ಬೆಂಗಳೂರು: ನಿಜವಾದ ಅಡುಗೆ ಅನಿಲ ಬಳಕೆದಾರರು ಯಾರೂ ಬೀದಿಗೆ ಬಂದಿಲ್ಲ. ರಾಜಕಾರಣಿಗಳು ಪ್ರತಿಭಟನೆ ಎಂದು ಬೀದಿಗೆ ಬಂದಿದ್ದಾರೆ. ಪ್ರತಿಪಕ್ಷಗಳಿಂದ ಡ್ರಾಮಾ ನಡೆಯುತ್ತಿದೆ ಎಂದು ಕ್ರೀಡಾ ಸಚಿವ ನಾರಾಯಣ ಗೌಡ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದರು.
ಇಂದು ಬಿಜೆಪಿ ಕಚೇರಿಗೆ ಸಚಿವರು ಭೇಟಿ ನೀಡಿ ಕಾರ್ಯಕರ್ತರಿಂದ ಅಹವಾಲು ಸ್ವೀಕರಿಸಿದರು. ಬಳಿಕ ಸುದ್ದಿಗಾರರೊಂದಿಗೆ ಮಾತನಾಡುತ್ತಾ, ಅಗತ್ಯ ವಸ್ತುಗಳ ಬೆಲೆ ಏರಿಕೆ ವಿಚಾರ ತೀವ್ರ ಚರ್ಚೆಯಾಗುತ್ತಿದೆ. ಇಂಧನ ಮತ್ತು ಗ್ಯಾಸ್ ಬೆಲೆ ಏಕೆ ಹೆಚ್ಚಾಗಿದೆ ಎಂದು ಎಲ್ಲರಿಗೂ ಗೊತ್ತಿದೆ. ಆದರೆ ಇಲ್ಲಿ ರಾಜಕಾರಣ ಮಾಡಲಾಗುತ್ತಿದೆ. ನಿಜವಾದ ಗ್ಯಾಸ್ ಬಳಕೆದಾರರು ಯಾರೂ ಬೀದಿಗೆ ಬಂದಿಲ್ಲ. ಬೀದಿಗೆ ಬಂದಿರುವವರು ರಾಜಕಾರಣಿಗಳು ಮಾತ್ರ. ನಿಜವಾದ ಸಮಸ್ಯೆ ಯಾರಿಗೂ ಆಗಿಲ್ಲ, ಇದು ರಾಜಕಾರಣದ ಪಿತೂರಿ ಎಂದು ಆರೋಪಿಸಿದರು.
ಕಾಂಗ್ರೆಸ್ ಸರ್ಕಾರ ಇರುವಾಗ ಬೆಲೆ ಏರಿಕೆ ಆಗಿರಲಿಲ್ಲವಾ?, ಬೆಲೆಯಲ್ಲಿ ಏರಿಳಿತ ಆಗುತ್ತಲೇ ಇರುತ್ತದೆ. ಮನೆ ಮನೆಗೆ ಗ್ಯಾಸ್ ಕೊಟ್ಟಿರುವವರು ಯಾರು?, ಹೆಣ್ಣು ಮಕ್ಕಳಿಗೆ ತೊಂದರೆ ಅಗಬಾರದೆಂದು ಗ್ಯಾಸ್ ಸಂಪರ್ಕ ಉಚಿತವಾಗಿ ಕೊಡಲಾಗಿದೆ. ಇಂಧನ ಬೆಲೆ ಫ್ಲೆಕ್ಸಿಬಲ್ ಇರುತ್ತದೆ. ಸಮಸ್ಯೆ ಬಗೆಹರಿಸಲು ಪ್ರಧಾನಿ ಸನ್ನದ್ಧವಾಗುತ್ತಿದ್ದಾರೆ. ಕಾಂಗ್ರೆಸ್ನವರಿಂದ ಹೇಳಿಸಿಕೊಳ್ಳಬೇಕಾಗಿಲ್ಲ. ಪ್ರತಿಭಟನೆ ಮಾಡಿಸುತ್ತಿರುವುದು ಕೇವಲ ರಾಜಕಾರಣ. ಈಗ ಆಗಿರುವ ಬೆಲೆ ಏರಿಕೆ ತಾತ್ಕಾಲಿಕ, ಅದು ಕಡಿಮೆ ಆಗುತ್ತದೆ ಎಂದರು.
ಶಾಸಕರದ್ದು, ಸಚಿವರದ್ದು ವೇತನ ಹೆಚ್ಚಳ ಆಗಿಲ್ಲ. ನಾವೂ ಕೇಳಿಲ್ಲ ಶಾಸಕರಿಗೂ ಡೀಸೆಲ್, ಪೆಟ್ರೋಲ್ ಖರ್ಚು ಇರುತ್ತದೆ ಎಂದು ಪರೋಕ್ಷವಾಗಿ ತಮಗೂ ಇಂಧನ ಬೆಲೆ ಹೆಚ್ಚಳದ ಬಿಸಿ ತಟ್ಟಿರುವುದನ್ನು ಒಪ್ಪಿಕೊಂಡರು.
ಇದನ್ನೂ ಓದಿ: ತಮಿಳುನಾಡು ಮಾದರಿಯಲ್ಲಿ ತೈಲದ ಮೇಲಿನ ಸೆಸ್ ಕಡಿತ: ಸಂಪುಟ ಸಭೆಯಲ್ಲಿ ಚರ್ಚಿಸಿ ನಿರ್ಧಾರ ಎಂದ ಬೈರತಿ ಬಸವರಾಜ್