ಬೆಂಗಳೂರು: 2021ರ ಸೆಪ್ಟೆಂಬರ್ನಲ್ಲಿ ನಗರದ ನ್ಯೂ ತರಗುಪೇಟೆ ಪಂಕ್ಚರ್ ಅಂಗಡಿಯಲ್ಲಿ ಸಂಭವಿಸಿದ್ದ ಸ್ಫೋಟ ಪ್ರಕರಣ ಸಂಬಂಧ ವಿಧಿವಿಜ್ಞಾನ ಪ್ರಯೋಗಾಲಯದ ವರದಿ ಪೊಲೀಸರ ಕೈಸೇರಿದೆ. ಈ ಸ್ಫೋಟದ ತೀವ್ರತೆಗೆ ಮೂವರು ಬಲಿಯಾಗಿದ್ದು, ಕಾರಣ ಹುಡುಕಿ, ಪೊಲೀಸರು ವಿಧಿವಿಜ್ಞಾನ ಪ್ರಯೋಗಾಲಯದ ಮೊರೆ ಹೋಗಿದ್ದರು.
2021ರ ಸೆಪ್ಟೆಂಬರ್ 23ರಂದು ಬೆಂಗಳೂರಿನ ವಿ.ವಿ.ಪುರಂ ಪೊಲೀಸ್ ಠಾಣೆ ವ್ಯಾಪ್ತಿಯ ನ್ಯೂ ತರಗುಪೇಟೆ ಬಳಿ ಈ ಭಯಾನಕ ಸ್ಫೋಟ ಸಂಭವಿಸಿತ್ತು. ಅಸ್ಲಾಂ ಪಾಷಾ ಎಂಬವರ ಪಂಕ್ಚರ್ ಅಂಗಡಿಯಲ್ಲಿ ಸ್ಫೋಟ ಸಂಭವಿಸಿ ಮನೋಹರ್, ಅಸ್ಲಾಂ ಪಾಷಾ ಸೇರಿದಂತೆ ಮೂವರು ಸಾವನ್ನಪ್ಪಿದ್ದರು. ಉಳಿದ ಇಬ್ಬರು ಗಂಭೀರವಾಗಿ ಗಾಯಗೊಂಡಿದ್ದರು. ಸ್ಫೋಟಕ್ಕೆ ಅಂಗಡಿಯಲ್ಲಿದ್ದ 60 ಬಾಕ್ಸ್ ಪಟಾಕಿಯೇ ಕಾರಣ ಎಂಬ ಅಂಶ ಮೇಲ್ನೋಟಕ್ಕೆ ಕಂಡುಬಂದಿತ್ತು.
ದಕ್ಷಿಣ ವಿಭಾಗದ ಪೊಲೀಸರು ಸ್ಫೋಟದ ಕಾರಣ ತಿಳಿಯಲು ಘಟನಾ ಸ್ಥಳದಿಂದ ಆಯ್ದ ವಸ್ತುಗಳನ್ನು ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಿದ್ದರು. ಇದೀಗ ಪ್ರಯೋಗಾಲಯದ ವರದಿ ಪೊಲೀಸರಿಗೆ ಸಿಕ್ಕಿದ್ದು, ಅಲ್ಲಿಯೂ ಕೂಡ ಕಾರಣ ತಿಳಿದುಬಂದಿಲ್ಲ.
ಪಟಾಕಿ ಅಂಶ ಸ್ಫೋಟದ ಹಿಂದಿಲ್ಲ: ವಿಧಿವಿಜ್ಞಾನ ಪ್ರಯೋಗಾಲಯದ ಕೆಮಿಕಲ್ ಸೆಕ್ಷನ್ನಿಂದ ವರದಿ ಬಂದಿದೆ. ಪೊಲೀಸರು ಚೀನಿ ಪಟಾಕಿಯಲ್ಲಿ ಬಳಸುವ ಪೊಟ್ಯಾಸಿಯಂ ಕ್ಲೋರೈಡ್ ಅಂಶ ಸ್ಫೋಟದ ಪಳೆಯುಳಿಕೆಯ ವಸ್ತುಗಳಲ್ಲಿ ಕಂಡುಬಂದಿಲ್ಲ. ಚೀನಿ ಪಟಾಕಿ ಭಾರತದಲ್ಲಿ ಬ್ಯಾನ್ ಆಗಿದ್ದು, ಆ ರಾಸಾಯನಿಕ ಬಳಸಲಾಗಿದೆಯಾ ಎಂಬ ಪ್ರಶ್ನೆಗೆ ಎಫ್ಎಸ್ಎಲ್ ಕೆಮಿಕಲ್ ಸೆಕ್ಷನ್ ಇಲ್ಲ ಎಂಬ ಉತ್ತರ ನೀಡಿದೆ.
ಅದೇ ರೀತಿ ವರದಿಯಲ್ಲಿ ನಮ್ಮ ದೇಶದಲ್ಲಿ ಬಳಸುವ ಪೊಟ್ಯಾಸಿಯಂ ನೈಟ್ರೇಟ್ ವಸ್ತು ಕಂಡು ಬಂದಿರುವುದು ಖಚಿತವಾಗಿದೆ. ಆದರೆ, ಪೊಲೀಸರು ಇದೀಗ ಮತ್ತೆ ಸ್ಫೋಟದ ಹಿಂದಿನ ಅಸಲಿ ಕಾರಣ ತಿಳಿಯಲು ಎಫ್ಎಸ್ಎಲ್ ಫೈಯರ್ ಸೆಕ್ಷನ್ಗೆ ವರದಿ ನೀಡುವಂತೆ ಕೇಳಿದ್ದಾರೆ.
ಪಟಾಕಿಯೊಂದು ಇಷ್ಟು ದೊಡ್ಡ ಪ್ರಮಾಣದಲ್ಲಿ ಸಿಡಿದು ಪ್ರಾಣಕ್ಕೆ ಸಂಚಕಾರ ತಂದಿದೆಯಾ ಎಂಬುದರ ಬಗ್ಗೆ ಸ್ವತಃ ಪೊಲೀಸರಿಗೆ ಅನುಮಾನವಿದೆ. ಎಫ್ಎಸ್ಎಲ್ನ ಇನ್ನೊಂದು ವರದಿ ಪೊಲೀಸರ ಕೈಸೇರುವವರೆಗೂ ಸ್ಫೋಟದ ಅಸಲಿಯತ್ತು ತಿಳಿಯುವುದಿಲ್ಲ.
ಇದನ್ನೂ ಓದಿ: ಬೆಂಗಳೂರಲ್ಲಿ ಭಾರೀ ಸ್ಫೋಟ: ಇಬ್ಬರು ದುರ್ಮರಣ, ಪಕ್ಕದ ಮನೆಗಳಿಗೆ ಹಾನಿ