ಬೆಂಗಳೂರು: ನಗರದ ಡೇಂಜರಸ್ ವಾರ್ಡ್ ಪಾದರಾಯನಪುರದಲ್ಲಿ ಆಘಾತಕಾರಿ ಅಂಶವೊಂದು ಬಯಲಿಗೆ ಬಂದಿದೆ.
ಒಂಬತ್ತು ತಿಂಗಳ ತುಂಬು ಗರ್ಭಿಣಿಗೆ ಕೊರೊನಾ ಸೋಂಕು ವಕ್ಕರಿಸಿದೆ. ವಾರ್ಡ್ನಲ್ಲಿ ಎಲ್ಲರ ರ್‍ಯಾಂಡಮ್ ಚೆಕ್‌ಅಪ್ ನಡೆಸಿದ ವೇಳೆ ಈಕೆಗೆ ಕೊರೊನಾ ಸೋಂಕು ದೃಢಪಟ್ಟಿದೆ. 34 ವರ್ಷದ ಈ ಗರ್ಭಿಣಿ ಮಹಿಳೆಯನ್ನು ಕೂಡಲೇ ವಿಕ್ಟೋರಿಯಾ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಲಾಗಿದೆ. ಜೊತೆಗೆ ಹೆರಿಗೆ ಸಮಯ ಕೂಡ ಆಗಿರುವುದರಿಂದ ಮಗುವಿಗೂ ಕೊರೊನಾ ಹರಡದಂತೆ ಎಚ್ಚರವಹಿಸುವುದು, ಗರ್ಭಿಣಿಯ ಆರೋಗ್ಯ ಏರುಪೇರಾಗದಂತೆ ನೋಡಿಕೊಳ್ಳುವ ಬಹುದೊಡ್ಡ ಸವಾಲು ಎದುರಾಗಿದೆ.
ನಿನ್ನೆ ಸಂಜೆ ಪಾದರಾಯನಪುರದ 35 ವರ್ಷದ ಮಹಿಳೆ ಹಾಗೂ 25 ವರ್ಷದ ಯುವಕನ ಕೊರೊನಾ ರಿಪೋರ್ಟ್ ಪಾಸಿಟಿವ್ ಬಂದಿತ್ತು. ಈ ಮೂಲಕ ಪಾದರಾಯನಪುರದ ಕೊರೊನಾ ಸೋಂಕಿತರ ಸಂಖ್ಯೆ 38ಕ್ಕೆ ಏರಿಕೆಯಾಗಿದೆ. ಅಲ್ಲದೆ ನಿನ್ನೆ ಸಂಜೆಯಿಂದ ಪತ್ತೆಯಾದ ಹೊಸ ಕೊರೊನಾ ಸೋಂಕಿತರಿಗೆ ಯಾವುದೇ ರೋಗ ಲಕ್ಷಣ ಇರಲಿಲ್ಲ ಎಂದು ಆರೋಗ್ಯಾಧಿಕಾರಿ ಮನೋರಂಜನ್ ಹೆಗಡೆ ತಿಳಿಸಿದ್ದಾರೆ. ನಿನ್ನೆ ಈ ಇಬ್ಬರು ಸೋಂಕಿತರ ಹನ್ನೆರಡು ಜನ ಪ್ರಥಮ ಸಂಪರ್ಕಿತರನ್ನು ಪತ್ತೆ ಹಚ್ಚಿದ್ದು, ಕ್ವಾರಂಟೈನ್ ಮಾಡಲಾಗಿದೆ. ಆದ್ರೆ 25 ವರ್ಷದ ಯುವಕ ಏನು ಕೆಲಸ ಮಾಡ್ತಿದ್ದ? ಎಲ್ಲೆಲ್ಲ ಪ್ರಯಾಣ ಮಾಡಿದ್ದ, ಯಾರನ್ನು ಸಂಪರ್ಕಿಸಿದ್ದ ಎಂದು ನಿಖರ ಮಾಹಿತಿ ಬಾಯಿಬಿಡುತ್ತಿಲ್ಲ. ಇದು ಪಾಲಿಕೆ ಅಧಿಕಾರಿಗಳಿಗೆ ತಲೆನೋವಾಗಿ ಪರಿಣಮಿಸಿದೆ.
ಅರೆಸ್ಟ್ ಆದ ವ್ಯಕ್ತಿಗೆ ಕೊರೊನಾ ನೆಗೆಟಿವ್-ಪತ್ನಿಗೆ ಪಾಸಿಟಿವ್!: ಪಾದರಾಯನಪುರದ ಗಲಭೆಯಲ್ಲಿ ಭಾಗಿಯಾದ ವ್ಯಕ್ತಿಯನ್ನು ಬಂಧಿಸಲಾಗಿದ್ದು, ಇವನ ಕೊರೊನಾ ಟೆಸ್ಟ್ ನೆಗೆಟಿವ್ ಬಂದಿತ್ತು. ಆದರೆ, ಈತನ ಪತ್ನಿಗೆ ( 35 ವರ್ಷ) ಕೊರೊನಾ ಪಾಸಿಟಿವ್ ಬಂದಿದೆ. ಇವರೆಲ್ಲ ಪಾದರಾಯನಪುರದ ಹತ್ತನೇ ಕ್ರಾಸ್‌ನ ನಿವಾಸಿಗಳಾಗಿದ್ದಾರೆ.