ಬೆಂಗಳೂರು: ಬಿಬಿಎಂಪಿ ಸ್ಥಾಯಿ ಸಮಿತಿ ಚುನಾವಣೆ ಮುಂದೂಡಲಾಗಿದ್ದು, ಪೇಜಾವರ ಶ್ರೀಗಳ ನಿಧನದ ಹಿನ್ನೆಲೆಯಾಗಿ ಚುನಾವಣೆ ಮುಂದೂಡಲಾಗಿದೆ ಎಂದು ಬಿಬಿಎಂಪಿ ಆಡಳಿತ ಪಕ್ಷದ ನಾಯಕ ಮುನೀಂದ್ರ ಕುಮಾರ್ ತಿಳಿಸಿದ್ದಾರೆ.
ಈ ಕುರಿತು ಮಾತನಾಡಿದ ಅವರು, ಪೇಜಾವರ ಶ್ರೀಗಳ ಅಗಲಿಕೆ ಹಿನ್ನೆಲೆಯಲ್ಲಿ, ಯಾವ ಸದಸ್ಯರು ಭಾಗವಹಿಸಲಿಲ್ಲ. ಮೂರು ದಿನ ಶೋಕಾಚರಣೆ ಇರುವುದರಿಂದ ಚುನಾವಣೆಯಲ್ಲಿ ಭಾಗವಹಿಸಿ ಸಂಭ್ರಮಿಸುವುದು ಯೋಗ್ಯವಲ್ಲ. ಆದ್ದರಿಂದ ಸದಸ್ಯರುಗಳೇ ಚುನಾಣೆಯಿಂದ ಹಿಂದೆ ಸರಿದಿದ್ದಾರೆ ಎಂದು ತಿಳಿಸಿದರು.
ಇನ್ನು ವಿಪಕ್ಷ ನಾಯಕ ಅಬ್ದುಲ್ ವಾಜಿದ್ ಮಾತನಾಡಿ, ನಾವು ಚುನಾವಣೆಗೆ ಸಿದ್ಧವಾಗಿದ್ದೆವು. ಎಲ್ಲೋ ಒಂದು ಕಡೆ ಬಿಜೆಪಿ ಪಕ್ಷದಲ್ಲಿ ಸಾಕಷ್ಟು ಭಿನ್ನಾಭಿಪ್ರಾಯ, ಒಳಜಗಳ ಇತ್ತು. ಹಾಗಾಗಿ ಚುನಾವಣೆ ಮುಂದೂಡಿಕೆ ಮಾಡಿದ್ದಾರೆ ಎಂದರು. ಎಲ್ಲಾ ಸದಸ್ಯರು ಬಾರದ ಕಾರಣ ಚುನಾವಣೆ ಮುಂದೂಡುಕೆಯಾಗ್ತಿದೆ. ಇದು ಆಡಳಿತ ಪಕ್ಷದ ವೈಫಲ್ಯ. ಜನರ ತೆರಿಗೆ ಹಣ ಆರೇಳು ₹ ಲಕ್ಷ ರೂಪಾಯಿ ವ್ಯರ್ಥವಾಗಿದೆ. ಇದರ ಹೊಣೆ ಸರ್ಕಾರ ಹೊರಬೇಕು ಎಂದರು. ಎಲ್ಲಾ ಸ್ಥಾಯಿ ಸಮಿತಿಗಳ ಸಾಕಷ್ಟು ಯೋಜನೆಗಳು ,ಕಡತಗಳು ಹಾಗೇ ಬಾಕಿ ಉಳಿದಿವೆ ಎಂದು ಆರೋಪಿಸಿದರು.
ನಾಮಪತ್ರ ಸಲ್ಲಿಕೆ ಅವಧಿ ಮುಕ್ತಾಯ
ಬೆಳಗ್ಗೆ 8 ರಿಂದ 9.30 ರ ವರೆಗೆ ನಾಮಪತ್ರ ಸಲ್ಲಿಕೆಗೆ ಅವಧಿಯಾಗಿತ್ತು. ಹಾಗೂ 11.30ಕ್ಕೆ ಚುನಾವಣೆ ನಿಗದಿಯಾಗಿದೆ. ಆದರೆ ಅವಧಿ ಮುಕ್ತಾಯವಾದ್ರೂ ಒಂದೇ ಒಂದು ನಾಮಪತ್ರ ಸಲ್ಲಿಕೆಯಾಗಿಲ್ಲ. ಆಡಳಿತ ಪಕ್ಷದ ಆಂತರಿಕ ಕಿತ್ತಾಟದಿಂದ ಚುನಾವಣೆಗೆ ಯಾವುದೇ ಸದಸ್ಯರು ಭಾಗವಹಿಸಲಿಲ್ಲ ಎಂದು ಹೇಳಲಾಗುತ್ತಿದೆ. ಇನ್ನೊಂದೆಡೆ ಕಾಂಗ್ರೆಸ್- ಜೆಡಿಎಸ್‌ನ ಉಚ್ಛಾಟಿತ ಸದಸ್ಯರು ಅಧ್ಯಕ್ಷ ಸ್ಥಾನಕ್ಕೆ ಬೇಡಿಕೆ ಇಟ್ಟ ಹಿನ್ನೆಲೆ, ಬಿಜೆಪಿ ನಾಯಕರಲ್ಲಿ ಒಮ್ಮತ ಮೂಡಿಲ್ಲ. ಇಂದು ಚುನಾವಣೆ ದಿನಾಂಕ ಫಿಕ್ಸ್ ಆಗಿದ್ರು, ಸಮಿತಿ ಸದಸ್ಯರನ್ನು ಬಿಜೆಪಿ ಆಯ್ಕೆ ಮಾಡಿಲ್ಲ.