ಬೆಂಗಳೂರು: ಬಿಜೆಪಿ-ಜೆಡಿಎಸ್ 20-20 ಸರ್ಕಾರದ ಅವಧಿಯಲ್ಲಿನ ಅಧಿಕಾರ ಹಸ್ತಾಂತರ ವಿಚಾರ ಸದನದಲ್ಲಿ ಬಿಸಿಬಿಸಿ ಚರ್ಚೆಗೆ ಕಾರಣವಾಯಿತು. ವಿಧಾನಸಭೆಯಲ್ಲಿ ರಾಜ್ಯಪಾಲರ ಭಾಷಣದ ಮೇಲಿನ ಚರ್ಚೆ ವೇಳೆ ವಿಷಯ ಪ್ರಸ್ತಾಪಿಸಿದ ಹೆಚ್.ಡಿ.ಕುಮಾರಸ್ವಾಮಿ, ಅಧಿಕಾರ ಹಸ್ತಾಂತರ ಮಾಡಲು ನಾನು ಪ್ರಾಮಾಣಿಕ ಪ್ರಯತ್ನ ನಡೆಸಿದ್ದೆ. ಯಾರಿಂದ ಅನ್ಯಾಯ ಆಯಿತು ಎಂದು ಸ್ವತಃ ಯಡಿಯೂರಪ್ಪ ಹೇಳಿದ್ದಾರೆ ಎಂದು ಹೇಳಿದರು.
ಅಧಿಕಾರ ಹಸ್ತಾಂತರ ಸಂದರ್ಭದಲ್ಲಿ ಅಗ್ರಿಮೆಂಟ್ ದೆಹಲಿಯಿಂದ ಬಂದಿತ್ತು. ಅಗ್ರಿಮೆಂಟ್ಗೆ ಸಹಿ ಹಾಕಲು ಯಡಿಯೂರಪ್ಪ ಒಪ್ಪಿರಲಿಲ್ಲ. ಈ ಕಾರಣಕ್ಕಾಗಿ ನಾನು ಬೆಂಬಲ ಕೊಡಲಿಲ್ಲ. ಆದರೆ ನಾನು ಬಲಿಪಶುವಾದೆ. ಯಡಿಯೂರಪ್ಪ ಹೆಮ್ಮರವಾಗಿ ಬೆಳೆಯುತ್ತಾರೆ ಎಂದು ನಮ್ಮವರೇ ಕಾಲೆಳೆದರು. ಅವರು ಯಾರು ಎಂದು ನನಗೆ ಗೊತ್ತಿದೆ ಎಂದು ಬಿಎಸ್ವೈ ಅವರೇ ಹೇಳಿದ್ದರು. ಇದಕ್ಕೆ ನಾನು ಅಧಿಕಾರ ಹಸ್ತಾಂತರ ಮಾಡಲು ಆಗಿರಲಿಲ್ಲ ಎಂದು ತಿಳಿಸಿದರು.
ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಸಚಿವ ಮಾಧುಸ್ವಾಮಿ, ಹಾಗಾದರೆ ವಿಶ್ವಾಸ ಮತಯಾಚನೆ ಸಂದರ್ಭದಲ್ಲಿ ಏಕೆ ಬೆಂಬಲ ಕೊಟ್ಟಿಲ್ಲ? ಪಾಪ ಮಾಡಿ ಮಾಡಿಲ್ಲ ಮಾಡಿಲ್ಲ ಎಂದರೆ ಹೇಗೆ? ಎಂದು ಪ್ರಶ್ನಿಸಿದರು. ಈ ವೇಳೆ ಮಾತು ಮುಂದುವರಿಸಿದ ಕುಮಾರಸ್ವಾಮಿ, ಯಡಿಯೂರಪ್ಪ ಅವರು ಮಾಡಿದ ಭಾಷಣದ ಕ್ಯಾಸೆಟ್ ಸಹ ನನ್ನ ಬಳಿ ಇದೆ. ಕುಮಾರಸ್ವಾಮಿ ನನಗೆ ಅಧಿಕಾರ ಬಿಟ್ಟುಕೊಟ್ಟರು. ಆದರೆ ನಮ್ಮ ಪಕ್ಷದ ನಾಯಕರು ಚೂರಿ ಹಾಕಿದ್ರು ಅಂತ ಯಡಿಯೂರಪ್ಪ ಭಾಷಣ ಮಾಡಿದ್ದಾರೆ. ಅಧಿಕಾರ ಹಸ್ತಾಂತರ ಕುರಿತು ಕೇಂದ್ರ ನಾಯಕರು ಬಂದು ಮಾತುಕತೆ ಮಾಡಿರಲಿಲ್ಲ. ನಾನು ಅಧಿಕಾರ ಕೊಡಲು ಸಿದ್ಧ ಇದ್ದೆ ಎಂದು ಸ್ಪಷ್ಟಪಡಿಸಿದರು.
