ಬೆಂಗಳೂರು: ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ಪೊಲೀಸ್ ಸಿಬ್ಬಂದಿಯ ಕಣ್ತಪ್ಪಿಸಿ ವಿಚಾರಣಾಧೀನ ಕೈದಿಯೊಬ್ಬ ನೇಣಿಗೆ ಶರಣಾದ ಘಟನೆ ಬೆಳಕಿಗೆ ಬಂದಿದೆ.
ಬೆಂಗಳೂರಿನ ಯಲಹಂಕ ಮೂಲದ ಅನಿಲ್ ರಾಜ್(55) ನೇಣಿಗೆ ಶರಣಾದ ಕೈದಿ. ಪತ್ರಿಕೆಯೊಂದರ ಸಂಪಾದಕನಾಗಿದ್ದ ಅನಿಲ್ ಅತ್ಯಾಚಾರ ಆರೋಪ ಪ್ರಕರಣದಲ್ಲಿ ಕಾರಾಗೃಹದಲ್ಲಿ ವಿಚಾರಣಾಧೀನ ಕೈದಿಯಾಗಿದ್ದ. ಅಲ್ಲದೆ ಇನ್ನೆರಡು ಪ್ರಕರಣಗಳಲ್ಲಿ ಜೈಲು ಸೇರಿದ್ದ ಅನಿಲ್ನನ್ನು ನಿನ್ನೆಯಷ್ಟೇ ಆತನ ಕುಟುಂಬದವರು ಜೈಲಿಗೆ ಬಂದು ಭೇಟಿಯಾಗಿ ಮಾತನಾಡಿಸಿ ಹೋಗಿದ್ದರು ಎಂದು ಮೂಲಗಳು ತಿಳಿಸಿವೆ. ನಿನ್ನೆ ರಾತ್ರಿ ಜೈಲಿನ ಒಳಗಡೆಯ ಶಿವನ ದೇವಾಲಯದ ಆವರಣದಲ್ಲಿನ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಅಷ್ಟಿಷ್ಟು ಜೀವ ಉಳಿದಿದ್ದು, ತಕ್ಷಣ ಜೈಲಿನ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಿ ನಂತರ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ಸಾಗಿಸುವ ಸಂದರ್ಭದಲ್ಲಿ ಕೊನೆಯುಸಿರೆಳೆದಿದ್ದಾನೆಂದು ತಿಳಿದುಬಂದಿದೆ.
ಇದೀಗ ಪರಪ್ಪನ ಅಗ್ರಹಾರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ನ್ಯಾಯಾಧೀಶರ ಸಮ್ಮುಖದಲ್ಲಿ ಆತ್ಮಹತ್ಯೆಯ ವಿಚಾರ ತನಿಖೆಯಲ್ಲಿದೆ.