ಬಾಗಲಕೋಟೆ: ರಾಜ್ಯದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿರುವ ಮಧ್ಯೆಯು ವಿನಾ ಕಾರಣ ರಾಜಕಾರಣ ಮಾಡುವುದು ಸರಿಯಲ್ಲ ಎಂದು ಉಪ ಮುಖ್ಯಮಂತ್ರಿ ಗೋವಿಂದ ಕಾರಜೋಳ, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯಗೆ ತಿರುಗೇಟು ನೀಡಿದ್ದಾರೆ.
ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಬಾಗಲಕೋಟೆ ನಗರದ ಹೊಸ ಪರಿವೀಕ್ಷಣಾ ಮಂದಿರದಲ್ಲಿ ಮಾತನಾಡುತ್ತಾ ಕೊರೊನಾ ತಡೆಯಲು ಸರ್ಕಾರ ವಿಫಲವಾಗಿದ್ದು, ಈ ಕುರಿತು ಶ್ವೇತ ಪತ್ರ ಹೂರಡಿಸಬೇಕು ಎಂದು ಆಗ್ರಹಿಸಿದ್ದರು. ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಕಾರಜೋಳ, ಇಂತಹ ಸಂದರ್ಭದಲ್ಲೂ ರಾಜಕಾರಣ ಮಾಡುವ ಬದಲು ಕೊರೊನಾ ಹತೋಟಿಗೆ ತರುವ ಬಗ್ಗೆ ಸಲಹೆಗಳನ್ನು ನೀಡುವ ಪ್ರಯತ್ನ ಮಾಡಬೇಕು. ಅದು ಬಿಟ್ಟು ವಿನಾ ಕಾರಣ ಆರೋಪ ಮಾಡುವುದು ಸರಿಯಲ್ಲ ಎಂದರು.
ಬಾಗಲಕೋಟೆ ಜಿಲ್ಲೆಯಲ್ಲಿ ನಾಳೆಯಿಂದ ಸಂಜೆ 6 ಗಂಟೆಯಿಂದ ಬೆಳಗ್ಗೆ 6 ಗಂಟೆಯವರೆಗೆ ಕರ್ಫ್ಯೂ ಜಾರಿಯಲ್ಲಿ ಇರಲಿದೆ. ಮಾರುಕಟ್ಟೆಗಳಲ್ಲಿ ಸಾಮಾಜಿಕ ಅಂತರ ಕಾಯ್ದುಕೊಂಡು ಮಾಸ್ಕ್ ಕಡ್ಡಾಯ ಧರಿಸಿ ವ್ಯಾಪಾರ ವಹಿವಾಟು ಮಾಡಬೇಕಾಗಿದೆ. ಈ ಬಗ್ಗೆ ಜಾಗೃತಿ ಮೂಡಿಸಲು ಹಾಗೇ ತಪ್ಪಿದಲ್ಲಿ ತನಿಖೆ ನಡೆಸಲು ಅಧಿಕಾರಿಗಳ ತಂಡ ನಿಯೋಜನೆ ಮಾಡಲಾಗಿದೆ. ಯಾರಾದರೂ ನಿಯಮ ಉಲ್ಲಂಘಿಸಿದರೆ ಅವರ ಮೇಲೆ ಕ್ರಮ ಜರುಗಿಸಲಾಗುತ್ತದೆ ಎಂದರು.