ಬೆಂಗಳೂರು: ನಗರದ ವಿವಿಧೆಡೆ ಮನೆಗಳ್ಳತನ ಪ್ರಕರಣಗಳಲ್ಲಿ ಭಾಗಿಯಾಗಿ ತಲೆಮರೆಸಿಕೊಂಡಿದ್ದ ಕುಖ್ಯಾತ ಮನೆಗಳ್ಳನ ಕಾಲಿಗೆ ಜಯನಗರ ಪೊಲೀಸರು ಗುಂಡು ಹಾರಿಸಿ ಬಂಧಿಸಿದ್ದಾರೆ.
ಇಸ್ಮಾಯಿಲ್ ಕಾಲಿಗೆ ಗುಂಡೇಟು ತಿಂದಿರುವ ನಟೋರಿಯಸ್. ಈತನನ್ನು ಚಿಕಿತ್ಸೆಗೆ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಆರೋಪಿ ಕಳೆದ ಒಂದು ವಾರದಲ್ಲಿ ನಾಲ್ಕು ಮನೆಗಳ್ಳತನ ಪ್ರಕರಣದಲ್ಲಿ ಭಾಗಿಯಾಗಿ ತಲೆಮರೆಸಿಕೊಂಡಿದ್ದ. ಪ್ರಕರಣ ದಾಖಲಿಸಿಕೊಂಡ ಜಯನಗರ ಪೊಲೀಸ್ ಠಾಣೆಯ ಇನ್‌ಸ್ಪೆಕ್ಟರ್ ಸುಧಾಕರ್ ಆರೋಪಿಗಾಗಿ ಪತ್ತೆ ಕಾರ್ಯ ಚುರುಕುಗೊಳಿಸಿದ್ದರು. ಇಂದು ಬೆಳಗ್ಗೆ ನಾಲ್ಕು ಗಂಟೆ ಸಮಯದಲ್ಲಿ ಜಯನಗರದ ಅಪಾರ್ಟ್ ಮೆಂಟ್ ವೊಂದರಲ್ಲಿ ಕಳ್ಳತನದಲ್ಲಿ ತೊಡಗಿಸಿಕೊಂಡಿರುವ ಮಾಹಿತಿ ಆಧಾರದ ಮೇಲೆ ಸ್ಥಳಕ್ಕೆ ತೆರಳಿ ಬಂಧಿಸಲು ಮುಂದಾಗಿದ್ದಾರೆ.
ಓದಿ : ಬಸ್ ಚಾಲಕನ ಮೇಲೆ ಹಲ್ಲೆ ಪ್ರಕರಣ: ತಪ್ಪಿಸಿಕೊಳ್ಳಲು ಯತ್ನಿಸಿದ ಆರೋಪಿಗೆ ಗುಂಡೇಟು
ಶರಣಾಗುವಂತೆ ಸೂಚಿಸಿದ್ದ ಕಾನ್ಸ್ಟೇಬಲ್ ಮೇಲೆ ರಾಡ್ನಿಂದ ಆರೋಪಿ ಹಲ್ಲೆ ಮಾಡಿದ್ದಾನೆ. ಈ ವೇಳೆ ಒಂದು ಸುತ್ತು ಗಾಳಿಯಲ್ಲಿ ಗುಂಡು ಹಾರಿಸಿ ಶರಣಾಗುವಂತೆ ಸೂಚಿಸಿದ್ದ ಪೊಲೀಸರು ವಾರ್ನ್ ಮಾಡಿದರೂ ಕೇಳದ ಆರೋಪಿ ಹಲ್ಲೆಗೆ ಮತ್ತೆ ಪ್ರಯತ್ನಿಸಿದ್ದಾನೆ. ಆತ್ಮರಕ್ಷಣೆಗಾಗಿ ಇನ್‌ಸ್ಪೆಕ್ಟರ್ ಸುಧಾಕರ್ ಆರೋಪಿ ಕಾಲಿಗೆ ಗುಂಡು ಹಾರಿಸಿ ವಶಕ್ಕೆ ಪಡೆದಿದ್ದಾರೆ.