ಬೆಂಗಳೂರು: ರಾಜ್ಯದಲ್ಲಿ ಕೊರೊನಾ ಕಾರಣಕ್ಕೆ ಶಾಲೆಗಳನ್ನು ಆರಂಭಿಸದಂತೆ ಸರ್ಕಾರ ಕಟ್ಟುನಿಟ್ಟಿನ ಸೂಚನೆ ನೀಡಿದೆ. ಇತ್ತ ಮಕ್ಕಳ ಶಿಕ್ಷಣದ ಹಿತದೃಷ್ಟಿಯಿಂದ ಸರ್ಕಾರಿ ಶಾಲೆಗಳು ವಿದ್ಯಾಗಮ ಆಯೋಜನೆ ಮಾಡುತ್ತಿವೆ. ಇದಕ್ಕೆ ಇದೀಗ ಖಾಸಗಿ ಶಾಲೆಗಳು ವಿರೋಧ ವ್ಯಕ್ತಪಡಿಸಿವೆ.
ರಾಷ್ಟ್ರೀಯ ವಿಪತ್ತು ಕಾಯ್ದೆ ಮಾರ್ಗಸೂಚಿಯಂತೆ ಯಾವುದೇ ಶಾಲಾ-ಕಾಲೇಜುಗಳು ಪ್ರಾರಂಭ ಆಗಬಾರದೆಂಬ ನಿಯಮವಿದೆ. ಹೀಗಿದ್ದರೂ ಸಾರ್ವಜನಿಕ ಶಿಕ್ಷಣ ಇಲಾಖೆ ವಿದ್ಯಾಗಮ ಯೋಜನೆಯ ಅಡಿಯಲ್ಲಿ ಸರ್ಕಾರಿ ಶಾಲೆಯ ಮಕ್ಕಳಿಗೆ ಶಾಲೆ ಪ್ರಾರಂಭಿಸಿದೆ. ಈ ಮೂಲಕ ನಿರಂತರ ಕಲಿಕೆಯಿಂದ ಮಕ್ಕಳು ವಂಚಿತರಾಗಬಾರದೆಂದು ತಮ್ಮ ಶಾಲೆಗಳಲ್ಲಿ ತರಗತಿಗಳನ್ನು ರಾಜ್ಯದ ಹಲವಾರು ಕಡೆ ನಿಯಮಬಾಹಿರವಾಗಿ ನಡೆಸುತ್ತಿದೆ ಎಂದು ಖಾಸಗಿ ಶಾಲೆಗಳು ಆರೋಪಿಸಿವೆ.
ಖಾಸಗಿ ಅನುದಾನ ರಹಿತ ಶಿಕ್ಷಣ ಸಂಸ್ಥೆಗಳಲ್ಲಿ ವ್ಯಾಸಂಗ ಮಾಡುತ್ತಿರುವ ಮಕ್ಕಳನ್ನು ಸರ್ಕಾರಿ ಶಾಲಾ ಶಿಕ್ಷಕರು ಮನೆಮನೆಗೆ ತೆರಳಿ, ಖಾಸಗಿ ಶಿಕ್ಷಣ ಸಂಸ್ಥೆಗಳು ಈ ವರ್ಷ ಪ್ರಾರಂಭವಾಗುವುದಿಲ್ಲ. ನಮ್ಮಲ್ಲಿ ಮಾತ್ರ ಶಿಕ್ಷಣ ನೀಡುತ್ತೇವೆ. ನಾವು ನಿಮಗೆ ಆಹಾರ ಮತ್ತು ಪುಸ್ತಕ ನೀಡುತ್ತೇವೆ ಎಂದು ಆಮಿಷವೊಡ್ಡಿ, ವಾಮಮಾರ್ಗವಾಗಿ ಮಕ್ಕಳನ್ನು ಸೆಳೆಯುತ್ತಿದ್ದಾರೆ ಎಂದು ಆರೋಪಿಸಲಾಗಿದೆ.
ಖಾಸಗಿ ಶಿಕ್ಷಣ ಸಂಸ್ಥೆಗಳನ್ನು ತೆರೆಯಲು ಬಿಡದ ಶಿಕ್ಷಣ ಇಲಾಖೆಯ ಧೋರಣೆ ಮತ್ತು ಕಾನೂನು ಬಾಹಿರವಾಗಿ ತಮ್ಮ ಶಾಲೆಗಳ ಒಳಗೆ ಯಾವುದೇ ಸುರಕ್ಷತಾ ಮುನ್ನೆಚ್ಚರಿಕೆಗಳನ್ನು ಅನುಸರಿಸದೆ, ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳದೇ ಶಾಲೆಗಳನ್ನು ನಡೆಸುತ್ತಿದ್ದಾರೆ ಎಂದು ಆರೋಪಿಸಿ ಕ್ಯಾಮ್ಸ್ ದೂರು ದಾಖಲಿಸಿದೆ.
ಇದಕ್ಕೆ ಸಂಬಂಧಿಸಿದ ಶಿಕ್ಷಣ ಇಲಾಖೆ ಆಯುಕ್ತರು, ಸ್ಥಳೀಯ ಡಿಡಿಪಿಐ ಮತ್ತು ಬಿಇಒಗಳ ಮೇಲೆ ರಾಷ್ಟ್ರೀಯ ವಿಪತ್ತು ಕಾಯ್ದೆ ಉಲ್ಲಂಘನೆಯ ಅಡಿಯಲ್ಲಿ ಕಾನೂನಾತ್ಮಕ ಕ್ರಮ ಕೈಗೊಂಡು ಸೂಕ್ತ ಶಿಕ್ಷೆಗೆ ಗುರಿ ಮಾಡಬೇಕೆಂದು ಆಗ್ರಹಿಸುವುದಾಗಿ ಕ್ಯಾಮ್ಸ್ ಕಾರ್ಯದರ್ಶಿ ಶಶಿಕುಮಾರ್ ಒತ್ತಾಯಿಸಿದ್ದಾರೆ.