ಹೈದರಾಬಾದ್ : ಪ್ಲ್ಯಾಸ್ಟಿಕ್ ಕವರ್ಗಳ ಮಾರಾಟದ ಮೇಲೆ ಹದ್ದಿನ ಕಣ್ಣಿಟ್ಟಿದ್ದ ಬಿಬಿಎಂಪಿ ಇನ್ನುಮುಂದೆ ಬಟ್ಟೆ ಬ್ಯಾಗ್ನಂತೆ ಕಾಣುವ ಅರೆ ಪ್ಲಾಸ್ಟಿಕ್ ಬ್ಯಾಗ್ಗಳನ್ನೂ ನಿಷೇಧಿಸಲಿದೆ.
ಪಾಲಿ ಪ್ರೋಪಿಲಿನ್ ಎಂದು ಕರೆಯುವ ಬ್ಯಾಗ್ಗಳನ್ನು ಅಂಗಡಿ, ಮಾಲ್ ಹಾಗೂ ಮದುವೆ ಮನೆಗಳಲ್ಲಿ ತಾಂಬೂಲ ನೀಡಲೂ ಬಳಕೆ ಮಾಡಲಾಗುತ್ತದೆ. ಈ ಬ್ಯಾಗ್ಗಳು ಮಣ್ಣಿನಲ್ಲಿ ಕರಗುವುದಿಲ್ಲ, ಇದು ಬಟ್ಟೆ ಬ್ಯಾಗ್ ಎಂದು ನಂಬಿ ಮೋಸಹೋಗಬೇಡಿ ಎಂದು ಟ್ವಿಟರ್ ಬಳಕೆದಾರರೊಬ್ಬರು ಪೋಸ್ಟ್ ಮಾಡಿದ್ದರು ಇದನ್ನು ಗಂಭೀರವಾಗಿ ಪರಿಗಣಿಸಿರುವ ಬಿಬಿಎಂಪಿ ಘನ ತ್ಯಾಜ್ಯ ವಿಭಾಗದ ಆಯುಕ್ತ ಡಿ. ರಂದೀಪ್ ಅವರು ಪಾಲಿ ಪ್ರೋಪಿಲಿನ್ ಬ್ಯಾಗ್ಗಳ ಮಾರಾಟವನ್ನೂ ನಿಷೇಧಿಸುವುದಾಗಿ ಹೇಳಿದ್ದಾರೆ.
ಸಿದ್ಧಾರ್ಥ್ ನಾಯಕ್ ಎನ್ನುವವರು ಟ್ವೀಟ್ ಮಾಡಿ ದಯವಿಟ್ಟು ಯಾರೂ ಮೋಸ ಹೋಗಬೇಡಿ. ಪಾಲಿ ಪ್ರೋಪಿಲಿನ್ ಬ್ಯಾಗ್ಗಳನ್ನು ಪಾಲಿಥಿನ್ ಹ್ಯಾಂಡ್ ಕವರ್ಗೆ ಪರ್ಯಾಯ ಎಂದು ನಂಬಿಸಲಾಗುತ್ತಿದೆ. ಅಲ್ಲದೇ ಇದು ಪರಿಸರ ಸ್ನೇಹಿ ಬ್ಯಾಗ್ ಎಂದೂ ಮಂಕುಬೂದಿ ಎರಚಲಾಗುತ್ತಿದೆ. ಇದು ಶುದ್ಧ ಸುಳ್ಳು. ಇದನ್ನು ನಂಬಿ ಮೋಸಹೋಗಬೇಡಿ. ಪಾಲಿ ಪ್ರೋಪಿಲಿನ್ ಬ್ಯಾಗ್ಗಳು ಮಣ್ಣಿನಲ್ಲಿ ಕರಗುವುದಿಲ್ಲ. ಹಾಗಾಗಿ ಇದೂ ಕೂಡ ಪರಿಸರಕ್ಕೆ ಹಾನಿಕಾರಕ ಎಂದು ಹೇಳಿದ್ದರು.
ರಂದೀಪ್ ಹೇಳಿದ್ದೇನು?
ನಾನ್ ವೋವೆನ್ ಪಾಲಿಪ್ರೋಪಿಲಿನ್ ಬ್ಯಾಗ್ಗಳು ಪ್ಲಾಸ್ಟಿಕ್-ಬಟ್ಟೆ ಎರಡೂ ಅಲ್ಲ. ಅದು ಪ್ಲಾಸ್ಟಿಕ್ಗೆ ಪರ್ಯಾಯವಲ್ಲ. ಎರಡೂ ಕೂಡ ಬ್ಯಾನ್ ಆಗಿರುವ ಪಾಲಿಥಿನ್ ಪ್ಲಾಸ್ಟಿಕ್ ಬ್ಯಾಗ್ಗಳಿಗೆ ಸಮವಾಗಿರುವುದರಿಂದ ಅವುಗಳ ಮಾರಾಟಗಾರರಿಗೆ ದಂಡ ವಿಧಿಸಲಾಗುವುದು.
