ಬೆಂಗಳೂರು: ನೆರೆ ಸಂತ್ರಸ್ತರ ಮಕ್ಕಳಿಗೆ ಖಾಸಗಿ ಶಾಲಾ ಒಕ್ಕೂಟ ನೆರವಾಗಿದ್ದು, ನೂರು ಮಕ್ಕಳ ಶಿಕ್ಷಣವನ್ನು ಒಕ್ಕೂಟ ಸದಸ್ಯರು ವಹಿಸಿಕೊಂಡಿದ್ದಾರೆ.
ಇಂದು ಫ್ರೀಡಂ ಪಾರ್ಕ್‌ನಲ್ಲಿ ಪಿಎಸ್ಆರ್ಎಫ್ನ ಸಹಾಯದೊಂದಿಗೆ ನೆರೆ ಸಂತ್ರಸ್ತರಿಗೆ ಬೇಕಾದ ಅಗತ್ಯ ವಸ್ತುಗಳನ್ನು ಸಾಗಣೆ ಮಾಡಲು ಚಾಲನೆ ನೀಡಲಾಯಿತು. ಕಾರ್ಯಕ್ರಮಕ್ಕೆ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಇಲಾಖೆಯ ಪ್ರಧಾನ ಕಾರ್ಯದರ್ಶಿ ಉಮಾಶಂಕರ್ ಚಾಲನೆ ನೀಡಿದರು. ಈ ವೇಳೆ ಇವರಿಗೆ ಒಕ್ಕೂಟದ ಸದಸ್ಯರು ಸಾಥ್ ನೀಡಿದರು.
ಅಷ್ಟೇಅಲ್ಲದೆ, ಈ ವೇಳೆ ನೆರೆಯಿಂದ ಪೋಷಕರನ್ನ ಕಳೆದುಕೊಂಡ ಮಕ್ಕಳಿಗೆ ಮತ್ತು ಸಂಪೂರ್ಣ ಮನೆ ಹಾನಿಯಾದ ಬಡ ಮಕ್ಕಳಿಗೆ ಶಿಕ್ಷಣ ನೀಡುವ ಜವಾಬ್ದಾರಿ ವಹಿಸಿಕೊಂಡರು. ಈ ಎರಡು ರೀತಿಯ ಫಲಾನುಭವಿ ಮಕ್ಕಳಿಗೆ ಸಂಪೂರ್ಣ ಶಿಕ್ಷಣ ಜವಾಬ್ದಾರಿ ನೀಡುವುದಾಗಿ ಖಾಸಗಿ ಅನುದಾನ ರಹಿತ ಶಾಲಾಮಂಡಳಿಯ ಕಾರ್ಯದರ್ಶಿ ಶಶಿಕುಮಾರ್ ಮಾಹಿತಿ ನೀಡಿದರು.
ಪಿಯು ಉಪನ್ಯಾಸಕರಿಗೆ ಶೀಘ್ರವೇ ಬಡ್ತಿ; ಉಮಾ ಶಂಕರ್:
ಇದೇ ವೇಳೆ ಬಿ ಕೆ ಪವಿತ್ರ ಪ್ರಕರಣದ ಹಿನ್ನೆಲೆ ಪಿಯು ಉಪನ್ಯಾಸಕರಿಗೆ ಎರಡು ವರ್ಷ ಬಡ್ತಿ ನೀಡಲಾಗಲಿಲ್ಲ. ಹೀಗಾಗಿ ಶೀಘ್ರವೆ ಬಡ್ತಿ ನೀಡಲಾಗುವುದು ಎಂದು ತಿಳಿಸಿದರು. ಜೊತೆಗೆ ಖಾಲಿ ಇರೋ ಸರ್ಕಾರಿ ಪಿಯು ಕಾಲೇಜುಗಳಲ್ಲಿ ಪ್ರಾಂಶುಪಾಲರ ಕೊರತೆ ಇದ್ದು, ಶೀಘ್ರದಲ್ಲೇ ಪ್ರಾಂಶುಪಾಲರನ್ನ ನೇಮಕ ಮಾಡಲಾಗುವುದು ಎಂದು ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಪ್ರಧಾನ ಕಾರ್ಯದರ್ಶಿ ಉಮಾಶಂಕರ್ ಹೇಳಿದರು.