ಬೆಂಗಳೂರು : ರಾಜಧಾನಿಯಲ್ಲಿ ತೀವ್ರ ಆತಂಕಕ್ಕೆ ಕಾರಣವಾಗಿದ್ದ ಬಾಂಬ್ ಬೆದರಿಕೆ ಕರೆ ಹುಸಿಯಾಗಿದ್ದು, ಪೋಷಕರು ಹಾಗೂ ಶಾಲಾ ಆಡಳಿತ ಮಂಡಳಿಗಳು ನಿಟ್ಟುಸಿರು ಬಿಟ್ಟಿವೆ. ಬಾಂಬ್ ನಿಷ್ಕ್ರಿಯ ದಳ ಪರಿಶೀಲಿಸಿದ ಬಳಿಕ ಇದೊಂದು ಹುಸಿ ಬಾಂಬ್ ಕರೆ ಎಂದು ಗೊತ್ತಾಗುತ್ತಿದ್ದಂತೆ ತುಂಬಿಕೊಂಡಿದ್ದ ದುಗುಡ ದೂರವಾಗಿದೆ.
ಈ ಬಗ್ಗೆ ನಗರ ಪೊಲೀಸ್ ಆಯುಕ್ತ ಬಿ. ದಯಾನಂದ ಮಾತನಾಡಿ, ನಗರದ 48 ಖಾಸಗಿ ಶಾಲೆಗಳಿಗೆ ಇಮೇಲ್ ಮೂಲಕ ಬಾಂಬ್ ಬೆದರಿಕೆ ಸಂದೇಶ ಬಂದಿತ್ತು. ಕೂಡಲೇ ಎಲ್ಲ ಶಾಲೆಗಳಿಗೂ ಬಾಂಬ್ ನಿಷ್ಕ್ರಿಯ ದಳದವರು ಸ್ಥಳಕ್ಕೆ ದೌಡಾಯಿಸಿ ಪರಿಶೀಲಿಸದ ಬಳಿಕ ಹುಸಿ ಬಾಂಬ್ ಕರೆ ಎಂದು ಗೊತ್ತಾಗಿದೆ. ಇದರ ಹಿಂದಿನ ಹುನ್ನಾರ ಏನು ಎಂಬುದರು ತನಿಖೆ ನಡೆಸಲಾಗುತ್ತಿದೆ.
ಮೇಲ್ನೊಟಕ್ಕೆ ಕಿಡಿಗೇಡಿಗಳು ಕೃತ್ಯ ಎಸೆಗಿರುವ ಬಗ್ಗೆ ಶಂಕೆ ವ್ಯಕ್ತವಾಗಿದೆ. ಮಲೇಷ್ಯಾ ಜರ್ಮಿನಿ ದೇಶಗಳಿಗೆ ಈ ರೀತಿ ಬೆದರಿಕೆ ಬಂದಿರುವುದು ಮಾಧ್ಯಮಗಳ ಮೂಲಕ ಗೊತ್ತಾಗಿದೆ. ಪೋನ್ ಕರೆ ಮೂಲಕ ಬಂದ ಬೆದರಿಕೆ ಪ್ರಕರಣವನ್ನು ಈ ಹಿಂದೆ ಪತ್ತೆ ಮಾಡಲಾಗಿತ್ತು. ಆದರೇ, ಇಮೇಲ್ ಮೂಲಕ ಬಂದಿರುವುದರಿಂದ ಪ್ರಕರಣ ಬೇಧಿಸುವುದು ಕೊಂಚ ತಡವಾಗಲಿದೆ ಎಂದು ತಿಳಿಸಿದ್ದಾರೆ.
ಪ್ರಕರಣ ಗಂಭೀರವಾಗಿ ತೆಗೆದುಕೊಂಡಿದ್ದೇವೆ ಎಂದ ಗೃಹ ಸಚಿವರು: ಶಾಲೆಗಳಿಗೆ ಬಾಂಬ್ ಬೆದರಿಕೆ ಸಂಬಂಧ ವಿಧಾನಸೌಧದಲ್ಲಿ ಪೊಲೀಸ್ ಮಹಾನಿರ್ದೇಶಕ, ಬೆಂಗಳೂರು ನಗರ ಪೊಲೀಸ್ ಆಯಕ್ತರು ಜೊತೆ ಗೃಹ ಸಚಿವ ಡಾ. ಜಿ.ಪರಮೇಶ್ವರ್ ಸಭೆ ನಡೆಸಿದರು. ಸಭೆಗೂ ಮುನ್ನ ಮಾತನಾಡಿದ ಅವರು, ಉದ್ದೇಶಪೂರ್ವಕವಾಗಿ ಈ ರೀತಿ ಮಾಡುತ್ತಿದ್ದಾರಾ, ಏನು ಮಾಡ್ತಾ ಇದ್ದಾರೆ ಗೊತ್ತಿಲ್ಲ. ನಾವು ಇದನ್ನು ಗಂಭೀರವಾಗಿ ತೆಗೆದುಕೊಂಡಿದ್ದೇವೆ ಎಂದರು.
