ಬೆಂಗಳೂರು: ರಾಜ್ಯದಲ್ಲಿ ಜುಲೈ 19 ಹಾಗೂ 22 ರಂದು SSLC ಪರೀಕ್ಷೆ ನಡೆಯಲಿದೆ. ಪರೀಕ್ಷೆಗೆ ಕೇವಲ 4 ದಿನಗಳು ಬಾಕಿ ಇರುವಾಗಲೇ ಕೆಲ ಖಾಸಗಿ ಶಿಕ್ಷಣ ಸಂಸ್ಥೆಗಳು ಹಾಲ್ ಟಿಕೆಟ್ ಕೊಡದೇ ಸತಾಯಿಸುತ್ತಿವೆ. ಈ ಕುರಿತು ಆರ್ಟಿಇ ಪೇರೆಂಟ್ಸ್ ಟೀಚರ್ಸ್ ಅಸೋಸಿಯೇಷನ್ಗೆ ನಾನಾ ಜಿಲ್ಲೆಗಳ ಪೋಷಕರಿಂದ ದೂರುಗಳು ಬರ್ತಿವೆ.
ಆಳ್ವಾಸ್ನಲ್ಲಿ ಓದುತ್ತಿರುವ ವಿದ್ಯಾರ್ಥಿಯೊಬ್ಬರು ಎಸ್ಎಸ್ಎಲ್ಸಿ ಪರೀಕ್ಷೆ ಬರೆಯಬೇಕಿದ್ದು, ಪೋಷಕರು ಹಾಲ್ ಟಿಕೆಟ್ ಕೇಳಿದ್ದರೆ ಶಾಲೆ ನೀಡುತ್ತಿಲ್ವಂತೆ. 9ನೇ ತರಗತಿಯ ಶಾಲಾ ಶುಲ್ಕ ಪಾವತಿಯು ಬಾಕಿ ಇದ್ದು ಅದನ್ನ ಪಾವತಿ ಮಾಡೋ ತನಕ ಹಾಲ್ ಟಿಕೆಟ್ ನೀಡಲ್ಲ ಅಂತಿದ್ದಾರೆ ಎಂದು ಪೋಷಕರು ಅಳಲು ತೋಡಿಕೊಂಡಿದ್ದಾರೆ. ಶಾಲೆಯವರು ಆಡ್ಮಿಶನ್ ಆಗಿಲ್ಲ, ದುಡ್ಡು ಕಟ್ಟಿಲ್ಲ ಏನ್ ಮಾಡಿಕೊಳ್ತಿರೋ ಮಾಡಿಕೊಳ್ಳಿ ಅಂತಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ಬಿಇಓ ಕಚೇರಿಯಿಂದಲೇ ಹಾಲ್ ಟಿಕೆಟ್ ವಿತರಣೆಗೆ ಆಮ್ ಆದ್ಮಿ ಪಾರ್ಟಿ ಆಗ್ರಹ:
ಎಸ್ಎಸ್ಎಲ್ಸಿ ಪರೀಕ್ಷೆ ನಡೆಸುವ ಮೂಲಕ ಸರ್ಕಾರವೂ ಗೊಂದಲ ಮೂಡಿಸಿದೆ. ಪರೀಕ್ಷೆ ನೆಪದಲ್ಲಿ ವಸೂಲಿ ದಂಧೆಗಿಳಿದಿರುವ ಶಾಲೆಗಳ ವಿರುದ್ಧ ಕಠಿಣ ಕ್ರಮಕ್ಕೆ ಆಮ್ ಆದ್ಮಿ ಪಾರ್ಟಿ ಆಗ್ರಹಿಸಿದೆ. ಮಕ್ಕಳ ಪರೀಕ್ಷೆಯ ಹಕ್ಕನ್ನು ಕಸಿದಿರುವ ಶಾಲೆಗಳ ವಿರುದ್ಧ ಕ್ರಮ ಕೈಗೊಳ್ಳಬೇಕು. ಸರ್ಕಾರ ಕೂಡಲೇ ತನ್ನ ನಿಲುವು ಪ್ರಕಟಿಸಿ, ಬಿಇಓ ಕಚೇರಿಯಿಂದಲೇ ಹಾಲ್ ಟಿಕೆಟ್ ವಿತರಣೆ ಮಾಡುವ ಕೆಲಸ ಆಗಬೇಕು ಎಂದು ಒತ್ತಾಯಿಸಿದ್ದಾರೆ. ಫೀಸ್ ಕಟ್ಟಲಾಗದ ಸಂಕಷ್ಟಕ್ಕೆ ದೂಡಿರುವ ಶಿಕ್ಷಣ ನೀತಿಗೆ ಧಿಕ್ಕಾರ ಅಂದಿದ್ದಾರೆ.
ಈ ಕುರಿತು ಸರ್ಕಾರದ ಗಮನ ಸೆಳೆಯಲು ಪರೀಕ್ಷಾ ಮಂಡಳಿ ಮುಂದೆ ಮುತ್ತಿಗೆ ಹಾಕಿ ಪ್ರತಿಭಟಿಸಲು ಪೋಷಕರು ಮುಂದಾಗಿದ್ದಾರೆ.