ಬೆಂಗಳೂರು: ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಹಿರಿಯ ವಿಜ್ಞಾನಿ ಕೆ.ಎಸ್.ಪ್ರತಿಮಾ (37) ಹತ್ಯೆ ಪ್ರಕರಣದ ಆರೋಪಿ ಕಿರಣ್, ಉದ್ದೇಶಪೂರ್ವಕವಾಗಿ ಸಂಚು ರೂಪಿಸಿ ಕೃತ್ಯ ಎಸಗಿರುವುದು ಪೊಲೀಸರ ತನಿಖೆ ವೇಳೆ ಬಯಲಾಗಿದೆ. ಆರಂಭಿಕ ತನಿಖೆಯಲ್ಲಿ "ಕೆಲಸಕ್ಕೆ ಪುನಃ ನೇಮಿಸಿಕೊಳ್ಳಲು ಒಪ್ಪದಿದ್ದಾಗ ಕೋಪದಿಂದ ಕೃತ್ಯ ಎಸಗಿದ್ದೆ" ಎಂದಿದ್ದ ಕಿರಣ್, ಸಂಚು ರೂಪಿಸಿ ಹತ್ಯೆಗೈದು ಬಳಿಕ ಮನೆಯಲ್ಲಿದ್ದ 5 ಲಕ್ಷ ನಗದು, 4 ಲಕ್ಷ ರೂ ಮೌಲ್ಯದ ಚಿನ್ನಾಭರಣ ದೋಚಿದ್ದ ಎಂಬುದು ಪೊಲೀಸರ ತನಿಖೆ ವೇಳೆ ತಿಳಿದು ಬಂದಿದೆ.
ಕೃತ್ಯದ ಬಳಿಕ ಚಾಮರಾಜನಗರದ ಮಲೆ ಮಹದೇಶ್ವರ ಬೆಟ್ಟಕ್ಕೆ ಹೋಗಿದ್ದ ಆರೋಪಿ ಕಿರಣ್‌ನನ್ನು ಬೆಂಗಳೂರು ದಕ್ಷಿಣ ವಿಭಾಗದ ಪೊಲೀಸರ ವಿಶೇಷ ತಂಡ ಬಂಧಿಸಿತ್ತು. ವಿಚಾರಣೆ ವೇಳೆ ಆರೋಪಿಯು "ಕೆಲಸದಿಂದ ತೆಗೆದಿದ್ದಕ್ಕೆ ಕ್ಷಮಿಸಿ ಮತ್ತೆ ಕೆಲಸಕ್ಕೆ ನೇಮಿಸಿಕೊಳ್ಳಿ ಎಂದಿದ್ದೆ. ಅದಕ್ಕೆ ಅವರು ಒಪ್ಪದೇ ಇದ್ದಾಗ ಹತ್ಯೆಗೈದಿದ್ದೆ. ನಂತರ ಮಲೆ ಮಹದೇಶ್ವರ ಬೆಟ್ಟಕ್ಕೆ ಹೋಗಿದ್ದೆ" ಎಂದಿದ್ದ. ಅರೋಪಿಯನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಿದ್ದ ಪೊಲೀಸರು ಕಸ್ಟಡಿಗೆ ಪಡೆದು ವಿಚಾರಣೆ ನಡೆಸಿದಾಗ ಬೇರೆಯದ್ದೇ ಕಥೆ ಬಯಲಾಗಿದೆ.
