ಬೆಂಗಳೂರು: ರಾಜಧಾನಿಯಲ್ಲಿ ಮತ್ತೆ ಗುಂಡಿನ ಸದ್ದು ಕೇಳಿ ಬಂದಿದೆ. ದರೋಡೆ ಪ್ರಕರಣದಲ್ಲಿ ಭಾಗಿಯಾಗಿ ತಲೆಮರೆಸಿಕೊಂಡು, ಆತನನ್ನು ಹಿಡಿಯಲು ಹೋದ ಪೊಲೀಸರ ಮೇಲೆ ಹಲ್ಲೆ ನಡೆಸಿದ್ದ ಆರೋಪಿ ಕಾಲಿಗೆ ಗುಂಡು ಹಾರಿಸಿ ಬ್ಯಾಡರಹಳ್ಳಿ ಪೊಲೀಸರು ಬಂಧಿಸಿದ್ದಾರೆ.
ರಾಜೇಶ್ ಅಲಿಯಾಸ್ ಲೂಸ್ ಬಂಧಿತ. ಸದ್ಯ ಪೊಲೀಸರ ಗುಂಡೇಟು ತಿಂದು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಈತನನ್ನು ಸೆರೆಹಿಡಿಯಲು ಹೋಗಿದ್ದ ಹೆಡ್ ಕಾನ್ಸ್ಟೇಬಲ್ ಶ್ರೀನಿವಾಸ್ ಮೇಲೆ ಆರೋಪಿ ಚಾಕುವಿನಿಂದ ಹಲ್ಲೆ ನಡೆಸಿದ್ದು, ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ.
![bengaluru](https://etvbharatimages.akamaized.net/etvbharat/prod-images/kn-bng-02-police-fire-script-7202806_21012021075528_2101f_1611195928_88.jpg)
ಆರೋಪಿ ರಾಜೇಶ್ ಸೇರಿ ಮೂವರು ಆರೋಪಿಗಳು ಜ.17ರಂದು ಬ್ಯಾಡರಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿರುವ ತರಕಾರಿ ಸರಬರಾಜು ಮಾಡುವ ನಿಂಜಾ ಕಾರ್ಟ್ ಕಂಪನಿಗೆ ಏಕಾಏಕಿ ನುಗ್ಗಿ ಚಾಕು ತೋರಿಸಿ ಸಿಬ್ಬಂದಿ ಬೆದರಿಸಿದ್ದರು. ಅವರ ಕೈಯಲ್ಲಿದ್ದ ಎರಡು ಮೊಬೈಲ್ ಕಸಿದುಕೊಂಡು ಒಡೆದು ಹಾಕಿದ್ದರು. ಬಳಿಕ ಹಣ ಎಗರಿಸಿದ್ದರು. ಹೋಗುವಾಗ ಸಿಸಿಟಿವಿ ಸೇರಿದಂತೆ ಇನ್ನಿತರ ಸಾಕ್ಷ್ಯ ಒದಗಿಸುವ ಉಪಕರಣ ಒಡೆದು ಹಾಕಿದ್ದರು. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡ ಇನ್ಸ್ಪೆಕ್ಟರ್ ನೇತೃತ್ವದ ತಂಡ ಆರೋಪಿಯ ಇರುವಿಕೆ ಖಚಿತ ಮಾಹಿತಿ ಮೇರೆಗೆ ಹೋಗಿ ಬಂಧಿಸಲು ಮುಂದಾಗಿದ್ದಾರೆ. ಬಂಧನಕ್ಕೆ ಪ್ರತಿರೋಧ ತೋರಿ ಆರೋಪಿಯು ಹೆಡ್ ಕಾನ್ಸ್ಟೇಬಲ್ ಮೇಲೆ ಚಾಕುವಿನಿಂದ ಹಲ್ಲೆ ನಡೆಸಿ ಪರಾರಿಯಾಗಲು ಯತ್ನಿಸಿದ್ದಾನೆ. ಈ ವೇಳೆ, ಆತ್ಮರಕ್ಷಣೆಗಾಗಿ ಸರ್ವಿಸ್ ಪಿಸ್ತೂಲ್ನಿಂದ ಆರೋಪಿ ಮೇಲೆ ಇನ್ಸ್ಪೆಕ್ಟರ್ ರಾಜೀವ್ ಗುಂಡು ಹಾರಿಸಿ ಬಂಧಿಸಿದ್ದಾರೆ ಎಂದು ನಗರ ಪಶ್ಚಿಮ ವಿಭಾಗದ ಡಿಸಿಪಿ ಸಂಜೀವ್ ಪಾಟೀಲ್ ತಿಳಿಸಿದ್ದಾರೆ.