ಬೆಂಗಳೂರು: ಕೊರೊನಾ ಸೋಂಕಿಗೆ ಒಳಗಾಗಿರುವ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ನಿವಾಸದ ಎಲ್ಲಾ ಸಿಬ್ಬಂದಿ ವರದಿ ನೆಗೆಟಿವ್ ಬಂದಿದೆ. ಜ್ವರದಿಂದ ಬಳಲುತ್ತಿದ್ದ ಸಿದ್ದರಾಮಯ್ಯ ನಿನ್ನೆ ತಡರಾತ್ರಿ ಪತ್ನಿ ಜೊತೆ ತೆರಳಿ ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಗೆ ದಾಖಲಾಗಿದ್ದರು.
ಈ ಸಂದರ್ಭ ಅವರಿಗೆ ಕೋವಿಡ್-19 ತಪಾಸಣೆ ನಡೆಸಲಾಗಿತ್ತು. ಇಂದು ಬೆಳಗ್ಗೆ ವರದಿ ಬಂದಿದ್ದು, ಅವರು ಸೋಂಕಿಗೆ ಗುರಿಯಾಗಿರುವುದು ದೃಢವಾಗಿತ್ತು. ಈ ಹಿನ್ನೆಲೆ ಇವರ ಮನೆಗೆಲಸದವರಿಗೆ ತಪಾಸಣೆ ನಡೆಸಲಾಗಿದ್ದು, ಎಲ್ಲರ ವರದಿ ನೆಗೆಟಿವ್ ಬಂದಿದೆ.
ಸಿದ್ದರಾಮಯ್ಯ ನಿವಾಸದಲ್ಲಿ ಕಾರ್ಯನಿರ್ವಹಿಸುತ್ತಿದ್ದ 21 ಸಿಬ್ಬಂದಿಗೂ ಬಿಬಿಎಂಪಿ, ಆರೋಗ್ಯ ಸಿಬ್ಬಂದಿ ಮೂಲಕ ಆ್ಯಂಟಿಜೆನ್ ಟೆಸ್ಟ್ ನಡೆಸಲಾಗಿತ್ತು. ಎಲ್ಲರ ವರದಿಯು ಇದೀಗ ನೆಗೆಟಿವ್ ಬಂದಿದ್ದು, ಆತಂಕ ನಿವಾರಣೆ ಆಗಿದೆ.
ಭಾನುವಾರ ರಾತ್ರಿ ಕೋವಿಡ್ ಪಾಸಿಟಿವ್ ಬಂದ ಹಿನ್ನೆಲೆ ಆಸ್ಪತ್ರೆಗೆ ದಾಖಲಾಗಿದ್ದ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ನಿವಾಸದ 11 ಸಿಬ್ಬಂದಿಯಲ್ಲಿ ಕೊರೊನಾ ಪಾಸಿಟಿವ್ ಬಂದಿತ್ತು. ಈ ಹಿನ್ನೆಲೆ ಸಿದ್ದರಾಮಯ್ಯ ನಿವಾಸದ ಸಿಬ್ಬಂದಿ ಕೂಡ ಸಾಕಷ್ಟು ಆತಂಕಕ್ಕೆ ಒಳಗಾಗಿದ್ದರು. ಇದೀಗ ಎಲ್ಲಾ 21 ಸಿಬ್ಬಂದಿ ತಪಾಸಣೆಯ ವರದಿ ನೆಗೆಟಿವ್ ಬಂದಿದ್ದು ಎಲ್ಲರೂ ನಿರಾಳರಾಗಿದ್ದಾರೆ.