸಿದ್ದರಲ್ಲ ಆವಾಗ ಬಂದು ನೈತಿಕತೆ ಬೆಂಬಲ ಕೊಟ್ಟಿದ್ದರೆ, ಇದೇ ಬೊಮ್ಮಾಯಿ ಮಾಮ ಅವರು ಮೀಸಲಾತಿ ಆವಾಗಲೇ ಮಾಡಿಸ್ತಾ ಇದ್ದರಲ್ಲಾ?. ಸಮಾಜದ ಸ್ವಾಮಿ ಬಿಸಿಲಿನಲ್ಲಿ ಉಪವಾಸ ಸತ್ಯಾಗ್ರಹ ಮಾಡಿದಾಗ ಸುದೀಪ್ ಬಂದು ನಾನು ನಿಮ್ಮ ಜೊತೆ ಇದ್ದೇನೆ. ಬೊಮ್ಮಾಯಿ ಮಾಮ ಜೊತೆ ಮಾತನಾಡುತ್ತೇನೆ ಎಂದು ಹೇಳಬಹುದಿತ್ತಲ್ಲ ಎಂದು ಪ್ರಶ್ನಿಸಿದರು.
ನಮಗೆ ಅವರು ಬೆಂಬಲ ನೀಡಿರುವುದಕ್ಕೆ ನಮ್ಮ ತಕರಾರು ಇಲ್ಲ. ಅವರನ್ನು ಒಬ್ಬ ನಟನಾಗಿ ಗೌರವಿಸುತ್ತೇವೆ. ಅವರು ಕರ್ನಾಟಕದ ಜನರ ಜೊತೆ ನಿಲ್ಲಬೇಕು. ಕರ್ನಾಟಕದ ಅಸ್ಮಿತೆ ವಿಚಾರ ಬಂದಾಗ ಯಾವುದೇ ಪಕ್ಷವನ್ನು ನೋಡಬೇಡಿ. ಅವರು ಬಿಜೆಪಿಗೆ ಬೆಂಬಲ ನೀಡಿದ್ದಾರೆ ಅಂತ ಅವರ ಸಿನಿಮಾ ನೋಡುವುದನ್ನು ಬಿಡುವುದಿಲ್ಲ ಎಂದು ತಿಳಿಸಿದರು.
ಸುದೀಪ್ ಸಿನಿಮಾಗಳನ್ನು ನಿರ್ಬಂಧಿಸುವುದು ಸರಿಯಲ್ಲ: ಸುದೀಪ್ ಚಿತ್ರಗಳಿಗೆ ನಿರ್ಬಂಧ ಹೇರಿ ಅನ್ನುವುದು ಸರಿಯಲ್ಲ. ಹಲವರಿಗೆ ಸಿನಿಮಾದಲ್ಲಿ ಕೆಲಸ ಕೊಟ್ಟಿರುತ್ತಾರೆ. ವಾಣಿಜ್ಯ ದೃಷ್ಟಿಕೋನದಿಂದ ಚಿತ್ರ ತೆಗೆದಿರುತ್ತಾರೆ. ಅದನ್ನು ಬ್ಯಾನ್ ಮಾಡಿ ಅನ್ನೋದು ಸರಿಯಲ್ಲ ಎಂದು ಇದೇ ವೇಳೆ ತಿಳಿಸಿದರು. ಹಾಗೆಯೇ ಅದು ಸರಿಯಾದ ಕ್ರಮವೂ ಅಲ್ಲ. ಆದರೆ ರಾಜಕೀಯ ಪಕ್ಷದ ವಿಚಾರ ಇದ್ದರೆ ನಿಷೇಧಿಸಬೇಕಾಗುತ್ತೆ. ಚುನಾವಣಾ ನಿಯಮಗಳಲ್ಲೇ ಅದು ಇರುತ್ತದೆ. ಅವರ ಸಿನಿಮಾಗಳನ್ನು ನಿರ್ಬಂಧಿಸುವುದಕ್ಕೆ ನಮ್ಮ ಬೆಂಬಲ ಇಲ್ಲ ಎಂದು ತಿಳಿಸಿದರು.