ಏನಿದು ಪಾಲಿ ಪ್ರೋಪಿಲಿನ್?
ಪಾಲಿಪ್ರೋಪಿಲಿನ್ನಲ್ಲಿ ವೋವೆನ್ ಹಾಗೂ ನಾನ್ ವೋವೆನ್ ಎಂಬ ಎರಡು ಬಗೆಗಳಿವೆ. ಎರಡನ್ನೂ ಕೂಡ ರೀಸೈಕಲ್ ಮಾಡಿದ ಪ್ಲಾಸ್ಟಿಕ್ನಿಂದ ಮಾಡಲಾಗುತ್ತದೆ. ಪಾಲಿಮರ್ ಮತ್ತು ಪ್ಲಾಸ್ಟಿಕ್ನ ಸಂಯೋಜನೆಯಿಂದಾಗಿ ಇದರ ಮೆಟೀರಿಯಲ್ ತಯಾರಾಗುತ್ತದೆ.
ಎಲ್ಲಿ ಬಳಕೆ ಆಗುತ್ತದೆ?
ನಾನ್ ವೋವೆನ್ ಪಾಲಿ ಪ್ರೋಪಿಲಿನ್ ಎಂದು ಕರೆಯುವ ಈ ಮೆಟೀರಿಯಲ್ಅನ್ನು ಟೀಬ್ಯಾಗ್ಗಳು, ಫೇಸ್ ಟಿಶ್ಯೂ, ಬಟ್ಟೆಗಳ ಪ್ಯಾಕೇಜಿಂಗ್ನಲ್ಲಿ ಇದು ಮಹತ್ವದ ಪಾತ್ರ ವಹಿಸುತ್ತದೆ. ಮಾರುಕಟ್ಟೆ ಪ್ರದೇಶಗಳಲ್ಲಿ ಇದು 2ರಿಂದ 5 ರೂಪಾಯಿವರೆಗೂ ಮಾರಾಟವಾಗುತ್ತದೆ. ಮದುವೆಮನೆಗಳಲ್ಲಿ ತಾಂಬೂಲ ನೀಡಲು ಈ ಕವರ್ ಬಳಸುತ್ತಾರೆ.
ಮೊದಲು ತಯಾರಾಗಿದ್ದು ಯಾವಾಗ?
1951ರಲ್ಲಿ ಪೆಟ್ರೋಲಿಯಂ ವಿಜ್ಞಾನಿ ಪೌಲ್ ಹೊಗನ್ ಮತ್ತು ರಾಬರ್ಟ್ ಬ್ಯಾಂಕ್ಸ್ ಅವರು ಈ ಉತ್ಪನ್ನವನ್ನು ಕಂಡುಹಿಡಿದರು. ಪ್ಲಾಸ್ಟಿಕ್ ಹಾಗೂ ಪಾಲಿಮರ್ಅನ್ನು ಬಳಸಿ ಪ್ಲಾಸ್ಟಿಕ್ಅನ್ನು ಮೃದುವಾಗಿಸಿ ಬಟ್ಟೆಯಂತೆ ಮಾಡುವುದು ಇದರ ಪ್ರಕ್ರಿಯೆ. ಈ ಉತ್ಪನ್ನ ಬಹು ಬೇಗನೆ ಬೇಡಿಕೆ ಪಡೆದುಕೊಂಡಿತು. ಪರಿಣಾಮವಾಗಿ ಇಬ್ಬರೂ ವಿಜ್ಞಾನಿಗಳು ದಿಢೀರ್ ಶ್ರೀಮಂತರಾದರು.
ಮಾರಾಟ ಮಾಡುವವರು ಯಾರು?
ಪಾಲಿ ಪ್ರೋಪಿಲಿನ್ ಬ್ಯಾಗ್ಗಳನ್ನು ಸಾಮಾನ್ಯವಾಗಿ ಮಾರುಕಟ್ಟೆಗಳಲ್ಲಿ ಮಾರಾಟಮಾಡುತ್ತಾರೆ. ಫ್ಲಿಪ್ಕಾರ್ಟ್, ಅಮೇಜಾನ್ ನಂತರ ಆನ್ಲೈನ್ ಮಾರುಕಟ್ಟೆ ತಾಣಗಳಲ್ಲೂ ಕೂಡ ಈ ಬ್ಯಾಗ್ಗಳು ಲಭ್ಯವಾಗುತ್ತವೆ. ಪ್ಲಾಸ್ಟಿಕ್ಗಿಂತ ಹೆಚ್ಚು ತೂಕ ತಡೆಯುವ ಈ ಬ್ಯಾಗ್ಗಳು ಪರಿಸರ ಸ್ನೇಹಿ ಎಂದು ಹೇಳಲಾಗುತ್ತಿತ್ತು.