ಹಣ ಹಾಗೂ ಚಿನ್ನಾಭರಣ ದೋಚುವ ಉದ್ದೇಶದಿಂದ ಪ್ರತಿಮಾರನ್ನು ಹತ್ಯೆಗೈಯ್ಯಲು ಸಂಚು ರೂಪಿಸಿದ್ದ ಕಿರಣ್, ಮೊದಲು ಹತ್ಯೆಗೈದು ನಂತರ ಪ್ರತಿಮಾರ ಕೈಯಲ್ಲಿದ್ದ ಎರಡು ಚಿನ್ನದ ಬಳೆ ಒಂದು ಬ್ರೇಸ್ ಲೈಟ್ ಹಾಗೂ ಮನೆಯಲ್ಲಿದ್ದ ನಗದು ದೋಚಿದ್ದ. ಬಳಿಕ ಆ ಹಣ ಹಾಗೂ ಚಿನ್ನಾಭರಣವನ್ನು ಕೋಣನಕುಂಟೆಯ ನಿವಾಸಿಯಾಗಿದ್ದ ತನ್ನ ಗೆಳೆಯ ಶಿವು ಎಂಬಾತನಿಗೆ ನೀಡಿ "ನನಗೆ ಯಾರೋ ಕೊಡಬೇಕಿತ್ತು. ಸದ್ಯಕ್ಕೆ ಇದು ನಿಮ್ಮ ಮನೆಯಲ್ಲಿ ಇರಲಿ. ನಾನು ಮಲೆ ಮಹದೇಶ್ವರ ಬೆಟ್ಟಕ್ಕೆ ಹೋಗಿ ಬಂದ ಬಳಿಕ ವಾಪಾಸ್ ತೆಗೆದುಕೊಂಡು ಹೋಗುತ್ತೇನೆ" ಎಂದಿದ್ದ. ಸದ್ಯ ಇನ್ಸ್‌ಪೆಕ್ಟರ್ ಜಗದೀಶ್ ನೇತೃತ್ವದ ತನಿಖೆಯಲ್ಲಿ ಆರೋಪಿ ಕಿರಣ್ ಈ ವಿಚಾರವನ್ನ ಬಾಯ್ಬಿಟ್ಟಿದ್ದಾನೆ.
ಹಣ ಹಾಗೂ ಚಿನ್ನಾಭರಣವನ್ನು ಆರೋಪಿಯು ದೋಚಿದ್ದ ಎಂಬುದು ಬಯಲಾಗುತ್ತಿದ್ದಂತೆ, ಆರೋಪಿಯ ಸ್ನೇಹಿತ ಶಿವುನನ್ನ ವಶಕ್ಕೆ ಪಡೆದು ಹೇಳಿಕೆ ದಾಖಲಿಸಿರುವ ಪೊಲೀಸರು, ಆತನನ್ನು ಸಾಕ್ಷಿಯನ್ನಾಗಿ ಪರಿಗಣಿಸಿ ಐದು ಲಕ್ಷ ನಗದು ಮತ್ತು ಚಿನ್ನಾಭರಣ ವಶಕ್ಕೆ ಪಡೆದುಕೊಂಡಿದ್ದಾರೆ.
ದೊಡ್ಡಕಲ್ಲಸಂದ್ರದ ಗೋಕುಲ ಅಪಾರ್ಟ್ಮೆಂಟಿನಲ್ಲಿ ನ.4 ರ ರಾತ್ರಿ 8:30ರ ಸುಮಾರಿಗೆ ಮನೆಗೆ ನುಗ್ಗಿ ಚಾಕು ಇರಿದು ಹತ್ಯೆ ಮಾಡಿದ್ದ. ಮೂಲತಃ ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನ ತುಡ್ಕಿ ಮೂಲದ ಪ್ರತಿಮಾ ಅವರಿಗೆ ಭೂ ವಿಜ್ಞಾನ ಇಲಾಖೆಯಲ್ಲಿ ನೌಕರಿ ದೊರೆತಿದ್ದರಿಂದ ಬೆಂಗಳೂರಲ್ಲಿ ವಾಸಿಸುತ್ತಿದ್ದರು. ಗಂಡ ಮತ್ತು ಮಗ ತೀರ್ಥಹಳ್ಳಿಯಲ್ಲೇ ವಾಸವಿದ್ದರು.
ಇದನ್ನೂ ಓದಿ: ಹಿರಿಯ ಭೂ ವಿಜ್ಞಾನಿ ಪ್ರತಿಮಾ ಹತ್ಯೆ ಪ್ರಕರಣ: ಮಾಜಿ ಕಾರು ಚಾಲಕನ ಬಂಧನ