ಬೆಂಗಳೂರು: ವಸಿಷ್ಠ ಕೋ-ಆಪರೇಟಿವ್ ಸೊಸೈಟಿ ಪ್ರಕರಣ ಸಿಐಡಿಗೆ ಹಸ್ತಾಂತರವಾಗುವ ಸಾಧ್ಯತೆ ಹೆಚ್ಚಾಗಿದ್ದು, ಪ್ರಕರಣ ರಾಜ್ಯ ತನಿಖಾ ಸಂಸ್ಥೆ ಸಿಐಡಿಗೆ ವರ್ಗಾಯಿಸುವಂತೆ ಹನುಮಂತನಗರ ಠಾಣಾಧಿಕಾರಿ ಡಿಸಿಪಿಗೆ ಪತ್ರ ಬರೆದಿದ್ದಾರೆ. ದಿನೇ ದಿನೇ ದೂರುದಾರರ ಸಂಖ್ಯೆ ಹೆಚ್ಚುತ್ತಿದ್ದು, ಈಗಾಗಲೇ 70ಕ್ಕೂ ಹೆಚ್ಚು ಹೂಡಿಕೆದಾರರಿಂದ ಕೇಸ್ ದಾಖಲಾಗಿದೆ ಎಂದು ಪತ್ರದಲ್ಲಿ ತಿಳಿಸಿದ್ದಾರೆ ಎನ್ನಲಾಗ್ತಿದೆ.
ಈ ಮಧ್ಯೆ ಸೊಸೈಟಿ ಅಧ್ಯಕ್ಷ ವೆಂಕಟ ನಾರಾಯಣ ಹಾಗೂ ಕೃಷ್ಣಪ್ರಸಾದ್ ಅವರ ನಿರೀಕ್ಷಣಾ ಜಾಮೀನು ಅರ್ಜಿ ತಿರಸ್ಕಾರವಾಗಿತ್ತು. ಹನುಮಂತನಗರ ಪೊಲೀಸರಿಂದ ಎರಡು ದಿನ ವಿಚಾರಣೆ ನಡೆದಿದ್ದು, ವಿಚಾರಣೆಯಲ್ಲಿ ತನಿಖಾಧಿಕಾರಿಗಳ ಮುಂದೆ ಹಣ ದುರ್ಬಳಕೆ ಮಾಡಿಲ್ಲ ಎಂದು ಸಮಜಾಯಿಷಿ ನೀಡಿದ್ದಾರೆ ಎಂದು ತಿಳಿದು ಬಂದಿದೆ. 289 ಕೋಟಿ ರೂ. ಬ್ಯಾಂಕ್ನಲ್ಲಿ ಹೂಡಿಕೆ ಮಾಡಲಾಗಿದೆ. ಅದರಲ್ಲಿ 254 ಕೋಟಿ ಸಾಲವನ್ನು ನೀಡಲಾಗಿದೆ. 3,899 ಮಂದಿಯಿಂದ ಹಣ ಹೂಡಿಕೆ ಮಾಡಲಾಗಿದೆ ಎಂದು ತಿಳಿಸಿದ್ದಾರೆ ಎನ್ನಲಾಗ್ತಿದೆ.
ನಾಳೆ ವಿಭಾಗದ ಡಿಸಿಪಿ, ಪೊಲೀಸ್ ಕಮಿಷನರ್ ಮೂಲಕ ಸಿಐಡಿಗೆ ಪ್ರಕರಣ ಹಸ್ತಾಂತರಿಸುವಂತೆ ಪತ್ರ ರವಾನೆಯಾಗುವ ಸಾಧ್ಯತೆ ಇದೆ. ಈಗಾಗಲೇ ಆರೋಪಿಗಳ ಪಾಸ್ಪೋರ್ಟ್ ವಶಕ್ಕೆ ಪಡೆದಿದ್ದು, ಬೆಂಗಳೂರು ಬಿಟ್ಟು ತೆರಳದಂತೆ ಸೂಚನೆ ನೀಡಲಾಗಿದೆ. ರಿಜಿಸ್ಟರ್ ಆಫ್ ಕೋ-ಅಪರೇಟಿವ್ ಸೊಸೈಟಿಯಿಂದಲೂ ಬ್ಯಾಂಕ್ ಬಗ್ಗೆ ಮಾಹಿತಿ ಪೊಲೀಸರು ಪಡೆದಿದ್ದಾರೆ.