ಬೆಂಗಳೂರು: ಲಾಕ್ಡೌನ್ ಪರಿಣಾಮ ಆಸ್ಪತ್ರೆಯೆದುರು ಗರ್ಭಿಣಿಯರು ಕಣ್ಣೀರು ಹಾಕುವಂತಾಗಿದ್ದು, 9 ತಿಂಗಳಾದರು ಚಿಕಿತ್ಸೆ ಸಿಕ್ಕಿಲ್ಲವೆಂದು ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ವೈರಸ್ ಭೂತ ಒಂದು ಕಡೆಯಾದರೆ, ಇದರಿಂದ ತಪ್ಪಿಸಿಕೊಳ್ಳಲು ಲಾಕ್ಡೌನ್ ಎಫೆಕ್ಟ್ ಮತ್ತೊಂದೆಡೆ. ಇವೆರೆಡರ ನಡುವೆ ಗರ್ಭಿಣಿಯರು ಸಂಕಷ್ಟ ಅನುಭವಿಸುತ್ತಿದ್ದಾರೆ. ಹೌದು, ಒಂಭತ್ತು ತಿಂಗಳ ಗರ್ಭಿಣಿಯರು ಆಸ್ಪತ್ರೆ ಎದುರು ನಿಂತು ನಮಗೆ ಚಿಕಿತ್ಸೆ ಕೊಡಿ ನೀಡಿ ಪರಿಪರಿಯಾಗಿ ಬೇಡಿಕೊಂಡಿದ್ದಾರೆ.
ನಗರದ ಬಹುತೇಕ ಸರ್ಕಾರಿ ಆಸ್ಪತ್ರೆಗಳನ್ನ ಕೋವಿಡ್-19 ಚಿಕಿತ್ಸೆಗಾಗಿ ಬಳಸಿಕೊಳ್ಳುತ್ತಿದ್ದು, ತುರ್ತು ಸೇವೆಗಳಿಗೆ ಅಷ್ಟೇ ಅವಕಾಶ ಕಲ್ಪಿಸಲಾಗಿದೆ. ಹಾಗಾಗಿ ನಗರದ ಕೆ ಸಿ ಜನರಲ್ ಆಸ್ಪತ್ರೆಯಲ್ಲಿ ಈ ಹಿಂದೆ ಕೊರೊನಾ ಸೋಂಕಿತರನ್ನ ಮಾತ್ರ ಇಡಲಾಗಿತ್ತು. ಆದ್ರೀಗ ಅವರನ್ನೆಲ್ಲಾ ವಿಕ್ಟೋರಿಯಾಗೆ ಶಿಫ್ಟ್ ಮಾಡಲಾಗಿದೆ. ಸದ್ಯ ಸ್ವಚ್ಛತಾ ಕಾರ್ಯ ಮುಂದುವರಿದಿದೆ. ಈ ನಡುವೆ ತಮಗೆ ಚಿಕಿತ್ಸೆ ಸಿಗುತ್ತಿಲ್ಲವೆಂದು ಕೆ ಸಿ ಜನರಲ್ ಆಸ್ಪತ್ರೆ ಬಳಿ ಗರ್ಭಿಣಿಯರು ಕಣ್ಣೀರು ಹಾಕುತ್ತಿದ್ದಾರೆ. ''9 ತಿಂಗಳು ಈಗ ನಮಗೆ, ಚಿಕಿತ್ಸೆ ಸಿಕ್ಕಿಲ್ಲ'' ಅಂತ ಬೇಸರ ವ್ಯಕ್ತಪಡಿಸಿದ್ದಾರೆ.
ಕಾದು-ಕಾದು ಸುಸ್ತಾದರೂ ಚಿಕಿತ್ಸೆ ಸಿಗಲಿಲ್ಲ, ಊಟ ಮಾಡಲು ಹೋಟೆಲ್ ತೆಗೆದಿಲ್ಲ ಅಂತ ತಮ್ಮ ಸಂಕಷ್ಟವನ್ನ ತೋಡಿಕೊಂಡಿದ್ದಾರೆ. ಆಸ್ಪತ್ರೆ ಸ್ವಚ್ಛತೆ ಮಾಡಲಿ, ಆದರೆ ನಮಗೆ ಪ್ರತ್ಯೇಕ ವಾರ್ಡ್ ತೆರೆದು ವೈದ್ಯಕೀಯ ಚಿಕಿತ್ಸೆ ನೀಡಿ ಅಂತ ಗರ್ಭಿಣಿಯರು ಮನವಿ ಮಾಡಿದ್ದಾರೆ.