ಬೆಂಗಳೂರು: ಡಿಜಿಪಿ ಹಾಗೂ ಐಜಿಪಿ ನೀಲಮಣಿ ಎನ್.ರಾಜು ಇಂದು ನಿವೃತ್ತಿಯಾಗಿದ್ದಾರೆ. ಈ ಹಿನ್ನೆಲೆಯಲ್ಲಿ ರಾಜ್ಯ ಪೊಲೀಸ್ ಇಲಾಖೆಯ ನೂತನ ಸಾರಥಿಯಾಗಿ ಹಿರಿಯ ಪೊಲೀಸ್ ಅಧಿಕಾರಿ ಪ್ರವೀಣ್ ಸೂದ್ ಅವರನ್ನು ನೇಮಕ ಮಾಡಿ ಆದೇಶ ಮಾಡಿದೆ.
ಪ್ರವೀಣ್ ಸೂದ್ 1986ರ ಬ್ಯಾಚ್ನ ಐಪಿಎಸ್ ಅಧಿಕಾರಿಯಾಗಿದ್ದು, 1989ರಲ್ಲಿ ಮೈಸೂರು ಎಎಸ್ಪಿಯಾಗಿ ನೇಮಕವಾಗಿದ್ದರು. ಬಳ್ಳಾರಿ, ರಾಯಚೂರಿನಲ್ಲಿ ಎಸ್.ಪಿಯಾಗಿ ಕರ್ತವ್ಯ ನಿರ್ವಹಣೆ ಕೂಡಾ ಮಾಡಿದ್ದರು. 1996 - ಮುಖ್ಯಮಂತ್ರಿಗಳ ಪದಕ ಪ್ರಶಸ್ತಿಗೆ ಭಾಜನರಾಗಿದ್ದರು. 1999 ನಲ್ಲಿ ಮಾರಿಷಸ್ ದೇಶದ ಪೊಲೀಸ್ ಸಲಹೆಗಾರರಾಗಿ ಮೂರು ವರ್ಷಗಳ ಸೇವೆ ಸಲ್ಲಿಸಿದ ಅನುಭವ ಅವರಿಗಿತ್ತು.
1986ರ ಬ್ಯಾಚ್ನ ಐಪಿಎಸ್ ಅಧಿಕಾರಿ ಆಗಿರುವ ಸೂದ್ ಅವರ ಸೇವಾ ಹಿರಿತನಕ್ಕೆ ರಾಜ್ಯ ಸರ್ಕಾರ ಒಲವು ತೋರಿದೆ ಎಂದು ಹೇಳಲಾಗುತ್ತಿದೆ. ಈಗಾಗಲೇ ಡಿಜಿ ಹಾಗೂ ಐಜಿಪಿ ಹುದ್ದೆ ರೇಸ್ ನಲ್ಲಿದ್ದ ಎ.ಎಂ.ಪ್ರಸಾದ್ ಹಾಗೂ ತರಬೇತಿ ವಿಭಾಗದ ಡಿಜಿಪಿ ಗರ್ಗ್ ಅವರು ಪ್ರಬಲ ಪೈಪೋಟಿಯೊಡ್ಡಿದ್ದರು. ಮೂವರು ಹಿರಿಯ ಅಧಿಕಾರಿಗಳ ಸೇವಾ ಹಿರಿತನ ಲೆಕ್ಕ ಹಾಕಿರುವ ಸರ್ಕಾರವು ಇವರೆಲ್ಲರಿಗಿಂತ ಸಿನಿಯರ್ ಆಗಿರುವ ಸೂದ್ ಅವರಿಗೆ ಮಣೆ ಹಾಕಿದೆ.