ಬೆಂಗಳೂರು : ಬಿಜೆಪಿ ಯುವ ಮೋರ್ಚಾದ ಸದಸ್ಯ ಪ್ರವೀಣ್ ನೆಟ್ಟಾರು ಕೊಲೆ ಪ್ರಕರಣದ ವಿಚಾರಣೆ ವೇಳೆ ಆರೋಪಿಗಳಿಗೆ ಕಿರುಕುಳ ನೀಡಿ ತಪ್ಪೊಪ್ಪಿಗೆ ಹೇಳಿಕೆ ದಾಖಲಿಸಿದ್ದಾರೆ ಎಂಬ ಆರೋಪ ಸಂಬಂಧ ಎಫ್‌ಎಸ್‌ಎಲ್ ಮತ್ತು ಎನ್‌ಐಎ ಕಚೇರಿಯಲ್ಲಿನ 2022ರ ನವೆಂಬರ್ ಸಿಸಿಟಿವಿ ದೃಶ್ಯಾವಳಿ ಲಭ್ಯವಿದ್ದರೆ ಅದನ್ನು ವಿಶೇಷ ನ್ಯಾಯಾಲಯಕ್ಕೆ ಮುಚ್ಚಿದ ಲಕೋಟೆಯಲ್ಲಿ ಸಲ್ಲಿಸಲು ಹೈಕೋರ್ಟ್ ಆದೇಶಿಸಿದೆ.
ಪ್ರಕರಣದ ಹದಿನೆಂಟನೆಯ ಆರೋಪಿಗೆ ಹಿಂಸೆ ನೀಡಿ ಅಧಿಕಾರಿಗಳ ಇಚ್ಛೆಯಂತೆ ತಪ್ಪೊಪ್ಪಿಗೆ ಹೇಳಿಕೆ ದಾಖಲಿಸಲಾಗಿದೆ ಎಂದು ಆರೋಪಿಸಿ ಮೊದಲ ಆರೋಪಿ ಮಹಮ್ಮದ್ ಸೈಯೀಬ್ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿಯನ್ನು ವಿಶೇಷ ನ್ಯಾಯಾಲಯ ವಜಾಗೊಳಿಸಿ ಆದೇಶಿಸಿತ್ತು.
ಇದನ್ನು ಪ್ರಶ್ನಿಸಿ ಮಹಮ್ಮದ್ ಸೈಯೀಬ್ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಶ್ರೀನಿವಾಸ್ ಹರೀಶ್‌ಕುಮಾರ್ ಮತ್ತು ನ್ಯಾಯಮೂರ್ತಿ ಬಸವರಾಜ ಅವರಿದ್ದ ವಿಭಾಗೀಯ ಪೀಠ ಈ ಆದೇಶ ಮಾಡಿ ಅರ್ಜಿ ಇತ್ಯರ್ಥ ಪಡಿಸಿದೆ. ಎಫ್‌ಎಸ್‌ಎಲ್ ಮತ್ತು ಎನ್‌ಎಐ ಕಚೇರಿಗಳಲ್ಲಿ ಸಿಸಿಟಿವಿ ದೃಶ್ಯಾವಳಿ ಲಭ್ಯವಿದ್ದರೆ ಅದನ್ನು ಪಡೆದು ವಿಶೇಷ ಕೋರ್ಟ್‌ಗೆ ಮುಚ್ಚಿದ ಲಕೋಟೆಯಲ್ಲಿ ಸಲ್ಲಿಸಬೇಕು ಎಂದು ಎಫ್‌ಎಸ್‌ಎಲ್ ಮತ್ತು ಎನ್‌ಐಎ ಕಂಪ್ಯೂಟರ್ ಕೋಶ ಮತ್ತು ಸಿಬ್ಬಂದಿಗೆ ಆದೇಶಿಸಿದೆ.
ಅರ್ಜಿದಾರರ ಕೋರಿಕೆಯಂತೆ ಎನ್‌ಐಎ ಅಧಿಕಾರಿಗಳ ಕರೆ ದಾಖಲೆಗಳನ್ನು ನೀಡಲಾಗದು, ಏಕೆಂದರೆ ಭಾರತೀಯ ಸಾಕ್ಷ್ಯ ಕಾಯಿದೆ 1872 ಸೆಕ್ಷನ್ 124 ಮತ್ತು 126 ಪ್ರಕಾರ, ಅಧಿಕಾರಿಗಳ ನಡುವೆ ಹಲವು ಗೌಪ್ಯ ಅಧಿಕೃತ ಸಂವಹನ ನಡೆದಿರುತ್ತದೆ. ಅದನ್ನು ಬಹಿರಂಗಪಡಿಸಲಾಗದು ಎಂದು ನ್ಯಾಯಪೀಠ ಆದೇಶದಲ್ಲಿ ತಿಳಿಸಿದೆ.
ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲರು, 2022ರ ನವೆಂಬರ್ನಲ್ಲಿ ಎಫ್‌ಎಸ್‌ಎಲ್ ಮತ್ತು ಎನ್‌ಐಎ ಕಚೇರಿಗಳಲ್ಲಿ 18ನೇ ಆರೋಪಿ ಮೊಹಮ್ಮದ್ ಜಬೀರ್‌ಗೆ ತಪ್ಪು ಒಪ್ಪಿಕೊಳ್ಳುವಂತೆ ಬಲವಂತ ಮಾಡಿದ್ದೇ ಅಲ್ಲದೆ ಎನ್‌ಐಎ ಅಧಿಕಾರಿಗಳು ಸಾಕಷ್ಟು ಕಿರುಕುಳ ನೀಡಿದರು ಆರೋಪಿಸಿದರು. ಇದೇ ಕಾರಣದಿಂದ ಆರೋಪಿ ತಪ್ಪೊಪ್ಪಿಗೆ ಹೇಳಿಕೆ ನೀಡಿದ್ದಾರೆ. ಆದ್ದರಿಂದ ವಿಚಾರಣೆಗೊಳಪಡಿಸಿದ ದಿನಗಳ ಸಿಸಿಟಿವಿ ದಶ್ಯಾವಳಿ ಮತ್ತು ಎನ್‌ಎಐ ಅಧಿಕಾರಿಗಳ ಕರೆ ದಾಖಲೆಗಳ ವಿವರಗಳನ್ನು ನೀಡುವಂತೆ ಸೂಚನೆ ನೀಡಲು ನಿರ್ದೇಶನ ನೀಡುವಂತೆ ಕೋರಿದ್ದರು.
ಪ್ರಕರಣದ ಹಿನ್ನೆಲೆ ಏನು ?: ಪ್ರವೀಣ್ ನೆಟ್ಟಾರು ಕೊಲೆ ಪ್ರಕರಣದಲ್ಲಿ ಹಲವು ಮಂದಿಯನ್ನು ಎನ್‌ಐಎ ಅಧಿಕಾರಿಗಳು ಬಂಧಿಸಿದ್ದರು. ಅವರಲ್ಲಿ 18ನೇಯ ಆರೋಪಿ ಮೊಹಮ್ಮದ್ ಜಬೀರ್ ತಪ್ಪೊಪ್ಪಿಗೆ ಹೇಳಿಕೆ ನೀಡುವುದಾಗಿ ಎನ್‌ಐಎ ಅಧಿಕಾರಿಗಳ ಮುಂದೆ ವಿವರಿಸಿದ್ದರು. ಈ ಸಂಬಂಧ ವಿಶೇಷ ನ್ಯಾಯಾಲಯಕ್ಕೆ ಮನವಿ ಮಾಡಿದ್ದ ಎನ್‌ಐಎ ಅಧಿಕಾರಿಗಳು ನ್ಯಾಯಾಲಯದ ಮುಂದೆ ತಪ್ಪೊಪ್ಪಿಗೆ ಹೇಳಿಕೆ ದಾಖಲಿಸಿದ್ದರು.
ಇದನ್ನು ಪ್ರಶ್ನಿಸಿದ್ದ ಮೊದಲ ಆರೋಪಿ ಮೊಹಮ್ಮದ್ ಸೈಯೀಬ್ ವಿಶೇಷ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿ, ಮೊಹಮ್ಮದ್ ಜಬೀರ್ ಅವರನ್ನು ಅಧಿಕಾರಿಗಳು ವಿಚಾರಣೆ ಮಾಡುತ್ತಿದ್ದ ಸಂದರ್ಭದಲ್ಲಿನ ಸಿಸಿಟಿವಿ ದೃಶ್ಯಗಳನ್ನು ಸಲ್ಲಿಸುವಂತೆ ಕೋರಿ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿಯನ್ನು ವಿಶೇಷ ನ್ಯಾಯಾಲಯ ರದ್ದು ಪಡಿಸಿತ್ತು. ಅಲ್ಲದೆ, ವಿಶೇಷ ನ್ಯಾಯಾಲಯ ಜಬೀರ್‌ಗೆ ಎನ್‌ಐಎ ಅಧಿಕಾರಿಗಳು ಕಿರುಕುಳ ನೀಡಿದ್ದರೆಂಬ ಆರೋಪ ಆಧಾರರಹಿತ ಮತ್ತು ಸುಳ್ಳು ಎಂದು ಹೇಳಿ ಅರ್ಜಿ ವಜಾಗೊಳಿಸಿತ್ತು. ಇದನ್ನು ಪ್ರಶ್ನಿಸಿ ಹೈಕೋರ್ಟ್ ಮೆಟ್ಟಿಲೇರಿದ್ದರು.
ಓದಿ: ಪ್ರವೀಣ್ ನೆಟ್ಟಾರು ಹತ್ಯೆ ಕೇಸ್: ಆರೋಪಿಗಳ ಶರಣಾಗತಿಗೆ NIA ನೀಡಿದ ಅವಧಿ ಮುಕ್ತಾಯ; ಆಸ್ತಿ ಮುಟ್ಟುಗೋಲಿಗೆ ನಿರ್ಧಾರ