ಬೆಂಗಳೂರು: ಮೀಸಲಾತಿ ವಿಚಾರದಲ್ಲಿ ರಾಜಕೀಯ ಮಾಡುತ್ತಿದ್ದಾರೆ. ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡರು ಎಸ್ಟಿ ಸಮುದಾಯದವರಿಗೆ ಕೊಟ್ಟಿರುವ ಮೀಸಲಾತಿ ಬಗ್ಗೆ ಸಾರ್ವಜನಿಕ ವೇದಿಕೆಯಲ್ಲಿ ಚರ್ಚೆ ಮಾಡಲು ನಾನು ಸಿದ್ಧ ಎಂದು ಹೆಚ್ ಡಿ ಕುಮಾರಸ್ವಾಮಿ ಹೇಳಿದ್ದಾರೆ.
ಸ್ವತಂತ್ರ್ಯವಾಗಿ ಅಧಿಕಾರಕ್ಕೆ ಬರುತ್ತೇವೆ: ಪಕ್ಷದ ಕಚೇರಿ ಜೆಪಿ ಭವನದಲ್ಲಿ ಇಂದು ನಡೆದ ರಾಷ್ಟ್ರೀಯ ಕಾರ್ಯಕಾರಣಿ ಸಮಿತಿ ಹಾಗೂ ರಾಷ್ಟ್ರೀಯ ಪರಿಷತ್ ಸಭೆಯಲ್ಲಿ ಅವರು ಮಾತನಾಡಿದರು. ಜೆಡಿಎಸ್ಗೆ 20ರಿಂದ 25 ಸೀಟ್ ಬರುತ್ತವೆ ಎಂದು ಹೇಳುತ್ತಿದ್ದಾರೆ. ಆದರೆ ಅದನ್ನು ಬಿಟ್ಟುಬಿಡಿ. ನನ್ನ ಜೊತೆ ನೀವೂ ಕೈ ಜೋಡಿಸಿ ಜನರ ಮುಂದೆ ನಮ್ಮ ಯೋಜನೆ ಬಗ್ಗೆ ತಿಳಿಸಿ. ನೀವು ಎಷ್ಟು ಜನರ ಮುಂದೆ ಹೋಗುತ್ತೀರೋ ಅಷ್ಟು ನಮ್ಮ ಪಕ್ಷಕ್ಕೆ ಒಳ್ಳೆಯ ಫಲಿತಾಂಶ ಬರುತ್ತದೆ. ರಾಷ್ಟ್ರೀಯ ಪಕ್ಷಗಳ ಪೂರ್ವ ಸಮೀಕ್ಷೆಯಲ್ಲಿ ನಮ್ಮ ಪಕ್ಷ ಅಧಿಕಾರಕ್ಕೆ ಬರಲಿದೆ ಎಂದಿದೆ. ಈ ರಾಜ್ಯದಲ್ಲಿ ಸ್ವತಂತ್ರ್ಯವಾಗಿ ಅಧಿಕಾರಕ್ಕೆ ಬರುತ್ತೇವೆ ಎಂದು ಕಾರ್ಯಕರ್ತರಿಗೆ ಮತ್ತು ಮುಖಂಡರಿಗೆ ಸಲಹೆ ನೀಡಿದರು.
ಪಂಚರತ್ನ ರಥಯಾತ್ರೆ: ಜನರ ಬದುಕು ಕಟ್ಟಿಕೊಳ್ಳಲು ಪಂಚರತ್ನ ಎಂಬ 5 ಯೋಜನೆ ಕಾರ್ಯಕ್ರಮ ಹಾಕಿಕೊಳ್ಳಲಾಗಿದೆ. ರಥಯಾತ್ರೆಗೆ ನವೆಂಬರ್ 1ರಂದು ಚಾಲನೆ ನೀಡುತ್ತಿದ್ದೇವೆ. ನಿನ್ನೆ ಸಾಂಕೇತಿಕವಾಗಿಚಾಲನೆ ನೀಡಿದ್ದೇವೆ. ನವೆಂಬರ್ 1 ರಿಂದ 35 ತಾಲೂಕಿನಲ್ಲಿ 35 ದಿನ ರಥಯಾತ್ರೆ ಮಾಡುತ್ತೇವೆ. ಮುಳಬಾಗಿಲಿನಲ್ಲಿ ಗಣಪತಿ ಮತ್ತು ಆಂಜನೇಯ ದೇವಸ್ಥಾನದಲ್ಲಿ ಪೂಜೆ ಮಾಡಿ ಕಾರ್ಯಕ್ರಮಕ್ಕೆ ಚಾಲನೆ ನೀಡುತ್ತೇವೆ. ಪ್ರತಿ ಹಳ್ಳಿ ಹಳ್ಳಿಗೂ ಕಾರ್ಯಕರ್ತರು ಭೇಟಿ ನೀಡಿ ಕಾರ್ಯಕ್ರಮದ ಬಗ್ಗೆ ತಿಳಿಸಬೇಕು ಎಂದು ಕರೆ ನೀಡಿದರು.
ಇದನ್ನೂ ಓದಿ: ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷರಾಗಿ ಮಾಜಿ ಪ್ರಧಾನಿ ದೇವೇಗೌಡ ಮರು ಆಯ್ಕೆ
ಪಂಚರತ್ನ ಯೋಜನೆಯಲ್ಲಿ ವೃದ್ಧರಿಗೆ 5 ಸಾವಿರ ಮಾಸಾಶನ, ವಿಧವೆಯರಿಗೆ 2,500 ಸಾವಿರ ರೂ ಜಾರಿಗೆ ತರುವ ಕಾರ್ಯಕ್ರಮ ರೂಪಿಸಲಾಗಿದೆ. ಇದನ್ನು ಜನರಿಗೆ ತಿಳಿಸಿ ಎಂದು ಕಾರ್ಯಕರ್ತರಿಗೆ ತಿಳಿಸಿದರು. ಕೃಷ್ಣ ಮತ್ತು ಮಹಾದಾಯಿ ಯೋಜನೆಯನ್ನು ಜಾರಿಗೆ ತರುತ್ತೇವೆ ಎಂದು ಕಾಂಗ್ರೆಸ್ ಪಾದಯಾತ್ರೆ ಮಾಡಲು ಹೊರಟಿದೆ. ಐದು ವರ್ಷ ಸರ್ಕಾರ ನಡೆಸಿದ ಕಾಂಗ್ರೆಸ್ ಸರ್ಕಾರ ಏನು ಮಾಡಿದೆ ಎಂದು ಪ್ರಶ್ನಿಸಿದರು.