ಬೆಂಗಳೂರು: ರಾಜ್ಯ ರಾಜಕೀಯದಲ್ಲಿನ ಕ್ಷಿಪ್ರ ಕ್ರಾಂತಿಯಿಂದ ಆಘಾತಕ್ಕೊಳಗಾಗಿರುವ ಜೆಡಿಎಸ್ ಇಂದೇ ಶಾಸಕಾಂಗ ಸಭೆ ನಡೆಸಲು ಮುಂದಾಗಿದೆ.
ಸಂಜೆ 5.40ಕ್ಕೆ ದೆಹಲಿಯಿಂದ ಸಿಎಂ ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬರಬೇಕಿತ್ತು. ಅದರಂತೆ ರಾತ್ರಿ ಸುಮಾರು ಎಂಟು ಗಂಟೆಗೆ ಬೆಂಗಳೂರಿಗೆ ಆಗಮಿಸಬೇಕಾಗಿತ್ತು. ಆದರೆ, ರಾಜಕೀಯ ಬೆಳವಣಿಗೆ ಹಿನ್ನೆಲೆಯಲ್ಲಿ ವಿಶೇಷ ವಿಮಾನದಲ್ಲಿ ಹೆಚ್ಎಎಲ್ಗೆ ಬರಲಿದ್ದಾರೆ.
ಮಧ್ಯಾಹ್ನ 3.15 ಕ್ಕೆ ಕುಮಾರಸ್ವಾಮಿ ಅವರು ಅಮೆರಿಕದಿಂದ ದೆಹಲಿಗೆ ಬರಲಿದ್ದಾರೆ. ದೆಹಲಿಯಿಂದ ವಿಶೇಷ ವಿಮಾನದಲ್ಲಿ ಹೆಚ್ಎಎಲ್ ಮೂಲಕ ಬೆಂಗಳೂರಿಗೆ ಆಗಮಿಸಿ, ಅಲ್ಲಿಂದ ನೇರವಾಗಿ ಜೆಡಿಎಸ್ ಶಾಸಕರ ಸಭೆಯಲ್ಲಿ ಪಾಲ್ಗೊಳ್ಳಲು ಜೆಪಿ ಭವನಕ್ಕೆ ಆಗಮಿಸಲಿದ್ದಾರೆ ಎನ್ನಲಾಗಿದೆ.
ಸಂಜೆ ಪಕ್ಷದ ಕಚೇರಿ ಜೆಪಿ ಭವನದಲ್ಲಿ ಜೆಡಿಎಲ್ಪಿ ಮೀಟಿಂಗ್ ನಡೆಸಲು ನಿರ್ಧರಿಸಲಾಗಿದೆ. ದೇವೇಗೌಡರ ನೇತೃತ್ವದಲ್ಲಿ ಶಾಸಕಾಂಗ ಸಭೆ ನಡೆಯಲಿದೆ. ಈ ಸಭೆಯಲ್ಲಿ ಜೆಡಿಎಸ್ ಮುಂದಿನ ನಡೆ ಬಗ್ಗೆ ನಿರ್ಧಾರವಾಗಲಿದೆ. ಪ್ರಸಕ್ತ ರಾಜಕೀಯ ವಿದ್ಯಮಾನ, ಜೆಡಿಎಸ್ನಲ್ಲಿನ ಅತೃಪ್ತಿ ಮುಂತಾದ ವಿಚಾರಗಳ ಬಗ್ಗೆ ಸಮಾಲೋಚನೆ ನಡೆಯಲಿದೆ.
ಜತೆಗೆ ಯಾವ ಯಾವ ಶಾಸಕರು ಪಕ್ಷ ತೊರೆಯುತ್ತಾರೋ ಅಂಥವರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವ ಸಾಧ್ಯತೆ ಇದೆ. ಸರ್ಕಾರ ಉಳಿಸಕೊಳ್ಳಬೇಕಾ? ರಾಜೀನಾಮೆ ನೀಡಬೇಕಾ? ಅನ್ನೋದರ ಬಗ್ಗೆ ಶಾಸಕರ ಸಮ್ಮುಖದಲ್ಲಿ ನಿರ್ಧಾರ ಕೈಗೊಳ್ಳುವ ಎಲ್ಲ ಸಾಧ್ಯತೆಗಳಿವೆ ಎಂದು ಹೇಳಲಾಗುತ್ತಿದೆ.