ಜೆಡಿಎಸ್ ಶಾಸಕರಿಂದ ಬಾವಿಗಿಳಿದು ಪ್ರತಿಭಟನೆ: ಸಿದ್ಧಾಂತದ ಬಗ್ಗೆ ನೀವು ಬಹಳ ಮಾತಾಡ್ತೀರಿ. ಕೆಜೆಪಿ ಕಟ್ಟಿದಾಗ ಯಡಿಯೂರಪ್ಪ ಏನು ಮಾತನಾಡಿದ್ರು. ಬಿಜೆಪಿ ನಾಯಕರು ಬೆನ್ನಿಗೆ ಚೂರಿ ಹಾಕಿದ್ರು ಅಂತ ಹೇಳಿರಲಿಲ್ವಾ? ಎಂದ ಕುಮಾರಸ್ವಾಮಿ ಮಾತಿಗೆ ಮಾಧುಸ್ವಾಮಿ ಮತ್ತು ಬಿಜೆಪಿ ಶಾಸಕರು ಆಕ್ಷೇಪ ವ್ಯಕ್ತಪಡಿಸಿದರು.
ಮಂಡ್ಯದಲ್ಲಿ ನಿಮ್ಮ ಕೇಂದ್ರ ಮಂತ್ರಿ ಬಂದು ಏನು ಮಾತಾಡ್ತಾರೆ. ದೇವೇಗೌಡರ ಕುಟುಂಬಕ್ಕೆ ಎಟಿಎಮ್ ಅಂತ ಹೇಳ್ತಾರೆ. ಯಾವ ಆಧಾರದ ಮೇಲೆ ನೀವು ಆರೋಪ ಮಾಡ್ತೀರಿ. ಹೇಗೆ ಮಾತಾಡ್ತೀರಿ ನೀವು ಎಂದು ಕುಮಾರಸ್ವಾಮಿ ಕೂಗಾಡಿದರು. ಈ ವೇಳೆ ಸದನದಲ್ಲಿ ಬಿಜೆಪಿ ಮತ್ತು ಕುಮಾರಸ್ವಾಮಿ ಮಧ್ಯೆ ಮಾತಿನ ಚಕಮಕಿ ನಡೆಯಿತು. ನೀವು ಬಾಯಿಗೆ ಬಂದಂತೆ ಬೊಗಳಿಕೊಂಡು ಬರ್ತಿಲ್ವಾ ಎಂದು ಮಾಧುಸ್ವಾಮಿ ಕಿಡಿ ಕಾರಿದರು. ಸಚಿವ ಮಾಧುಸ್ವಾಮಿ ಮಾತಿಗೆ ವಿರೋಧ ವ್ಯಕ್ತಪಡಿಸಿದ ಜೆಡಿಎಸ್ ಶಾಸಕರು, ಸದನದ ಬಾವಿಗೆ ಬಂದು ಪ್ರತಿಭಟನೆ ನಡೆಸಿದರು.
ನೀವು ಅಧಿಕಾರಕ್ಕೆ ಬರಲು ವಿಕಲಚೇತನರು ಬೇಕಾಯಿತು: ಸಿ.ಟಿ.ರವಿ ಜೆಡಿಎಸ್ ಪಕ್ಷವನ್ನು ವಿಕಲಚೇತನ ಎಂದ ಹೇಳಿಕೆಗೆ ತಿರುಗೇಟು ನೀಡಿದ ಹೆಚ್.ಡಿ.ಕುಮಾರಸ್ವಾಮಿ, ಈ ವಿಕಲಚೇತನ ಮಗು ಆಗಿರೋ ನಮ್ಮ ಪಕ್ಷ ನಿಮಗೆ ಜೀವ ಕೊಟ್ಟಿದೆ. ನೀವು ಅಧಿಕಾರಕ್ಕೆ ಬರಲು ಈ ವಿಕಲಚೇತನ ಮಗು ಕಾರಣ ಅಂತ ಮರೀಬೇಡಿ ಎಂದು ತಿಳಿಸಿದರು.