ಮಹಾರಾಷ್ಟ್ರ ಸರ್ಕಾರ ಕರ್ನಾಟಕದ ಹಳ್ಳಿಗಳಿಗೆ ವಿಮೆ ಘೋಷಣೆ ಮಾಡಿದೆ. ರಾಜ್ಯ ಸರ್ಕಾರದ ಬೇರೆ ರಾಜ್ಯಗಳಿಗೆ ಯೋಜನೆ ಕೊಡುವುದು ಎಲ್ಲೂ ಇತಿಹಾಸದಲ್ಲಿ ಇಲ್ಲ. ಕೇಂದ್ರದಲ್ಲಿ ಸರ್ಕಾರ ಇದ್ಯಾ?, ಕರ್ನಾಟಕದಲ್ಲಿ ಸರ್ಕಾರ ಬದುಕಿದ್ಯಾ?, ಅಶ್ವಮೇಧ ರೀತಿ ಕುದುರೆ ಬಿಟ್ಟು ಬಿಡಲಿ ಮಹಾರಾಷ್ಟ್ರ ಸರ್ಕಾರ. ಬಿಜೆಪಿ ರಾಜ್ಯಾಧ್ಯಕ್ಷರ ಮೌನ ಏಕೆ ಈ ಬಗ್ಗೆ. ಮಹಾರಾಷ್ಟ್ರ ಬಿಜೆಪಿ ಬಗ್ಗೆ ಏನೂ ಮಾತನಾಡುತ್ತಿಲ್ಲ. ಕನ್ನಡಿಗರ ಓಟು ಬೇಕು, ಆದರೆ ಅಸ್ಮಿತೆ ಕಾಪಾಡುವ ಯೋಗ್ಯತೆ ಇಲ್ವಾ?, ಬೊಮ್ಮಾಯಿ ಮಾಮ ಎಲ್ಲಿ ಇದ್ದಾರೆ? ಬೊಮ್ಮಾಯಿ ಮಾಮನಿಂದ ಆರು ಕೋಟಿ ಜನ ಉತ್ತರ ಬಯಸಿದ್ದಾರೆ ಎಂದು ವಾಗ್ದಾಳಿ ನಡೆಸಿದರು.
ರಾಜ್ಯದಿಂದ 25 ಸಂಸದರು ಗೆದ್ದುಹೋಗಿದ್ದಾರೆ. ಗಡಿ ವಿಚಾರದ ಬಗ್ಗೆ ಯಾಕೆ ಮಾತನಾಡುತ್ತಿಲ್ಲ. ಮೋದಿಯವರ ಮನ್ ಕೀ ಬಾತ್ ನಲ್ಲಿ ಬ್ಯುಸಿಯಾಗಿದ್ದಾರೆ. ಸಂಸದರೇ ಜನ್ ಕೀ ಬಾತ್ ಬಗ್ಗೆ ಮಾತನಾಡಿ. ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮ್ ಏನು ಮಾಡಿದ್ದಾರೆ? ಕನ್ನಡದ ಅಸ್ಮಿತೆಯ ಬಗ್ಗೆ ಏನು ಮಾತನಾಡಿದ್ದಾರೆ? ಇಂತವರನ್ನು ನಾವು ಆರಿಸಿ ಕಳಿಸಿದ್ದೇವೆ. ಜಿಎಸ್ ಟಿ ಬಾಕಿಯನ್ನು ರಾಜ್ಯಕ್ಕೆ ಕೊಟ್ಟಿಲ್ಲ. ಸೀತಾರಾಮನ್ ಮೇಡಂ ನೀವು ಏನು ಭರವಸೆ ಕೊಟ್ಟಿದ್ದೀರಿ. ನಮ್ಮ 4 ಭರವಸೆ ಬಗ್ಗೆ ನೀವು ಮಾತನಾಡುತ್ತೀರ. ಕಪ್ಪು ಹಣವನ್ನು ವಾಪಸ್ ತರುತ್ತೇವೆ ಅಂದರೆ ಏನಾಯಿತು. 15 ಲಕ್ಷ ಹಣ ಹಾಕುತ್ತೇವೆ ಎಂದಿದ್ದು ಏನಾಯ್ತು?. ಇವರು 15 ಲಕ್ಷ ಕೊಡುತ್ತೇವೆ ಅಂದರೆ ನಂಬಬೇಕಂತೆ, ನಮ್ಮ 2,000 ರೂ. ಕೊಡುತ್ತೇವೆ ಅನ್ನೋದನ್ನು ನಂಬಲಾಗಲ್ಲವಂತೆ ಎಂದು ಟೀಕಿಸಿದರು.