ತುಮಕೂರು ಜಿಲ್ಲೆಯ ಆರೋಗ್ಯ ತಪಾಸಣೆ ಯೋಜನೆ ಪ್ರಾರಂಭಕ್ಕೆ ಹೋಗಿದ್ದೆ. ದಾರಿಯಲ್ಲಿ ನಾನು ಹೋಗುತ್ತಿದ್ದಾಗ ಮಾಹಿತಿ ಬಂತು. ನನಗೆ ಬೆಳಗ್ಗೆ ಮಾಹಿತಿ ಇರಲಿಲ್ಲ. ಮಾಹಿತಿ ಬಂದ ಕೂಡಲೇ ಡಿಜಿ, ಕಮಿಷನರ್ ಜೊತೆಗೆ ಮಾತಾಡಿದ್ದು, ತಕ್ಷಣ ಬಾಂಬ್ ಸ್ಕ್ವಾಡ್ ಗೆ ಕಳಿಸಿದ್ದೇವೆ. ಸುಳ್ಳು ಅಂತ ಹೇಳ್ತಾರೆ. ಅದ್ರೆ ನಾವು ಲಘುವಾಗಿ ತೆಗೆದುಕೊಳ್ಳೋಕೆ ಆಗಲ್ಲ ಎಂದು ತಿಳಿಸಿದರು.
ನಾನು ಈಗ ಅಧಿಕಾರಿಗಳ ಜೊತೆ ಮಾತಾನಾಡುತ್ತೇನೆ. ಡಿಜಿಐಜಿಪಿ, ಪೊಲೀಸ್ ಕಮಿಷನರ್, ಅಡಿಷನಲ್ ಕಮಿಷನ್, ಎಸಿಎಸ್, ಗೃಹ ಇಲಾಖೆ ಕಾರ್ಯದರ್ಶಿಯನ್ನು ಸಭೆಗೆ ಕರೆದಿದ್ದೇನೆ. ಕೆಳಹಂತದ ಅಧಿಕಾರಿಗಳನ್ನು ಕರೆಯುವ ಅವಶ್ಯಕತೆ ಇಲ್ಲ. ಇಲ್ಲಿಯವರೆಗೆ ಏನು ಮಾಹಿತಿ ಸಿಕ್ಕಿದೆ ಎಂಬುದನ್ನು ಚರ್ಚೆ ಮಾಡ್ತೀವಿ. ಏನು ಕ್ರಮಗಳನ್ನು ತೆಗೆದುಕೊಳ್ಳಬೇಕು ಅದನ್ನ ಮಾಡುತ್ತೇವೆ ಎಂದರು.
ಶಾಲೆಗಳ ಜೊತೆ ಪ್ರಾರ್ಥನಾ ಮಂದಿರಗಳಿಗೂ ಬೆದರಿಕೆ ವಿಚಾರವಾಗಿ ಪ್ರತಿಕ್ರಿಯಿಸುತ್ತ, ನೋಡೋಣ ಏನು ಇದೆ ಅಂತ. ಅದನ್ನು ಪತ್ತೆ ಮಾಡುತ್ತೇವೆ. ಒಂದು ಬಾರಿ ಸುಳ್ಳು ಆಗಬಹುದು, ಎರಡು ಬಾರಿ ಸುಳ್ಳು ಆಗಬಹುದು. ಆದರೆ, ಮೂರನೇ ಬಾರಿ ಅವರು ಯಶಸ್ವಿಯಾಗಬಹುದು. ಕಳೆದ ವರ್ಷವೂ ಬೆದರಿಕೆ ಕರೆ ಮಾಡಿದ್ದರು, ಈ ವರ್ಷವೂ ಮಾಡಿದ್ದಾರೆ. ನಾವು ಯಾವುದೇ ಚಾನ್ಸ್ ತೆಗೆದುಕೊಳ್ಳಲ್ಲ ಎಂದು ತಿಳಿಸಿದರು.