ವಿಕಚೇತನರ ಬದುಕಿನ ಕಷ್ಟ ಏನು ಅಂತ ತಂದೆ ತಾಯಿಗೆ ಗೊತ್ತು. ಆ ಯಾತನೆ ಗೊತ್ತಿದ್ದರೆ ಸಿ.ಟಿ. ರವಿ ಈ ಹೋಲಿಕೆ ನೀಡ್ತಿರಲಿಲ್ಲ. ವಿಕಲಚೇತನ ಮಗುವಿನ ಕಷ್ಟ ಗೊತ್ತಿದ್ದರೆ ಇದನ್ನು ಹೇಳ್ತಿರಲಿಲ್ಲ. ಜೆಡಿಎಸ್ನ್ನು ವಿಕಲಚೇತನ ಮಗು ಎಂದು ಹೇಳಿದ್ದಾರೆ. ನಾನು ಹಗಲು ರಾತ್ರಿ ಕಷ್ಟ ಪಡ್ತಿರೋದು 123 ಸೀಟ್ ಗೆಲ್ಲಲು. ನಾನು ಎರಡು ಕಡೆ ಇದ್ದು ಅನುಭವಿಸಿದ್ದೇನೆ. ನನ್ನ ಮೇಲೆ 150 ಕೋಟಿ ರೂ. ಲಂಚದ ಆರೋಪ ಮಾಡಿದ್ರು. ನನ್ನ ಮೇಲೆ ಕೊಲೆ ಬೆದರಿಕೆ ಕೇಸ್ ಸಹ ಹಾಕಲಾಯ್ತು. ನಾವು ಬಿಜೆಪಿ ಜೊತೆಗೆ ಸರ್ಕಾರ ಮಾಡಲು ಕೆಲವರು ನಮ್ಮ ಬಳಿಗೆ ಬಂದಿದ್ದರು. ಗೋವಿಂದ ಕಾರಜೋಳ ಮತ್ತು ಸಿ.ಎಂ. ಉದಾಸಿ ನಮ್ಮ ಬಳಿ ಬಂದಿದ್ದರು ಎಂದರು.
ದೇವೇಗೌಡರನ್ನು ಲಾಟರಿ ಪ್ರಧಾನ ಮಂತ್ರಿ ಅಂತ ಸಿಟಿ ರವಿ ಹೇಳಿದ್ರು. ಹೌದು ದೇವೇಗೌಡ್ರು ಲಾಟರಿ ಪ್ರಧಾನ ಮಂತ್ರಿಯೇ. ದೇವೇಗೌಡರು 300 ಸಂಸದರನ್ನು ಗೆಲ್ಲಿಸಿ ಪ್ರಧಾನಿ ಆಗ್ಲಿಲ್ಲ. ದೇವರ ದಯೆ ಪ್ರಧಾನಿ ಆದ್ರು, ಪ್ರಧಾನಿ ಆಗಲು ಅರ್ಜಿ ಹಿಡ್ಕೊಂಡು ಹೋಗಿರ್ಲಿಲ್ಲ. ನಾನು ಲಾಟ್ರಿ ಸಿಎಂ ಆಗಿದ್ದರೂ ರಾಜ್ಯದ ಜನರ ಹಣ ಲೂಟಿ ಮಾಡಿಲ್ಲ ಎಂದರು.
ಇದು ಯಡಿಯೂರಪ್ಪ ಕಟ್ಟಿದ ಬಿಜೆಪಿ ಅಲ್ಲ. ಇದು ದೆಹಲಿಯಿಂದ ನಡೆಯುತ್ತಿರುವ ಬಿಜೆಪಿ. ಗೂಳಿಹಟ್ಟಿ ಶೇಖರ್ ಟೆಂಡರ್ ಗೋಲ್ ಮಾಲ್ ಆರೋಪ ಮಾಡಿದ್ದರು. ನಿಮ್ಮ ಶಾಸಕರನ್ನೇ ನಿಯಂತ್ರಣಕ್ಕೆ ಇಡಲು ನಿಮಗೆ ಸಾಧ್ಯವಾಗುತ್ತಿಲ್ಲ. ನಮ್ಮ ಪಕ್ಷದ ಬಗ್ಗೆ ಲಘುವಾಗಿ ಮಾತನಾಡಬೇಡಿ. ಗೆದ್ದ ಎತ್ತು ಹಿಂದೆ ಹೋಗುತ್ತೀರಿ ಅಂತೀರಾ. ಹೌದು ನಾವು ಗೆದ್ದೆತ್ತು ಹಿಂದೆ ಹೋಗುತ್ತೇವೆ. ಆದರೆ ನೀವು ಸೋತ ಎತ್ತು ಹಿಂದೆ ಹೋಗುತ್ತೀರಲ್ಲ ಎಂದು ವಾಗ್ದಾಳಿ ನಡೆಸಿದರು.
ಇದನ್ನೂ ಓದಿ: ನವಗ್ರಹ ಪೂಜೆ ಮಾಡಿ ವಿಧಾನಸೌಧಕ್ಕೆ ಹಿಡಿದಿರುವ ಗ್ರಹಣ ಹೋಗಲಾಡಿಸುತ್ತೇವೆ: ಸಿ.ಎಂ.ಇಬ್ರಾಹಿಂ