ಬೆಂಗಳೂರು: ಆರನೇ ವೇತನ ಆಯೋಗ ಜಾರಿ ಸೇರಿ ವಿವಿಧ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ನಾಳೆಯಿಂದ ಸಾರಿಗೆ ನೌಕರರ ಸಂಘಟನೆ ಕರೆ ನೀಡಿರುವ ಸಾರಿಗೆ ಮುಷ್ಕರಕ್ಕೆ ಬ್ರೇಕ್ ಹಾಕಲು ನಗರ ಪೊಲೀಸ್ ಇಲಾಖೆ ಮುಂದಾಗಿದ್ದು, ಕೋವಿಡ್ ಶಿಷ್ಟಾಚಾರದಂತೆ ನಾಳೆಯಿಂದ ಏ.21 ರ ವರೆಗೆ ನಿಷೇದಾಜ್ಞೆ ಜಾರಿಗೊಳಿಸಿ ಆದೇಶಿದೆ.
ಈ ಕುರಿತು ಮಾತನಾಡಿದ ನಗರ ಪೊಲೀಸ್ ಆಯುಕ್ತ ಕಮಲ್ ಪಂತ್, ಕೊರೊನಾ ಸೋಂಕು ನಿಯಂತ್ರಿಸಲು ಈಗಾಗಲೇ ಹೊರಡಿಸಿರುವ ಕೋವಿಡ್ ಶಿಷ್ಟಾಚಾರ ಜಾರಿಯಲ್ಲಿದೆ. ಇದಕ್ಕೆ ಪೂರಕವಾಗಿ ಏ.21 ರ ವರೆಗೆ ನಗರದಲ್ಲಿ 144 ಸೆಕ್ಷನ್ ಜಾರಿಗೊಳಿಸಲಾಗಿದೆ. ಇದರಂತೆ ಯಾರೂ ಸಹ ಪ್ರತಿಭಟನೆ, ಮುಷ್ಕರ ಮಾಡುವಂತಿಲ್ಲ. ಇದುವರೆಗೂ ಪ್ರತಿಭಟನೆಗೆ ಅನುಮತಿ ಕೇಳಿಲ್ಲ. ಒಂದು ವೇಳೆ ಪ್ರತಿಭಟನೆ ಮಾಡಿದರೂ ಮುಲಾಜಿಲ್ಲದೇ ಬಂಧಿಸಲಾಗುವುದು ಎಂದು ಎಚ್ಚರಿಸಿದ್ದಾರೆ.
ಇದನ್ನೂ ಓದಿ: ಮುಷ್ಕರಕ್ಕೆ ಮೂಗುದಾರ! ಸಾರಿಗೆ ನೌಕರರ ರಜೆ ರದ್ದುಗೊಳಿಸಿ ಕೆಎಸ್ಆರ್ಟಿಸಿ ಆದೇಶ
ಕರ್ತವ್ಯಕ್ಕೆ ಹಾಜರಾಗುವವರಿಗೆ ಆರ್ಮ್ ಎಸ್ಕಾರ್ಟ್ನಲ್ಲಿ ಭದ್ರತೆ: ಅಹಿತಕರ ಘಟನೆಗೆ ಆಸ್ಪದ ನೀಡಿದರೆ ಅಂತಹವರನ್ನು ಬಂಧಿಸುವ ಕೆಲಸ ಮಾಡಲಿದ್ದೇವೆ. ಈಗಾಗಲೇ ನಗರದಲ್ಲಿ ಸೂಕ್ತ ಪೊಲೀಸ್ ಬಂದೋಬಸ್ತ್ ಮಾಡಲು ಸಿದ್ಧತೆ ಕೈಗೊಂಡಿದ್ದೇವೆ. ಕರ್ತವ್ಯಕ್ಕೆ ಹಾಜರಾಗುವವರಿಗೆ ಆರ್ಮ್ ಎಸ್ಕಾರ್ಟ್ನಲ್ಲಿ ಭದ್ರತೆ ಕೊಡುತ್ತೇವೆ. ಸಾರಿಗೆ ನೌಕರರು ಕೆಲಸಕ್ಕೆ ಬರೋದು ಬಿಡೋದು ಅವರಿಗೆ ಸಂಬಂಧಿಸಿದ್ದು. ಆದರೆ, ರಸ್ತೆಗಿಳಿದು ಕಲ್ಲು ತೂರಾಟ ಮಾಡಿ, ರಸ್ತೆ ತಡೆ ಮಾಡಿದರೆ ತಕ್ಕ ಶಾಸ್ತಿ ಮಾಡುತ್ತೇವೆ ಎಂದು ಪೊಲೀಸ್ ಆಯುಕ್ತರು ವಾರ್ನಿಂಗ್ ಕೊಟ್ಟಿದ್ದಾರೆ.
ಖಾಸಗಿಯವರು ಸಹಕಾರ ನೀಡಿದರೆ ತೊಂದರೆ ಆಗದಂತೆ ನೋಡಿಕೊಳುತ್ತೇವೆ: ಏ.21 ರ ವರೆಗೆ ಕೋವಿಡ್ ಪ್ರೋಟೋಕಾಲ್ ಜಾರಿಯಲ್ಲಿದೆ. ಈಗಾಗಲೇ ಸಂಬಂಧಪಟ್ಟ ಅಧಿಕಾರಿಗಳ ಜೊತೆ ಮಾತುಕತೆ ನಡೆದಿದೆ. ನಾಳೆ ಬಸ್ ಇಲ್ಲದಿದ್ದರೆ ಖಾಸಗಿಯವರು ಸಹಕಾರ ನೀಡಿದರೆ ಅವರಿಗೆ ಯಾವುದೇ ತೊಂದರೆ ಆಗದಂತೆ ನೋಡಿಕೊಳುತ್ತೇವೆ ಎಂದು ತಿಳಿಸಿದ್ದಾರೆ.