ಮಹಾರಾಷ್ಟ್ರ ಮಾಡುತ್ತಿರುವುದು ಸರಿಯೇ? ಇದರ ಬಗ್ಗೆ ಪ್ರಧಾನಿ, ಅಮಿತ್ ಶಾ ಉತ್ತರಿಸಬೇಕು. ರಾಜ್ಯಕ್ಕೆ ಪೊಲಿಟಿಕಲ್ ಟೂರ್ ವೇಳೆ ಉತ್ತರಿಸಬೇಕು. ಕನ್ನಡಿಗರ ಹಿತಾಸಕ್ತಿಗಳನ್ನು ಕಾಪಾಡಬೇಕು. ಬಂಜಾರ ಸಮುದಾಯಕ್ಕೆ ನಾವಿದ್ದೇವೆ ಅಂತಾರೆ. ಬಂಜಾರ ಶ್ರೀಗಳು ನೇಣುಹಾಕಿಕೊಳ್ಳುತ್ತಿದ್ದಾರೆ. ಅದರ ಬಗ್ಗೆ ಏನಾದರೂ ನೀವು ಮಾತನಾಡಿದ್ದೀರಾ?. ದೆಹಲಿಯಲ್ಲಿ ಬಂಜಾರ ಮಗ ಇದ್ದಾನೆ ಅಂತೀರ, ಇದೇನಾ ಬಂಜಾರ ಸಮುದಾಯಕ್ಕೆ ಕೊಟ್ಟಿದ್ದು. ನಿಮಗಿರುವುದು ಒಂದೇ ತಿಂಗಳು ಅವಕಾಶ. ನಾವು ಅಧಿಕಾರಕ್ಕೆ ಬರುತ್ತೇವೆ, ಇದಕ್ಕೆ ಉತ್ತರ ಕೊಡ್ತೇವೆ ಎಂದು ಆಕ್ರೋಶ ಹೊರಹಾಕಿದರು.
ಕಾಂಗ್ರೆಸ್ ಟಿಕೆಟ್ ಘೋಷಣೆ ಬೆನ್ನಲ್ಲೇ ಬಂಡಾಯ ವಿಚಾರವಾಗಿ ಪ್ರತಿಕ್ರಿಯಿಸಿ, ನಾವು ಐದು ಜನಕ್ಕೆ ಟಿಕೆಟ್ ಕೊಡೋಕೆ ಆಗಲ್ಲ. ಒಬ್ಬರಿಗೇ ಒಂದೇ ಟೆಕೆಟ್ ಕೊಡೋದು. ಬಿಜೆಪಿ ಇನ್ನೂ ಪಟ್ಟಿ ಬಿಡುಗಡೆ ಮಾಡಿಲ್ಲ. ಅಮಿತ್ ಶಾ ಕಿಚನ್ ನಲ್ಲಿ ಲಿಸ್ಟ್ ತಯಾರಾಗುತ್ತಾ ಎಂದು ವ್ಯಂಗ್ಯ ರೀತಿಯಲ್ಲಿ ಪ್ರಶ್ನಿಸಿದರು. ಜೆಡಿಎಸ್ ಕುಟುಂಬದಲ್ಲೇ ಬಂಡಾಯ ಎದ್ದಿದೆ. ಬಿಜೆಪಿಯ ಲಿಸ್ಟ್ ಎಲ್ಲಿ..?. ಹಲವರ ಟಿಕೆಟ್ ಗೆ ಕತ್ತರಿ ಹಾಕ್ತಿದ್ದಾರೆ. ನಮ್ಮ ಲಿಸ್ಟ್ ನೋಡಿಕೊಂಡು ಅಭ್ಯರ್ಥಿ ಹಾಕುತ್ತಾರಂತೆ. ಹಾಗದರೆ ಯಡಿಯೂರಪ್ಪರವರ ಕಿಚನ್ ನಲ್ಲಿ ಲಿಸ್ಟ್ ತಯಾರಾಗುತ್ತೋ ಎಂದು ಕುಟುಕಿದರು.
ಇದನ್ನೂ ಓದಿ: ಟಿಕೆಟ್ಗಾಗಿ ಒತ್ತಡವಿದೆ, ಗೆಲ್ಲುವ ಸಾಧ್ಯತೆ ನೋಡಿ ಹಂಚಿಕೆ: ಆದಷ್ಟು ಬೇಗ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಎಂದ ಬಿಎಸ್ವೈ