ಹುಸಿ ಬಾಂಬ್ ಬೆದರಿಕೆ ಬಂದ ಶಾಲೆಗಳು : ಬನ್ನೇರುಘಟ್ಟ ಸಮೀಪದ ದಿನ್ನೇಪಾಳ್ಯದ ಗ್ರೀನ್ ಹುಡ್ ಹೈಸ್ಕೂಲ್, ಗ್ಲೋಬಲ್ ಇಂಟರ್ ನ್ಯಾಷನಲ್ ಶಾಲೆ, ರಾಯನ್ ಇಂಟರ್ನ್ಯಾಷನಲ್ ಶಾಲೆ, ಆಲ್ ಬಷೀರ್ ಶಾಲೆ, ದೀಕ್ಷಾ ಹೈಟ್ ಶಾಲೆ, ಕಾಂಡರ್ ಇಂಟರ್ನ್ಯಾಷನಲ್ ಶಾಲೆ ಮತ್ತು ಬಿವಿಎಂ ಗ್ಲೋಬಲ್ ಶಾಲೆಗೆ ಹುಸಿ ಬಾಂಬ್ ಕರೆ ರವಾನೆಯಾದರೆ, ಹೆಬ್ಬಗೋಡಿಯ ಡಿವೈನ್ ಇಂಟರ್ನ್ಯಾಷನಲ್ ಶಾಲೆ, ಟ್ರೀಮೈಸ್ ಇಂಟರ್ನ್ಯಾಷನಲ್ ಶಾಲೆ, ಫ್ಲಾರೆನ್ಸ್ ಇಂಟರ್ನ್ಯಾಷನಲ್ ಶಾಲೆ, ಎಬೆನ್ಸರ್ ಇಂಟರ್ನ್ಯಾಷನಲ್ ಶಾಲೆ ಸೇರಿ ಸೇರಿ ಇಲ್ಲಿ ಒಟ್ಟು ನಾಲ್ಕು ಶಾಲೆಗಳಿಗೆ ಹುಸಿ ಬಾಂಬ್ ಕರೆ ಬಂದಿದೆ.
ಸರ್ಜಾಪುರದ ಗ್ರೀನ್ ಹುಡ್ ಇಂಟರ್ನ್ಯಾಷನಲ್ ಹೈಸ್ಕೂಲ್, ಗ್ಲೋಬಲ್ ಇಂಡಿಯನ್ ಇಂಟರ್ನ್ಯಾಷನಲ್ ಶಾಲೆ, ಓಕರಿಡ್ಜ್ ಶಾಲೆ, ಟಿಐಎಸ್ಬಿ ಶಾಲೆ, ಇನ್ವೆಂಚರ್ ಅಕಾಡೆಮಿ, ಜಿಗಣಿಯ ಅಚೀವರ್ಸ್ ಅಕಾಡೆಮಿ ಮತ್ತು ಎನ್ಡೆವರ್ಸ್ ಅಕಾಡೆಮಿ ಶಾಲೆಗೆ ಹುಸಿ ಬಾಂಬ್ ಕರೆ ಬಂದಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಆನೇಕಲ್ ತಾಲೂಕಿನ 18 ಶಾಲೆ ಸೇರಿ ಒಟ್ಟು 48 ಖಾಸಗಿ ಶಾಲೆಗಳಿಗೆ ಇಮೇಲ್ ಮೂಲಕ ಹುಸಿ ಬಾಂಬ್ ಬೆದರಿಕೆ ಕರೆ ಬಂದಿದೆ.
ಯಾವ ವಲಯದಲ್ಲಿ ಎಷ್ಟು ಶಾಲೆಗಳಿಗೆ ಬೆದರಿಕೆ?
- ಬೆಂಗಳೂರು ಉತ್ತರ ವಲಯ 1: 4 ಶಾಲೆ
- ಬೆಂಗಳೂರು ಉತ್ತರ ವಲಯ 2: 2 ಶಾಲೆ
- ಬೆಂಗಳೂರು ಉತ್ತರ ವಲಯ 4: 01 ಶಾಲೆ
- ಬೆಂಗಳೂರು ದಕ್ಷಿಣ ವಲಯ 1: 15 ಶಾಲೆ
- ಬೆಂಗಳೂರು ದಕ್ಷಿಣ ವಲಯ 2: 03 ಶಾಲೆ
- ಬೆಂಗಳೂರು ದಕ್ಷಿಣ ವಲಯ 3: 10 ಶಾಲೆ
- ಬೆಂಗಳೂರು ದಕ್ಷಿಣ ವಲಯ 4: 04 ಶಾಲೆ
ಇದನ್ನೂ ಓದಿ : ಬೆಂಗಳೂರು: ಯಾವ ವಲಯದಲ್ಲಿ ಎಷ್ಟು ಶಾಲೆಗಳಿಗೆ ಬಾಂಬ್ ಬೆದರಿಕೆ ಇಮೇಲ್?